ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.ಪಟ್ಟಮದ ತಾಲೂಕು ಪಂಚಾಯ್ತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಅನಂತ್‌ರಾಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬಳಿಕ ತಾಲೂಕು ಕಚೇರಿಗೆ ತೆರಳಿ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರ ಬಗ್ಗೆ ಲಘುವಾಗಿ ಟೀಕಿಸಿರುವ ನರೇಂದ್ರಸ್ವಾಮಿ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಸಂವಿಧಾನ ಪೀಠದಲ್ಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ಕ್ಷೆಮೆಯಾಚಿಸಬೇಕೆಂದು ಆಗ್ರಹಿಸಿದರು.
ಶಾಸಕ ಸ್ಥಾನದಲ್ಲಿರುವವರು ಬಾಯಿಗೆ ಬಂದಂತೆ ಮಾತನಾಡುವುದು ಶೋಭೆಯಲ್ಲ. ಅದು ಅವರ ದುರಾಂಕಾರದ ಪರಮಾವಧಿಯನ್ನು ಎತ್ತಿ ತೋರುತ್ತದೆ. ಪರಿಶಿಷ್ಟ ಜಾತಿಗೆ ಸೇರಿರುವ ರಾಜ್ಯಪಾಲರನ್ನು ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ. ನಿಮ್ಮನ್ನು ಮತಹಾಕಿ ಗೆಲ್ಲಿಸಿದ್ದವರಿಗೆ ಬುದ್ಧಿ ಇಲ್ಲ ಎಂದು ಛೇಡಿಸಿದರು.ಮಾಜಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್‌ನಿಂದ ಎರಡು ಭಾರಿ ಉಪಸಭಾಪತಿಯಾಗಿದ್ದವರು. ಕುಮಾರಸ್ವಾಮಿ ಬಗ್ಗೆ ಏಕವಚನದಲ್ಲಿ ಮಾತನಾಡುವ ವೇಳೆ ಶಾಸಕರಿಗೆ ಬುದ್ಧಿ ಹೇಳಬಹುದಿತ್ತು. ಆದರೆ, ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಜೊತೆಗೆ ಹೋಗಿ ಜೆಡಿಎಸ್ ವಿರುದ್ಧವೇ ಮಾತನಾಡುತ್ತಿರುವುದನ್ನು ಖಂಡಿಸಿದರು.
ರಾಜ್ಯಪಾಲ ಗೆಹ್ಲೋಟ್ ಹಾಗೂ ಕುಮಾರಸ್ವಾಮಿ ಹಾಗೂ ಶಶಿಕಲಾ ಜೊಲ್ಲೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಇವರ ವಿರುದ್ಧ ಈಗಾಗಲೇ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳು ದೂರು ನೀಡಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ನೀಡಲಾಗುವುದು. ರಾಜ್ಯಪಾಲರು ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಲಾಗುತ್ತಿದೆ ಎಂದರು.ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರ ಶಾಸಕರು ಬರುವ ಕಾರ್ಯಕ್ರಮಗಳನ್ನು ಜೆಡಿಎಸ್ ಕಾರ್ಯಕರ್ತರು ತಡೆದು ಸ್ಥಳದಲ್ಲಿಯೇ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಕಂಸಾಗರ ರವಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು. ನಂತರ ಕನಿಷ್ಠ ಸಂಖ್ಯೆಯಲ್ಲಾದರೂ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ. ಬೇರೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಇದೇ ರೀತಿ ಮುಂದುವರೆದರೇ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಂತರ ತಹಸೀಲ್ದಾರ್ ಲೊಕೇಶ್ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಿಕೊಡಲಾಗುವುದೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತಿಮಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರು, ಜೆಡಿಎಸ್ ಮುಖಂಡರಾದ ಸಿದ್ದರಾಜು, ನಂದಕುಮಾರ್, ಜಯರಾಮು, ಕೃಷ್ಣ, ಕಂಬರಾಜು, ಮೆಹಬೂಬ್‌ಪಾಷ, ಪ್ರಕಾಶ್, ನಟರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.ಕೊನೆಯ ಭಾಗಕ್ಕೆ ನೀರು ಹರಿಸಲು ವಿಫಲ:
ಕೆಆರ್‌ಎಸ್ ಅಣೆಕಟ್ಟೆ ತುಂಬಿ ಹರಿಯುತ್ತಿದ್ದರೂ ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ದೂರಿದರು.ಬಿಜಿಪುರ ಹೋಬಳಿಯಲ್ಲಿ ಕೆರೆಕಟ್ಟೆಗಳು ನೀರಿಲ್ಲದೇ ಬರಿದಾಗಿದೆ. ತಮ್ಮ ಕನಸ್ಸಿನ ಕೂಸು ಎಂದು ಹೇಳುವ ಪೂರಿಗಾಲಿ ಹನಿ ನೀರಾವರಿ ಯೋಜನೆ ಅನುಷ್ಠಾನಗೊಂಡು ಹಲವು ವರ್ಷಗಳೇ ಕಳೆದರೂ ಕೂಡ ಇಂದಿಗೂ ಪೂರ್ಣಗೊಂಡಿಲ್ಲ ಎಂದು ಕಿಡಿಕಾರಿದರು.
ನನ್ನ ಅವಧಿಯಲ್ಲಿ ತಂದಿದ್ದ ಅನುದಾನವನ್ನು ತಡೆದು 6 ತಿಂಗಳ ನಂತರ ತಾವೇ ತಂದಿರುವುದಾಗಿ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ 10 ರುಪಾಯಿಯನ್ನು ಕೂಡ ತಾಲೂಕಿಗೆ ತಂದಿಲ್ಲ ಎಂದು ಆರೋಪಿಸಿದರು.ತಾಲೂಕಿನ ಕೊನೆಯ ಭಾಗಕ್ಕೆ ನೀರನ್ನು ಅಧಿಕಾರಿಗಳು ಸಮರ್ಪಕ ಪೂರೈಕೆ ಮಾಡದಿದ್ದರೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.