ಎಬಿವಿಪಿ ನರಗುಂದ ಶಾಖೆ ವತಿಯಿಂದ ನರಗುಂದದಲ್ಲಿ ಆಕ್ರೋಶ
ನರಗುಂದ: ಅತಿಥಿ ಉಪಾನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನರಗುಂದ ಶಾಖೆ ವತಿಯಿಂದ ಪಟ್ಟಣದ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ರವಿ ನರೇಗಲ್ ಮಾತನಾಡಿ, ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತರಗತಿಗಳನ್ನ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದು, ಇದರಿಂದ ಪಪೂ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ಪಠ್ಯಚಟುವಟಿಕೆಗಳಲ್ಲಿ ಹಿನ್ನಡೆಯಾಗುತ್ತಿದೆ. ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸುವ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ ಆದರೆ ತರಗತಿಗಳು ಸರಿಯಾಗಿ ನಡೆಯದೇ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯಬೇಕು ಎಂಬ ಪ್ರಶ್ನೆ ವಿದ್ಯಾರ್ಥಿ ಸಮುದಾಯದ ಮುಂದೆ ಮೂಡುತ್ತದೆ. ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಪ್ರಕಾರ ವೇತನ ನೀಡುವುದು, ಸರ್ಕಾರಿ ನೌಕರರಿಗೆ ನೀಡುವ ಹಾಗೆ ಪ್ರತಿ ತಿಂಗಳು ಸಂಬಳ ನೀಡಬೇಕು. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸರ್ಕಾರ ಕೂಡಲೇ ರಾಜ್ಯದ ಕಾಲೇಜುಗಳಲ್ಲಿ ಖಾಲಿ ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಅತಿಥಿ ಉಪನ್ಯಾಸಕರು ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೂಡಲೇ ತರಗತಿಗಳನ್ನು ನಡೆಸಬೇಕು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಗೌರವಿತ ಜೀವನವನ್ನು ಸಾಧಿಸುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯ ಸರ್ಕಾರವು ಈ ವಿಷಯದಲ್ಲಿ ಯಾವುದೇ ರೀತಿ ವಿಳಂಬ ಮಾಡದೆ ಅತಿಥಿ ಉಪನ್ಯಾಸಕರಿಗೆ ನೀಡುವ ಸಂಬಳವನ್ನು ಸರ್ಕಾರಿ ನೌಕರರಿಗೆ ನೀಡುವ ಹಾಗೆ ಪ್ರತಿ ತಿಂಗಳು ನೀಡಬೇಕು. ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಪ್ರಕಾರ ವೇತನವನ್ನು ನೀಡುವುದು ಈ ವಿಷಯದಲ್ಲಿ ಸರ್ಕಾರ ತಕ್ಷಣವೇ ಪರಿಹಾರವನ್ನು ನೀಡಿ ತರಗತಿಗಳು ನಡೆಯಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ವಿದ್ಯಾರ್ಥಿ ನಾಯಕರಾದ ವಿಠ್ಠಲ್ ಸಾಟೇ, ಜಿಲ್ಲಾ ಸಂಚಾಲಕ ಪರ್ವತಗೌಡ ಕಲ್ಲನಗೌಡರ, ಅಭಿಷೇಕ ನವಲಗುಂದ, ಆಕಾಶ ಕಲಾಲ್, ಅಭಿಷೇಕ ಕರಿಕಟ್ಟಿ, ರುದ್ರೇಶ ಕೊಣ್ಣೂರ, ಅನಿಲ ಬಾಬರ, ಸಂಗು ಪಾಟೀಲ, ಅಜಿತ ಚಿತ್ರಗಾರ, ಆದಿತ್ಯ ಉಳ್ಳಾಗಡ್ಡಿ, ಶಶಾಂಕ ಹಾಗೂ ಕಾರ್ಯಕರ್ತರು ಹಾಗೂ ಸಿದ್ದೇಶ್ವರ ಪ್ರಥಮ ದರ್ಜಿ ಕಾಲೇಜ್ ವಿದ್ಯಾರ್ಥಿಗಳು ಇದ್ದರು.