ಹೊನ್ನಾವರ: ಕೃಷಿ ಮತ್ತು ಕುಡಿಯುವ ನೀರಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ತಾಲೂಕಿನ ಸಾವಿರಾರು ಜನರು ನಗರದಲ್ಲಿ ಒಂದೆಡೆ ಸೇರಿ ಶರಾವತಿ ಪಂಪ್ ಸ್ಟೋರೇಜ್ ವಿದ್ಯುತ್ ನಿರ್ಮಾಣದ ವಿರುದ್ಧ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಶರಾವತಿ ನದಿ ಉಳಿಸಿ ಹೋರಾಟ ಸಮಿತಿಯು ಪ್ರತಿಭಟನಾ ಜಾಥಾ ಶರಾವತಿ ವೃತ್ತದಿಂದ ತಹಶೀಲ್ದಾರ ಕಚೇರಿಯವರಿಗೆ ತಲುಪಿ, ಕಚೇರಿಯಲ್ಲಿ ನಡೆಯುತ್ತಿದ್ದ ಭೂಸ್ವಾಧೀನ ಪ್ರಕ್ರಿಯೆ ಸಭೆ ಮುಂದೂಡುವಂತೆ ಒತ್ತಾಯಿಸಿದರು.ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶದ 7 ಕಿ.ಮೀ. ಉದ್ದಕ್ಕೆ ಮತ್ತು ನೆಲಮಟ್ಟದಿಂದ 50ರಿಂದ 430 ಮೀಟರ್ ಆಳದಲ್ಲಿ ಸುರಂಗ ಕೊರೆದು ಭೂಗತ ಜಲವಿದ್ಯುತ್ ಸ್ಥಾವರ ನಿರ್ಮಾಣ ಮಾಡುವ ಕೆಪಿಸಿಯ ಉದ್ದೇಶಿತ ಶರಾವತಿ ಪಂಪ್ ಸ್ಟೋರೇಜ್ ವಿದ್ಯುತ್ ಯೋಜನೆಯನ್ನು ಅನುಷ್ಠಾನ ಮಾಡಿದರೆ ಭವಿಷ್ಯದಲ್ಲಿ ಭೂಸಡಿಲಿಕೆಯಂತಹ ಅಪಾಯದ ಜೊತೆಯಲ್ಲಿ, ಅರಣ್ಯ ಮತ್ತು ಪರಿಸರ ನಾಶ ನಿಶ್ಚಿತವಾಗುವ ಆತಂಕವಿದೆ ಎಂದರು.ಡಾ.ಕಸ್ತೂರಿ ರಂಗನ್ ಆಯೋಗದ ವರದಿಯಲ್ಲಿಯೂ ಪಶ್ಚಿಮಘಟ್ಟದ ಹಲವು ಪರಿಸರ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಿದರೂ ಯೋಜನೆಗೆ ಕೇಂದ್ರ ಅರಣ್ಯ ಮಂತ್ರಾಲಯ ಅನುಮತಿ ನೀಡಿರುವುದು ಸರಿಯಲ್ಲ. ಅಮೆರಿಕ, ಜಪಾನ್ ಮುಂತಾದ ಹಲವು ಮುಂದುವರಿದ ದೇಶಗಳು ಜಲವಿದ್ಯುತ ಯೋಜನೆಗಳನ್ನು ಕೈಬಿಡುತ್ತಿದ್ದು, ಜನರ ಸುರಕ್ಷತೆಯ ಹಿತ ದೃಷ್ಟಿಯಿಂದ ಅಲ್ಲಿ ಈಗ ಇರುವ ಅಣೆಕಟ್ಟುಗಳನ್ನು ಒಂದೊಂದಾಗಿ ಒಡೆದು ಹಾಕುತ್ತಿದ್ದಾರೆ. ಅವು ಈಗ ಬದಲಿ ಇಂದನ ಮೂಲಗಳ ಮೊರೆಹೋಗುತ್ತಿವೆ ಎಂದರು.
ಈ ನಡುವೆ ಪಶ್ಚಿಮಘಟ್ಟ ಪ್ರದೇಶದಲ್ಲಿ ನಡೆದಿರುವ ಇತ್ತೀಚಿನ ವಯನಾಡು ದುರಂತ, ಶಿರೂರು ಸಹಿತ ವಿವಿಧೆಡೆಯ ಗುಡ್ಡ ಕುಸಿತಗಳು, ಭೂ ಸೀಳುವಿಕೆಗಳಿಂದ ಸಾಕಷ್ಟು ಸಾವು- ನೋವುಗಳು ಸಂಭವಿಸಿದ ಮೇಲೂ ಉದ್ದೇಶಿತ ಯೋಜನೆಯನ್ನು ಏಕಪಕ್ಷೀಯವಾಗಿ ಜನರಮೇಲೆ ಹೇರುವ ಸರ್ಕಾರಗಳ ಕ್ರಮ ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಶರಾವತಿ ನದಿ ನೀರಿಗೆ ಗೇರುಸೊಪ್ಪಾವರೆಗೂ ಉಪ್ಪುನೀರಿನ ಸೇರುವಿಕೆಯ ಆತಂಕವಿದೆ. ಸಮುದ್ರದ ಉಪ್ಪುನೀರು ಸೇರ್ಪಡೆಯಾಗುತ್ತಿರುವುದರಿಂದ ನದಿಪಾತ್ರದ ಹಲವೆಡೆ ರೈತರು ಈಗಾಗಲೇ ಬವಣೆ ಪಡುತ್ತಿದ್ದಾರೆ. ಮುಂದೆ ಈ ಯೋಜನೆಯ ಅನುಷ್ಠಾನದಿಂದ ಗೇರುಸೊಪ್ಪವರೆಗೆ ಸಮುದ್ರದ ಉಪ್ಪುನೀರು ನದಿಗೆ ಸೇರಿ ಕೃಷಿ ಮತ್ತು ಕುಡಿಯುವ ನೀರಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ಹೊನ್ನಾವರ, ಭಟ್ಕಳ, ಕುಮಟಾ ತಾಲೂಕಿನ ಜನರಿಗೆ ವಿವಿಧ ರೀತಿಯಲ್ಲಿ ತೊಂದರೆ ಉಂಟಾಗಲಿದೆ.
ಉದ್ದೇಶಿತ ಭೂಗತ ಜಲವಿದ್ಯುತ್ ಯೋಜನೆಯನ್ನು, ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣದಿಂದ ಕೈಬಿಡಬೇಕೆಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹ ಪಡಿಸಲಾಗಿದೆ.ಶಾಸಕ ದಿನಕರ ಶೆಟ್ಟಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ ಶರಾವತಿ ಆರತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಜೆ.ಟಿ.ಪೈ, ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ, ಶರಾವತಿ ನದಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಸಂಚಾಲಕರಾದ ಕೇಶವ ನಾಯ್ಕ ಬಳ್ಕೂರ, ಪಿ.ಎಸ್. ಭಟ್ಟ ಉಪ್ಪೋಣಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಪರಿಸರ ತಜ್ಞ ಅಖಿಲೇಶ ಚಿಪಳಿ ಸಾಗರ, ನಾಮಧಾರಿ ಯುವ ಒಕ್ಕೂಟದ ಅಧ್ಯಕ್ಷ ನ್ಯಾಯವಾದಿ ವಿಕ್ರಮ ನಾಯ್ಕ, ರೈತರು, ಜನಪ್ರತಿನಿಧಿಗಳು, ಸಂಘಟನೆಯ ಪ್ರಮುಖರು, ಸಾರ್ವಜನಿಕರು ಇದ್ದರು.