ಮಾನವ ಸರಪಳಿ ನಿರ್ಮಿಸಿ ರೈತ ಸಂಘದಿಂದ ಪ್ರತಿಭಟನೆ

KannadaprabhaNewsNetwork | Published : Jul 17, 2024 12:45 AM

ಸಾರಾಂಶ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಪತ್ರ ನೀಡಿದರೆ ಕಸದ ಬುಟ್ಟಿಗೆ ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಪತ್ರ ನೀಡಿದರೆ ಕಸದ ಬುಟ್ಟಿಗೆ ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು. ಪಟ್ಟಣದ ಶ್ರೀ ನಾಡಪ್ರಭು ಕೆಂಪೇಗೌಡ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಹನೂರು ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಜು.10 ರಂದು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಕರ್ನಾಟಕ ರಾಜ್ಯ ರೈತ ಸಂಘದ ರೈತ ಮುಖಂಡರು ಭೇಟಿ ಮಾಡಿ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ಪತ್ರ ನೀಡಿದ್ದೆವು, ಆದರೆ ಮನವಿ ಪತ್ರ ಸ್ವೀಕರಿಸಿದ ಮುಖ್ಯಮಂತ್ರಿಗಳು ಕಾರ್ಯಕ್ರಮ ಮುಗಿದ ನಂತರ ಮನವಿ ಪತ್ರಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಇಂತಹ ಮುಖ್ಯಮಂತ್ರಿಗಳನ್ನು ಪಡೆದಿರುವುದು ನಮ್ಮ ದೌರ್ಭಾಗ್ಯ, ನಾವು ಇವರನ್ನು ರಾಜೀನಾಮೆ ಕೇಳಬೇಕಾಗಿತ್ತು, ನಾವು ಇವರ ರಾಜೀನಾಮೆ ಕೇಳುವುದಿಲ್ಲ ಬದಲಾಗಿ ನಾವು ಕೊಟ್ಟಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದಿದ್ದರೆ ಇವರು ಚಾಮರಾಜನಗರ ಜಿಲ್ಲೆಯ ಯಾವುದೇ ತಾಲೂಕುಗಳಿಗೂ ಬಂದರು ಇವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಮೊಟ್ಟೆ ಹಾಗೂ ಟೊಮೆಟೋದಿಂದ ಹೊಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳನ್ನು ಅಭಿವೃದ್ಧಿಗಾಗಿ ಮುಂದುವರಿಸಬೇಕು, ಪ್ರಾಣಿ ಮತ್ತು ಮಾನವ ಸಂಘರ್ಷದ ಜೊತೆಗೆ ಬೆಳೆ ಹಾನಿ ಹೆಚ್ಚಾಗಿ ಆಗುವುದರಿಂದ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಈ ಹಿಂದೆ ಇದ್ದಂತೆ ಅಕ್ರಮ ಸಕ್ರಮ ಮುಂದುವರೆಯಬೇಕು. ಕರ ನಿರಾಕಣ ಚಳವಳಿಯ ಸಂದರ್ಭದಲ್ಲಿ, ಚಂಗಡಿ ಗ್ರಾಮವನ್ನು ಅತಿ ಶೀಘ್ರದಲ್ಲಿಯೇ ಸ್ಥಳಾಂತರ ಮಾಡಬೇಕು, ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿ ಮಾಡಬೇಕು. ರೈತರ ಎಲ್ಲಾ ಬೆಳೆಗಳಿಗೂ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ವಿಸ್ತರಣೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಚೆಸ್ಕಾಂ ಕಚೇರಿಗೆ ಭೇಟಿ: ಪ್ರತಿಭಟನೆ ನಂತರ ಪಟ್ಟಣದ ಕಚೇರಿಗೆ ಭೇಟಿ ನೀಡಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವಿಭಾಗದ ಎಇಇ ಶಂಕರ್ ಜೊತೆ ಮಾತನಾಡಿದ ರೈತ ಸಂಘ, ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರಿಗೆ ಹಲವಾರು ಸಮಸ್ಯೆಗಳಿವೆ. ವಿದ್ಯುತ್ತನ್ನುಏಳು ಗಂಟೆ ನೀಡಬೇಕು. ಜೊತೆಗೆ ವಿದ್ಯುತ್ ಪರಿಕರಗಳನ್ನು ನಿಗದಿತ ಸಮಯದಲ್ಲಿ ಗುಣಮಟ್ಟದಿಂದ ದುರಸ್ತಿ ಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇನ್ನು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೀಡಿರುವ ಮನವಿಗಳನ್ನು ಪುರಸ್ಕರಿಸುವಂತೆ ಒತ್ತಾಯಿಸಿದರು.

ಹೆಚ್ಚುವರಿ ತಹಸೀಲ್ದಾರ್ ಕಚೇರಿಗೆ ಭೇಟಿ: ರೈತರ ಜಮೀನುಗಳಿಗೆ ಅಕ್ರಮ ಸಕ್ರಮ ಹಾಗೂ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ನೀಡಿರುವ ಮನವಿಗೆ ಸ್ಪಂದಿಸಿ ಜೊತೆಗೆ ಬೆಳೆ ಪರಿಹಾರ ವಿಳಂಬವಾಗುತ್ತಿರುವುದು ರೈತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ ಗುರುಪ್ರಸಾದ್ ಅವರಿಗೆ ರೈತ ಮುಖಂಡರು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶಾಂತಕುಮಾರ್, ಮಾದಪ್ಪ, ಪುಟ್ಟರಾಜು, ರಾಜು, ಪಳನಿ ಸ್ವಾಮಿ ಸೇರಿದಂತೆ 50ಕ್ಕೂ ಹೆಚ್ಚು ರೈತ ಮುಖಂಡರು ಪಾಲ್ಗೊಂಡಿದ್ದರು.

Share this article