ಬ್ಯಾಂಕ್‌ಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

KannadaprabhaNewsNetwork | Published : Feb 21, 2024 2:05 AM

ಸಾರಾಂಶ

ರೈತರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಹಾಸನ ಬ್ಯಾಂಕ್ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಕ್ರಮ । ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ । ಮಾನವ ಸರಪಳಿ ನಿರ್ಮಾಣ ಕನ್ನಡಪ್ರಭ ವಾರ್ತೆ ಹಾಸನ

ಇ-ಹರಾಜು ಮೂಲಕ ರೈತರ ಜಮೀನು ಹರಾಜು ಮಾಡುವುದನ್ನು ನಿಲ್ಲಿಸಿ, ರೈತರ ಬೆಳೆ ಸಾಲಕ್ಕಾಗಿ ಟ್ರ್ಯಾಕ್ಟರ್, ಟಿಲ್ಲರ್, ಬೋರ್‌ವೆಲ್ ಸಾಮಾಗ್ರಿಗಳ ಜಪ್ತಿ ಮಾಡುವುದನ್ನು ನಿಲ್ಲಿಸಬೇಕು. ರೈತರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಬ್ಯಾಂಕ್ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಹೊರಟ ಪ್ರತಿಭಟನಾ ಮೆರವಣಿಗೆಯು ಮೊದಲು ಬ್ಯಾಂಕ್ ಮುಂದೆ ಪ್ರತಿಭಟಿಸಿದ ನಂತರ ಎನ್.ಆರ್.ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿದರು. ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಜಿ. ಹಳ್ಳಿ ಬಿ. ನಾರಾಯಣಸ್ವಾಮಿ ಮಾಧ್ಯಮದಿಂದಿಗೆ ಮಾತನಾಡಿ, ರೈತ ದೇಶದ ಬೆನ್ನೆಲುಬು, ರೈತ ಮಣ್ಣಿನ ಮಗ, ಈ ಭೂಮಿಯಲ್ಲಿ ಹಗಲು ರಾತ್ರಿ ದುಡಿಯುವ ರೈತ, ಎಲ್ಲರಿಗೂ ಅನ್ನ ಕೊಡುವ ರೈತ ಇಂದಿನ ವಾಸ್ತವ ಪರಿಸ್ಥಿತಿಯಲ್ಲಿ ಆತನ ಪರಿಸ್ಥಿತಿ ಶೋಚನೀಯ. ಎಲ್ಲಾ ಅಧಿಕಾರಿಗಳು, ಬ್ಯಾಂಕುಗಳು ರೈತರ ಸಾಲಕ್ಕೆ ಬಡ್ಡಿ ಚಕ್ರಬಡ್ಡಿ ಹಾಕಿ ಇ- ಆಕ್ಟ್‌ನ ಮೂಲಕ ರೈತರ ಜಮೀನಿನನ್ನು ಹರಾಜು ಮಾಡಿ ಈ ನೆಲದ ರೈತನ ಜೀವದ ಜತೆ ಆಟವಾಡಿ ಆತ್ಮಹತ್ಯೆಗೆ ಕಾರಣರಾಗುತ್ತಿದ್ದಾರೆ ಎಂದು ಕಿಡಿಕಾರಿದರು.

‘ಭೂತಾಯಿಯ ಒಡಲಿನ ನಮ್ಮ ರೈತರ ಬದುಕಿಗೆ ಬಾಳು ಕೊಡುವವರು ಯಾರು? ರೈತ ಯೋಚಿಸಬೇಕು, ರೈತ ಸಂಘಟನೆ, ನಿಮ್ಮ ಬದುಕು ಆಗಬೇಕು, ಸಾಲಮನ್ನಾ, ಬಡ್ಡಿಮನ್ನಾ ಎಂಬ ಸರ್ಕಾರಗಳ ಘೋಷಣೆ, ನೀರಿನ ಮೇಲಿನ ಗುಳ್ಳೆಯಾಗಿದೆ. ಬ್ಯಾಂಕಿನ ಅಧಿಕಾರಿಗಳು, ರೈತನ ಬಾಳಿನ ಜೊತೆ ಆಟ ಆಡುತ್ತಿದ್ದಾರೆ. ಬಡ್ಡಿ-ಚಕ್ರಬಡ್ಡಿ ಹಾಕಿ ಈ ನೆಲದ ರೈತನ ನೆತ್ತರು ಕುಡಿಯುತ್ತಿದ್ದಾರೆ. ಅಪಾರ ಬೆಲೆ-ಬಾಳುವ ರೈತರ ಜಮೀನುಗಳನ್ನ ಇ-ಟೆಂಡರ್ ಮೂಲಕ ರೈತನಿಗೆ ಗೊತ್ತಾಗದಂತೆ ಕಡಿಮೆ ಬೆಲೆಗೆ ಹಾರಾಜು ಮಾಡುತ್ತಿದ್ದಾರೆ. ಇ-ಟೆಂಡರ್ ಹರಾಜು ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು, ರೈತ ನೊಂದು ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗಲು ಬ್ಯಾಂಕಿನವರು ಮತ್ತು ಸರ್ಕಾರಗಳೇ ನೇರ ಕಾರಣ ಎಂದು ದೂರಿದರು.

ವಯಸ್ಸಾದ ವೃದ್ಧಾಪ್ಯ ವೇತನ, ಹಾಲಿನ ಹಣ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹಣ ಹಾಗೂ ವಿಧವಾ ವೇತನ ಹಣವನ್ನು ಹಾಗೂ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ, ಕಿಸಾನ್‌ ಸಮ್ಮಾನ್ ಯೋಜನೆ ಹಣವನ್ನು ರೈತರ ಮತ್ತು ಸಾರ್ವಜನಿಕರ ಬ್ಯಾಂಕ್ ಖಾತೆಗಳಿಗೆ ಹಾಕದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲ್ಲವನ್ನು ಸಾಲದ ಖಾತೆಗೆ ಜಮಾ ಮಾಡುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ) ಹಾಗೂ ಎಲ್ಲಾ ಬ್ಯಾಂಕುಗಳು ರೈತರ ಎಲ್ಲಾ ಜಮೀನಿನ ಸಾಲಗಳನ್ನು ರದ್ದುಮಾಡಿ ರೈತರಿಗೆ ನ್ಯಾಯ ಕೊಡಿಸಿ, ಈಗಾಗಲೇ ಹಾರಾಜು ಮಾಡಿರುವ ರೈತರ ಜಮೀನನ್ನು ಹಿಂದಿರುಗಿಸಿ ಕೊಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಮುಖಂಡ ಸ್ವಾಮಿಗೌಡ, ರಾಜ್ಯ ಉಪಾಧ್ಯಕ್ಷ ಕಣಗಾಲ್ ಮೂರ್ತಿ, ತಾಲುಕು ಅಧ್ಯಕ್ಷ ಬಿ.ಎಂ. ಮಂಜುನಾಥ್, ಶಿವಣ್ಣ ಪಾರ್ವತಮ್ಮ, ಯೂಸೂಬ್ ಗೊರೂರು, ಹನುಮಂತಯ್ಯ, ರುದ್ರೇಗೌಡ, ಲಕ್ಷ್ಮಣ್ ಇದ್ದರು.ಹಸಿರುಸೇನೆ ಕಾರ್ಯಕರ್ತರಿಂದ ನಡೆದ ಪ್ರತಿಭಟನಾ ಮೆರವಣಿಗೆ.

Share this article