ಕಾಡಾನೆಗಳಿಂದ ಬೆಳೆ ಹಾನಿ ಹಿನ್ನೆಲೆ ರಸ್ತೆ ತಡೆದು ಪ್ರತಿಭಟನೆ

KannadaprabhaNewsNetwork | Published : Nov 23, 2023 1:45 AM

ಸಾರಾಂಶ

ಬೇಲೂರು ತಾಲೂಕಿನ ಬಿಕ್ಕೋಡಿನಲ್ಲಿರುವ ಕಾಫಿ ಎಸ್ಟೇಟ್ ಒಂದರಲ್ಲಿ ಬೀಡುಬಿಟ್ಟಿರುವ 40ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಹಗಲು ರಾತ್ರಿ ಎನ್ನದೆ ಬಿಕ್ಕೋಡು ಸೋಮನಹಳ್ಳಿ ನಿಡುಮನಹಳ್ಳಿ ಕೋಡಿಹಳ್ಳಿ ಗ್ರಾಮಗಳಲ್ಲಿ ಫಸಲಿಗೆ ಬಂದಿರುವ ಕಾಫಿ, ಅಡಿಕೆ, ಬಾಳೆ ತೋಟ ಹಾಗೂ ಜೋಳ, ರಾಗಿ ಹೊಲಗಳ ಮೇಲೆ ದಾಳಿ ನಡೆಸಿ ತಿಂದು ತುಳಿದು ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿರುವ ಹಿನ್ನೆಲೆ ಬಿಕ್ಕೋಡಿ ಬಳಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಕ್ಕೋಡಿನಲ್ಲಿರುವ ಕಾಫಿ ಎಸ್ಟೇಟ್ ಒಂದರಲ್ಲಿ ಬೀಡುಬಿಟ್ಟಿರುವ 40ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಹಗಲು ರಾತ್ರಿ ಎನ್ನದೆ ಬಿಕ್ಕೋಡು ಸೋಮನಹಳ್ಳಿ ನಿಡುಮನಹಳ್ಳಿ ಕೋಡಿಹಳ್ಳಿ ಗ್ರಾಮಗಳಲ್ಲಿ ಕಳೆದ ಒಂದು ವಾರಗಳಿಂದ ಫಸಲಿಗೆ ಬಂದಿರುವ ಕಾಫಿ, ಅಡಿಕೆ, ಬಾಳೆ ತೋಟ ಹಾಗೂ ಜೋಳ, ರಾಗಿ ಹೊಲಗಳ ಮೇಲೆ ದಾಳಿ ನಡೆಸಿ ತಿಂದು ತುಳಿದು ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿದ್ದು ದಾರಿಹೋಕರು ಹಾಗೂ ರೈತರನ್ನು ಅಟ್ಟಾಡಿಸಿರುವ ಪ್ರಕರಣ ಬುಧವಾರ ನಡೆದಿದೆ.

ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಸ್ಥಳೀಯ ರೈತರು ಹಾಗೂ ಕೂಲಿ ಕಾರ್ಮಿಕರು ಹಾಸನ ಹಾಗೂ ಬಿಕ್ಕೋಡು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಒಂದು ತಿಂಗಳಿಂದ ಪ್ರತಿಭಟನೆ ಹಾಗೂ ಮನವಿ ಪತ್ರ ಸಲ್ಲಿಸಿದರು ಕ್ರಮ ಕೈಗೊಳ್ಳುತ್ತಿಲ್ಲ. ಕಾಫಿ ಹಾಗೂ ಜೋಳದ ಬೆಳೆಗಳು ಕಟಾವಿಗೆ ಬಂದಿದ್ದು ಆನೆಗಳ ಓಡಾಟಕ್ಕೆ ಹೆದರಿ ರೈತರು ಬೆಳೆಗಾರರು ಹಾಗೂ ಕಾರ್ಮಿಕರು ಕಂಗಲಾಗಿದ್ದಾರೆ.

ದಿನನಿತ್ಯ ರಾತ್ರಿ ಹಗಲು ಎನ್ನದೆ ಫಸಲಿಗೆ ಬಂದಿರುವ ಬೆಳೆಗಳನ್ನು ನಾಶ ಮಾಡುವುದಲ್ಲದೆ ಮನುಷ್ಯರನ್ನು ಕಂಡರೆ ಕಾಡಾನೆಗಳು ಹಲ್ಲೆ ಮಾಡಲು ಮುಂದಾಗುತ್ತಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ ಸರ್ಕಾರ ಭರವಸೆ ನೀಡುವುದನ್ನು ಬಿಟ್ಟು ರೈತರ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸದರು.

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ವಲಯ ಅರಣ್ಯಾಧಿಕಾರಿ, ವಿನಯ್ ಕುಮಾರ್‌ರವರು ಬಿಕ್ಕೋಡು ಸುತ್ತಮುತ್ತ ೪೦ ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆಗಳನ್ನು ಸೆರೆ ಹಿಡಿಯುವ ಹಾಗೂ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯನ್ನು ಎರಡು ಅಥವಾ ಮೂರು ದಿನಗಳಲ್ಲಿ ಪ್ರಾರಂಭ ಮಾಡಲು ಸರ್ಕಾರ ಆದೇಶ ನೀಡಿದೆ ದಸರಾ ಆನೆಗಳು ಬರುವುದು ತಡವಾದ ಕಾರಣ ಕಾರ್ಯಾಚರಣೆ ವಿಳಂಬವಾಗಿದೆ. ಈಗಾಗಲೇ ದುಬಾರೆಯಿಂದ ೮ ಆನೆಗಳನ್ನು ಕಾರ್ಯಾಚರಣೆಗೆ ಕರೆತರಲು ಹಿರಿಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾಟೇಹಳ್ಳ ಮೀಸಲು ಅರಣ್ಯ ಪ್ರದೇಶದಲ್ಲಿ ಆನೆಗಳು ವಾಸ್ತವ ಹೂಡಲಿದ್ದು ತ್ವರಿತವಾಗಿ ಕಾರ್ಯಾಚರಣೆ ಆರಂಭವಾಗಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೋಹನ್ ರಾಜು, ಸದಸ್ಯರಾದ ವನಿತಾ ಪರಮೇಶ್ ತೇಜ್ ಕುಮಾರ್, ಸಕಲೇಶಪುರ ವಲಯ ಅರಣ್ಯಾಧಿಕಾರಿ ಜೆ ಎಚ್ ಕಮರೇಶ್, ಎಎಸ್‌ಐ ಸರ್ದಾರ್ ಪಾಷಾ, ಉಪ ವಲಯ ಅರಣ್ಯಾಧಿಕಾರಿ ಗುರುರಾಜ್, ರೈತರಾದ ದೊಡ್ಡಪ್ಪ, ಗಂಗರಾಜ ಶೆಟ್ಟಿ, ಶಿವಣ್ಣ, ಕಾಳರಾಜು, ಯದು ನಂದನ್, ರಂಜನ್, ಓಂಕಾರ್ ಇತರರು ಹಾಜರಿದ್ದರು. * ಹೇಳಿಕೆಗಳುದೂರದ ಬಂಡೀಪುರ ಹಾಗೂ ನಾಗರಹೊಳೆ ಕಾಡಿನಿಂದ ಆಹಾರ ಅರಿಸಿ ಬಂದ ಕಾಡಾನೆಗಳ ಸಂತತಿ ದಿನ ಕಳೆದಂತೆ ಹೆಚ್ಚಾಗಿದ್ದು ಕಳೆದ ಎರಡು ವರ್ಷಗಳಿಂದ ಈ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರ ಜೀವನ ಕಷ್ಟಕರವಾಗಿದೆ. ಫಸಲಿಗೆ ಬಂದಿರುವ ಕಾಫಿ ಗಿಡಗಳನ್ನು ತುಳಿದು ಬೆಳೆನಾಶ ಮಾಡುವುದು ಒಂದು ಕಡೆಯಾದರೆ ಆನೆಗಳ ಸಂಚಾರದಿಂದ ಕಾರ್ಮಿಕರು ಕೆಲಸಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಕಾಡಾನೆಗಳ ಹಿಡಿದು ಸ್ಥಳಾಂತರ ಮಾಡಿ ಇಲ್ಲವಾದರೆ ಜನರಿಗೆ ಬೇರೆ ವ್ಯವಸ್ಥೆ ಕಲ್ಪಿಸಿ.

- ಎಸ್ ಎಚ್ ಗಣೇಶ್, ಕಾಫಿ ಬೆಳೆಗಾರರು ಹುಸ್ಕೂರು

Share this article