ಲಕ್ಷ್ಮೇಶ್ವರ: ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಆಶ್ರಯ ನಿವೇಶನ ಹಂಚಿಕೆ ಮಾಡಿದ್ದು, ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಮಂಗಳವಾರ ಪಟ್ಟಣದ ಪುರಸಭೆ ಎದುರು ಆಶ್ರಯ ನಿವೇಶನ ಹಂಚಿಕೆಯಲ್ಲಿ ಆದ ಅನ್ಯಾಯ ಖಂಡಿಸಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಬಡವರಿಗೆ, ಗುಡಿಸಲು ವಾಸಿಗಳಿಗೆ, ನಿರ್ಗತಿಕರಿಗೆ ಹಾಗೂ ಸೂರಿಲ್ಲದವರಿಗೆ ಸಿಗಬೇಕಾದ ಆಶ್ರಯ ನಿವೇಶನಗಳು ಉಳ್ಳವರ ಪಾಲಾಗಿವೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ ನಮ್ಮ ಹೋರಾಟ ನ್ಯಾಯದ ಪರವಾಗಿದೆ. ಆಶ್ರಯ ಯೋಜನೆ ಅಡಿಯಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಸುಮಾರು 59 ಎಕರೆ ಭೂಮಿಯನ್ನು ಖರೀದಿ ಮಾಡಿ ಅದರಲ್ಲಿ ಸುಮಾರು 2132 ಜನ ಫಲಾನುಭವಿಗಳಿಗೆ ನಿವೇಶನ ಕಲ್ಪಿಸಬಹುದಾಗಿದೆ. ಕಳೆದ 5 ವರ್ಷಗಳಿಂದ ಆಶ್ರಯ ನಿವೇಶನ ಹಂಚಿಕೆ ಮಾಡಿಲ್ಲ. ಅಲ್ಲದೆ ನೂತನ ಶಾಸಕರಾದ ಡಾ. ಚಂದ್ರು ಲಮಾಣಿ ಅವರು ನಿವೇಶನ ಹಂಚಿಕೆಯಲ್ಲಿ ಅಗಿರುವ ಅನ್ಯಾಯ ಸರಿಪಡಿಸಿ ಸೂಕ್ತ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ ಮಾಡುವ ಮೂಲಕ ಬಡವರ ಬಹುದಿನಗಳ ಸೂರಿನ ಕನಸನ್ನು ನನಸು ಮಾಡಬೇಕು ಎಂದು ಅವರು ಹೇಳಿದರು.ಈ ವೇಳೆ ವೀರಶೈವ ಪಂಚಮಸಾಲಿ ಸಮಾಜದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಸುರೇಶ ನಂದೆಣ್ಣವರ ಮಾತನಾಡಿ, ಪುರಸಭೆಯ ಆಡಳಿತ ಮಂಡಳಿಯು ಹಾಗೂ ಅಧಿಕಾರಿಗಳು ಆಶ್ರಯ ಮನೆಗಳನ್ನು ಮನೆ ಇದ್ದವರಿಗೆ, ನಿವೃತ್ತ ನೌಕರರಿಗೆ, 3-4 ಮನೆ ಹೊಂದಿರುವವರಿಗೆ ನಿವೇಶನ ನೀಡುವ ಕಾರ್ಯ ಮಾಡಿದ್ದಾರೆ. ಇದರಲ್ಲಿ ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಶಾಮೀಲಾಗಿ ಬೇಕಾಬಿಟ್ಟಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ನಿಜವಾದ ಗುಡಿಸಲು ವಾಸಿಗಳಿಗೆ, ನಿರ್ಗತಿಕರಿಗೆ. ಕಡು ಬಡವರಿಗೆ ನಿವೇಶನ ನೀಡಬೇಕೆನ್ನುವುದು ನಮ್ಮ ಗುರಿಯಾಗಿದೆ. ಆದ್ದರಿಂದ ಸೂಕ್ತ ಫಲಾನುಭವಿಗಳಿಗೆ ನಿವೇಶನ ನೀಡುವಂತೆ ನಡೆಸುತ್ತಿರುವ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ಈ ವೇಳೆ ಸುರೇಶ ಹಟ್ಟಿ, ಅಮರಪ್ಪ ಗುಡಗುಂಟಿ, ಬಸವರಾಜ ಹಿರೇಮನಿ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಮುಕ್ತಿಮಂದಿರ ಪೀಠಾಧ್ಯಕ್ಷರಾದ ವಿಮಲರೇಣುಕ ವೀರ ಮುಕ್ತಿಮುನಿ ಸ್ವಾಮಿಗಳು ಮಾತನಾಡಿ, ಬಡವರಿಗೆ ಸಿಗಬೇಕಾದ ಸವಲತ್ತುಗಳು ಉಳ್ಳವರ ಹಾಗೂ ಅಧಿಕಾರಿ ಶಾಹಿಗಳ ಪಾಲಾದರೆ ಬಡವರಿಗೆ ಹಾಗೂ ಹಿಂದುಳಿದವರಿಗೆ ನ್ಯಾಯ ಸಿಗುವುದು ಯಾವಾಗ ಎನ್ನುವ ಚಿಂತೆ ಕಾಡುತ್ತಿದೆ. ಆದ್ದರಿಂದ ನ್ಯಾಯದ ಪರವಾಗಿ ಹೋರಾಡುತ್ತಿರುವ ಹೋರಾಟಗಾರರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಇಲ್ಲಿ ಭಾಗವಹಿಸಿದ್ದೇನೆ, ಬಡವರಿಗೆ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತ ನ್ಯಾಯ ನೀಡಬೇಕು ಎಂದು ಅವರು ಹೇಳಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಜಿಲ್ಲಾಧಿಕಾರಿಗಳ ಈ ಕುರಿತು ಮಾಹಿತಿ ನೀಡುತ್ತೇನೆ. ಅಲ್ಲದೆ ಆಶ್ರಯ ನಿವೇಶನ ಹಂಚಿಕೆಯಲ್ಲಿ ಆದ ಅನ್ಯಾಯ ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡುತ್ತೇವೆ. ಅರ್ಹ ಫಲಾನುಭವಿಗಳನ್ನು ಗುರುತಿಸಲು ಜಿಲ್ಲಾಮಟ್ಟದ ಅಧಿಕಾರಿಗಳ ತಂಡವನ್ನು ರಚನೆ ಮಾಡಿ ಅರ್ಹರಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಆಶ್ರಯ ನಿವೇಶನ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಖಂಡಿಸಿ ಬೆಳಗ್ಗೆ ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಸೋಮೇಶ್ವರ ಪಾದಗಟ್ಟಿಯ ಮೂಲಕ ಸಾಗಿತು. ಈ ವೇಳೆ ಹಲಗೆ ಕೊಂಬು ಕಹಳೆ ಬಾರಿಸುತ್ತ ಸಾಗಿದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರತಿಭಟನೆಯಲ್ಲಿ ನೀಲಪ್ಪ ಪಡಗೇರಿ, ದಾದಾಪೀರ್ ಮುಚ್ಚಾಲೆ, ಅಂಬರೀಶ ತೆಂಬದಮನಿ, ನೂರಅಹ್ಮದ್ ಶಿಗ್ಗಾಂವಿ, ಬಸವರಾಜ ಕಲ್ಲೂರ, ಚಂದ್ರು ಮಾಗಡಿ, ಫಕ್ಕೀರೇಶ ಅಣ್ಣಿಗೇರಿ, ರಾಜು ಲಿಂಬಿಕಾಯಿ, ಮಂಜುನಾಥ ಕೋಡಳ್ಳಿ, ಮಂಜುನಾಥ ಮುಳಗುಂದ, ಮಹೇಶ ಸೂರಣಗಿ, ಮಹಾಂತೇಶ ಬಸಾಪೂರ ಸೇರಿದಂತೆ ಅನೇಕರು ಇದ್ದರು.