ಗ್ರಾಪಂ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು

ಹೊಸಪೇಟೆ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್‌ ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘದಿಂದ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಬಳಿಕ ಜಿಪಂ ಸಿಇಒ ಅಕ್ರಂ ಶಾ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಇಲ್ಲಿನ ಸಾಯಿಬಾಬಾ ವೃತ್ತದಿಂದ ಜಿಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಬಂದರು. ನೂರಾರು ಗ್ರಾಪಂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಸ್ತುತ ದಿನ ನಿತ್ಯದ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ₹31 ಸಾವಿರ ನಿಗದಿಗೊಳಿಸಬೇಕು. ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ಆರು ಸಾವಿರ ರು., ಪಿಂಚಣಿ ವ್ಯವಸ್ಥೆ ಜಾರಿಗೆ ಬರಬೇಕು. ಗ್ರಾಪಂಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ಸ್‌ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತ. ಆದರೆ, ಈಗಾಗಲೇ ಗ್ರಾಪಂಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ನೇಮಕ ಮಾಡಿಕೊಂಡು ಮುಂದುವರೆಸಬೇಕು. ಅಲ್ಲದೆ ಈಗಾಗಲೇ ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುವ ನೌಕರರ ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದ್ದರೆ ಅವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ನೀರುಗಂಟಿಗಳಿಗೆ ನಿರ್ದಿಷ್ಟ ಕೆಲಸ ನಿಗದಿಪಡಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. ಪ್ರತಿಯೊಂದು ಗ್ರಾ.ಪಂ.ಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಶೇ.100ರಷ್ಟು ಸ್ಥಾನಗಳನ್ನು ಗ್ರೇಡ್-2 ಕಾರ್ಯದರ್ಶಿಗಳಿಗೆ ಶೇ.50 ರಷ್ಟು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೇ.50ರಷ್ಟು ಸ್ಥಾನಗಳನ್ನು ಬಡ್ತಿ ನೀಡಬೇಕು. ಗ್ರೇಡ್-1 ಪಂಚಾಯಿತಿಗಳನ್ನು ಜನಸಂಖ್ಯೆಗೆ ಆಧರಿಸಿ ಗ್ರಾಪಂಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಶೇ.60ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಐಪಿಡಿ ಸಾಳಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಿಸಬೇಕು. ನೌಕರರು ತೀವ್ರವಾದ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು. ಸಿಬ್ಬಂದಿಗಳಿಗೆ ಇ-ಹಾಜರಾತಿ ಲೋಪದೋಷಗಳನ್ನು ಪಂಚತಂತ್ರದಲ್ಲಿ ಸರಿಪಡಿಸುವವರೆಗೆ ಪೂರ್ಣ ವೇತನ ನೀಡಬೇಕು. ಸ್ವಚ್ಛ ವಾಹಿನಿಯ ಚಾಲಕರಾಗಿ ತರಬೇತಿ ಪಡೆದ ಎಲ್ಲಾ ಚಾಲಕರಿಗೆ ವಾಹನ ನೀಡಬೇಕು ಎಂದಯ ಆಗ್ರಹಿಸಿದರು.

ಸಂಘದ ಅಧ್ಯಕ್ಷ ಆರ್.ಎಸ್.ಬಸವರಾಜ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್‌ ರೆಡ್ಡಿ, ಎನ್‌. ಯಲ್ಲಾಲಿಂಗ, ಎ.ಯರ‍್ರಿಸ್ವಾಮಿ, ಮರಿಸ್ವಾಮಿ, ಲಕ್ಷ್ಮಣ, ಬಸವರಾಜ್, ಕರಿಯಪ್ಪ, ಕೊಟ್ರೇಶ್, ಅಂಜಿನಪ್ಪ, ಬಸವಯ್ಯ ಮತ್ತಿತರರಿದ್ದರು.

ಹೊಸಪೇಟೆಯಲ್ಲಿ ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಯಿತು.

Share this article