ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ । ಜಿಲ್ಲಾಧಿಕಾರಿ ಕಚೇರಿಯಿಂದ ಸಿಎಂಗೆ ಮನವಿ ಕನ್ನಡಪ್ರಭ ವಾರ್ತೆ ಹೊಸಪೇಟೆ
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ (ರಾಬಕೊವಿ)ದ ಕೇಂದ್ರ ಕಚೇರಿ ಬಳ್ಳಾರಿಯಿಂದ ಸ್ಥಳಾಂತರ ಮಾಡಬೇಕು ಮತ್ತು ಮೆಗಾಡೈರಿ ನಿರ್ಮಾಣ ಮಾಡಬೇಕು ಎಂದು ವಿಜಯನಗರ ಜಿಲ್ಲೆಯ ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ಮತ್ತು ವಿವಿಧ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು.ರೈತ ಮುಖಂಡ ಜೆ.ಎಂ. ವೀರಸಂಗಯ್ಯ ಮಾತನಾಡಿ, ರಾಬಕೊವಿ ಹಾಲು ಒಕ್ಕೂಟಕ್ಕೆ ವಿಜಯನಗರ ಜಿಲ್ಲೆ ಕೊಡುಗೆ ಸಿಂಹಪಾಲಿದೆ. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಅವರನ್ನು ಬಳ್ಳಾರಿಗೆ ಕಾಲಿಡದಂತೇ ಮಾಡುತ್ತೇವೆ ಎಂದು ಬಳ್ಳಾರಿಯಲ್ಲಿ ನಡೆದ ಹೋರಾಟದಲ್ಲಿ ಕೆಲವರು ಹೇಳಿದ್ದಾರೆ. ಕನ್ನಡ ನಾಡಿನಲ್ಲಿ ಪಾಳೇಗಾರಿಕೆ ನಡೆಯುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯನವರಿಗೂ ಬಳ್ಳಾರಿಗೆ ಕಾಲಿಡಲು ಬಿಡುವುದಿಲ್ಲ ಎಂದಿದ್ದರು. ಆಗ ಸಿದ್ದರಾಮಯ್ಯನವರು ಬೆಂಗಳೂರಿನಿಂದ ಬಳ್ಳಾರಿಗೆ 400 ಕಿಮೀ ಪಾದಯಾತ್ರೆ ಮಾಡಿದ್ದರು. ಈಗ ನಾವೆಲ್ಲರೂ ಬಳ್ಳಾರಿಗೆ ಜಾಥಾ ಹೊರಟರೆ ತಡೆಯಲು ಸಾಧ್ಯವಾದೀತೆ? ಇಂತಹ ಅರ್ಥಗೇಡಿ ಕೆಲಸ ನಾವು ಮಾಡುವುದಿಲ್ಲ. ಸೌಹಾರ್ದತೆ ಕಾಪಾಡುತ್ತೇವೆ ಎಂದರು.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಸೌಹಾರ್ದತೆ ಉಳಿಯಬೇಕು. ನಾವೆಲ್ಲರೂ ಅರಿತುಕೊಂಡು ನಡೆಯಬೇಕು. ಆದರೆ, ಕೆಲ ಹೋರಾಟಗಾರರು ಒಕ್ಕೂಟದ ಸದಸ್ಯರು ಅಲ್ಲದಿದ್ದರೂ ಹೋರಾಟ ನಡೆಸಿ; ಭೀಮಾನಾಯ್ಕ ಅವರ ವಿರುದ್ಧ ಮಾತನಾಡಿದ್ದಾರೆ. ಕಾಲಿಡಲು ಬಿಡುವುದಿಲ್ಲ ಎಂದಿದ್ದಾರೆ. ಇಂತಹದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದರು.ವಿಜಯನಗರ ಜಿಲ್ಲೆ 1ಲಕ್ಷ 20 ಸಾವಿರ ಲಿ. ಹಾಲು ಉತ್ಪಾದನೆ ಮಾಡುತ್ತದೆ. ಸ್ಥಳೀಯವಾಗಿಯೇ 60 ಸಾವಿರ ಲಿ. ಮಾರಾಟ ಆಗುತ್ತದೆ. ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ನಿರ್ಮಾಣ ಮಾಡಿಕೊಡಬೇಕು. ಜೊತೆಗೆ ಮೆಗಾ ಡೇರಿ ನಿರ್ಮಾಣ ಮಾಡಬೇಕು. ರೈತರ ಹಿತ ಕಾಪಾಡಬೇಕಾದ ಒಕ್ಕೂಟದ ನಿರ್ದೇಶಕರು ಸೌಹಾರ್ದತೆಗೆ ಪೆಟ್ಟು ನೀಡಬಾರದು. ಈ ಹಿಂದೆ ಆನಂದ ಸಿಂಗ್ ಅವರು ಜಿಲ್ಲೆ ಮಾಡಿಕೊಟ್ಟಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಳಿ ನಮಗೆ ಪ್ರತ್ಯೇಕ ಒಕ್ಕೂಟ ಮಾಡಿಸಿಕೊಡಲಿ ಎಂದರು.
ರಾಬಕೊವಿ ನಿರ್ದೇಶಕ ಎಚ್. ಮರುಳಸಿದ್ದಪ್ಪ ಮಾತನಾಡಿ, ವಿಜಯನಗರದಲ್ಲಿ 360 ಸಹಕಾರ ಸಂಘಗಳು ಪ್ರತಿದಿನ 1.20 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿವೆ. ನಿರ್ದೇಶಕರ ನೇಮಕ ಸೇರಿದಂತೆ ಇತರೆ ವಿಷಯಗಳಿಗೂ ಸಮಸ್ಯೆ ಆಗುತ್ತಿದೆ. ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ನಿರ್ಮಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕಾರ್ಯ ಮಾಡಲಿ. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಹೋರಾಟದ ನೇತೃತ್ವ ವಹಿಸಲಿ ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಐಗೋಳ ಚಿದಾನಂದಪ್ಪ, ಬಸವರಾಜ್ ಕಕ್ಕುಪ್ಪಿ, ಕೆ. ಪ್ರಕಾಶ, ದಾಸರ ವೆಂಕಟೇಶ, ಗಂಟೆ ಸೋಮಶೇಖರ, ಕೆ. ಬಸವರಾಜ, ರತ್ನಮ್ಮ, ವೆಂಕಟೇಶ, ಜಿ.ಸೋಮಣ್ಣ, ಫಕೀರಪ್ಪ, ಉಷಾ, ಲಕ್ಷ್ಮಣ, ಕಾತೇಶಪ್ಪ, ಗೋಣಿ ಬಸಪ್ಪ ಮತ್ತಿತರರಿದ್ದರು. ನೂರಾರು ರೈತರು ಹಾಗೂ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.