ಮಾಗಡಿ: ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿರವರ ದಲಿತ ವಿರೋಧಿ ನೀತಿ ಖಂಡಿಸಿ ಹಾಗೂ ಅವರನ್ನು ಕೂಡಲೇ ಅಮಾನತು ಪಡಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಬಳಿ ದಲಿತ ಸ್ವಾಭಿಮಾನಿ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಜೆ.ಸಿ.ಚನ್ನಕೇಶವ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳು ಅಥವಾ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಲಿತರ ಸಂಕಷ್ಟ, ಕುಂದುಕೊರತೆಗಳನ್ನು ಆಲಿಸಬೇಕೆಂದು ಪ್ರತಿಭಟನಾಕರರು 4 ಗಂಟೆ ಕಾಲ ಪಟ್ಟು ಹಿಡಿದು ಪ್ರತಿಭಟಿಸಿದರು. ಆದರೂ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿದ್ದಾಗ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಒಳಗೆ ನುಗ್ಗುವ ಪ್ರಯತ್ನ ನಡೆಸಿದರು.ಈ ವೇಳೆ ಪೊಲೀಸರು ತಡೆದಾಗ ತಾಲೂಕು ಕಚೇರಿ ಮುಂಭಾಗದ ಬೆಂಗಳೂರು- ಕುಣಿಗಲ್ ರಸ್ತೆ ತಡೆಯಲು ಮುಂದಾದವೇಳೆ ಪೊಲೀಸರು ತಡೆಯಲು ಮುಂದಾದರು. ಇದಕ್ಕೆ ಮಣಿಯದ ಪ್ರತಿಭಟನಾಕಾರರು ಪೊಲೀಸರನ್ನು ಹಿಮ್ಮೆಟ್ಟಿಸಿ ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯಿಂದ ಅವರನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಟ್ಟು ನಂತರ ಪ್ರತಿಭಟನಾಕಾರರನ್ನು ರಸ್ತೆಯಿಂದ ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ದರು.ತಹಸೀಲ್ದಾರ್, ಉಪವಿಭಾಗಾಧಿಕಾರಿಗಳು ರಜೆ ಇರುವುದರಿಂದ ಗ್ರೇಡ್ 2 ತಹಸೀಲ್ದಾರ್ ಜಯಣ್ಣ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರ ಮನವೊಲಿಸಿ ತಮ್ಮ ಬೇಡಿಕೆಗಳನ್ನು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು.
ದಲಿತ ಸ್ವಾಭಿಮಾನಿ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಜೆ.ಸಿ.ಚನ್ನಕೇಶವ ಮಾತನಾಡಿ, ಗುಡೇಮಾರನಹಳ್ಳಿ ದಲಿತ ಚನ್ನಪ್ಪ ಎಂಬುವರಿಗೆ 20 ಗುಂಟೆ ಜಮೀನು ದರಖಾಸ್ತು ಮೂಲಕ ಮಂಜೂರಾಗಿದ್ದು ರಾಮಕೃಷ್ಣ ರಿಗೆ ಮಾರಾಟ ಮಾಡಲಾಗಿದೆ. ಈ ಜಮೀನು ಪಿಟಿಸಿಎಲ್ ಇರುವುದರಿಂದ ಖಾತೆ ಆಗಿಲ್ಲ. ಈ ಸಂಬಂಧ ಮೂಲ ಖಾತೆದಾರರ ವಿರುದ್ಧ ಎಸಿ ನ್ಯಾಯಾಲಯದಲ್ಲಿ ರಾಮಕೃಷ್ಣ ದಾವೆ ಹೂಡಿದ್ದಾರೆ. ಆದರೂ ರಾಮಯ್ಯ ಎಂಬುವರಿಗೆ ಜಮೀನು ಮಾರಾಟ ಮಾಡಿದ್ದು ಪಿಟಿಸಿಎಲ್ ಕಾಯ್ದೆಯಂತೆ ಜಮೀನು ಮಾರಾಟ ಮಾಡುವಂತಿಲ್ಲ ಎಂದು ಎಸಿ ನ್ಯಾಯಾಲಯ ರದ್ದು ಮಾಡಿ ಮೂಲ ಜಮೀನುದಾರ ಚನ್ನಪ್ಪ ಅವರಿಗೆ ಹಸ್ತಾಂತರ ಮಾಡಿಕೊಡುವಂತೆ ತಹಶೀಲ್ದಾರ್‌ಗೆ ಆದೇಶ ಮಾಡಿದರು ಕೋರ್ಟ್ ಆದೇಶ ಪಾಲಿಸದೆ ಬೇರೆಡೆಗಳಲ್ಲಿ 3 ಬಾರಿ ಸರ್ವೆಮಾಡಿ ಸ್ಥಳ ಗುರುತಿಸಿದ ನಂತರ ಇದು ನಿಮ್ಮ ಜಮೀನಲ್ಲ ಎಂದು ತಹಸೀಲ್ದಾರ್ ವಂಚಿಸಿ ಕೋಳಿ ಶೆಡ್ಡು ಮಾಲೀಕರೊಂದಿಗೆ ಶಾಮೀಲಾಗಿ ನಮಗೆ ಮೋಸಮಾಡಿದ್ದಾರೆ ಎಂದು ಆರೋಪಿಸಿದರು.ಮೂರು ದಿನದೊಳಗೆ ನಮಗೆ ಸೇರಬೇಕಾದ ಜಮೀನು ನೀಡುವ ಭರವಸೆ ಸಂಬಂಧಪಟ್ಟ ಅಧಿಕಾರಿಗಳು ನೀಡಿದ್ದಾರೆ. ಇದರಿಂದ ಪ್ರತಿಭಟನೆ ಕೈಬಿಡಲಾಗಿದೆ. 3 ದಿನದ ನಂತರ ಜಿಲ್ಲಾಧಿಕಾರಿ, ಕಂದಾಯ ಸಚಿವರ ಮನೆ ಮುಂದೆ ಅರಬೆತ್ತಲೆ ಮೆರವಣಿಗೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಸಿ.ಜಯರಾಮು ಮಾತನಾಡಿ, ತಾಲೂಕು ಕಚೇರಿಯಲ್ಲಿ ಕಳ್ಳತನವಾಗಿ ದಾಖಲೆಗಳನ್ನು ಖಾಸಗಿ ವ್ಯಕ್ತಿ ಮನೆಗಳಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ತಹಸೀಲ್ದಾರ್ ಪಾತ್ರವಿಲ್ಲವೆ?. ಇದು ಯಾರ ಕುಮ್ಮಕ್ಕು ಸಹಕಾರ ಇದೆ ಎಂದು ಪ್ರಶ್ನಿಸಿದರು. 2003ರಲ್ಲಿ ಮಂಜೂರಾದ ದಲಿತರ ಭುಮಿಯ ಕಡಿತ ತಾಲೂಕು ಕಚೇರಿಯಲ್ಲಿದ್ದರು ಭೂಮಿ ನೀಡಿಲ್ಲ. ಸೋಲೂರು ಹೋಬಳಿಯಲ್ಲಿ 115 ಮಂದಿಗೆ ಮಂಜೂರಾಗಿದೆ. 30 ಮಂದಿ ಹಣ ಕಟ್ಟಿದವರಗೂ ನೀಡಿಲ್ಲ. ಒಂದು ಸ್ಮಶಾನಕ್ಕೆ ಜಾಗ ನೀಡಿಲ್ಲ. ಬೆಳಗ್ಗೆ ಲೋಕಾಯುಕ್ತ, ಜಿಲ್ಲಾಧಿಕಾರಿ, ಹೈಕೋರ್ಟ್, ಶಾಸಕರ ಜನಸಂಪರ್ಕ ಸಭೆ ಎನ್ನುತ್ತಾರೆ ಸಂಜೆ 5.30ರ ನಂತರ ಕಳ್ಳ ಬಂದಂತೆ ಬಂದು 8 ಗಂಟೆವರೆಗೆ ಕೆಲಸಮಾಡಿ ತೆರಳುತ್ತಾರೆ. ಡಾಬಾ, ರೆಸಾರ್ಟ್, ಲಾಡ್ಜ್, ಹೋಟೆಲ್‌ಗಳು ಐಬಿಗಳು ಇವರ ಕಾರ್ಯಸ್ಥಾನವಾಗಿದೆ. ಇಲ್ಲಿಗೆ ಮದ್ಯವರ್ತಿಗಳನ್ನು ಕರೆಸಿ ದಾಖಲೆಗಳಿಗೆ ಸಹಿ ಹಾಕುತ್ತಾರೆ. ಕಚೇರಿಯಲ್ಲಿ ಇದ್ದ ಗಾಂಧಿ ಜಯಂತಿ, ಅಂಬೇಡ್ಕರ್ ಫೋಟೋ ತೆಗೆಸಿದ್ದಾರೆ. ಇಂತಹ ಸಂವಿಧಾನ ವಿರೋಧಿ ತಹಶೀಲ್ದಾರ್ ಗೆ ಲಾಯಕ್ ಇಲ್ಲ ಎಂದು ಆರೋಪಿಸಿದರು.ಕ್ವಾಟ್ರಸ್ ನಲ್ಲಿ ಒಂದು ದಿನ ಇಲ್ಲ ಯಾವುದಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ, ಸರ್ಕಾರಿ ವಾಹನವನ್ನು ದುರ್ಬಳಸಿಕೊಂಡಿದ್ದಾರೆ. ಆರ್‌ಐ, ವಿಎಗಳನ್ನು ಕಂಟ್ರೋಲ್ ನಲ್ಲಿ ಇಲ್ಲ, ಶಿರಸ್ತೆದಾರ್ ಖಾಲಿ ಇದೆ, ತಹಸೀಲ್ದಾರ್ ಕೋರ್ಟ್‌ನಲ್ಲಿ ಸಾಕಷ್ಟು ಫೈಲ್‌ಗಳಿವೆ. ಒಂದು ಆರ್ಡರ್ ಮಾಡಿಲ್ಲ ಇವರೆ ಸುರೇಂದ್ರ ಮೂರ್ತಿಯ ಅಥವಾ ಸುರೇಂದ್ರ ಮೂರ್ತಿ ಹೆಸರಿನಲ್ಲಿ ಇವರು ಬಂದು ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿಸಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಜಿ.ಕೃಷ್ಣ, ಮಂಜೇಶ್ ಕುಮಾರು, ಚನ್ನಪ್ಪ, ಮಾರುತಿ, ಶೈನಿ, ಅರುಣ್, ಪವಿತ್ರ, ಲಿಂಗರಾಜು ಮತ್ತಿತರರು ಭಾಗವಹಿಸಿದ್ದರು.18ಕೆಆರ್ ಎಂಎನ್ 11,12.ಜೆಪಿಜಿ
ಮಾಗಡಿ ತಾಲೂಕು ಕಚೇರಿಯ ಮುಂದೆ ತಹಸೀಲ್ದಾರ್ ಅವರ ದಲಿತ ವಿರೋಧಿ ನೀತಿ ಖಂಡಿಸಿ ದಲಿತ ಸ್ವಾಭಿಮಾನಿ ಸೇವಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.