ಸಮರ್ಪಕ ಬಸ್ ವ್ಯವಸ್ಥೆಗಾಗಿ ಪ್ರತಿಭಟನೆ

KannadaprabhaNewsNetwork | Published : Mar 15, 2024 1:18 AM

ಸಾರಾಂಶ

ಬೆಳಗ್ಗೆ ೮ ಗಂಟೆಯಿಂದ ೧೦ ಗಂಟೆಯವರೆಗೆ ಸಂಚರಿಸುವ ಶಿರಸಿ- ಹುಬ್ಬಳ್ಳಿ ಬಸ್‌ಗಳು ಸಮರ್ಪಕ ಸೇವೆ ನೀಡುತ್ತಿಲ್ಲ.

ಮುಂಡಗೋಡ: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಹಾಗೂ ಚಾಲಕರು ಮತ್ತು ನಿರ್ವಾಹಕರ ದುರ್ನಡತೆಯನ್ನು ಖಂಡಿಸಿ ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರು ಸೇರಿ ತಾಲೂಕಿನ ಕಾಳೇಬೈಲ್ ಗ್ರಾಮದ ಶಿರಸಿ- ಹುಬ್ಬಳ್ಳಿ ಹೆದ್ದಾರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಶಿರಸಿ- ಹುಬ್ಬಳ್ಳಿ ಮಾರ್ಗದಲ್ಲಿರುವ ಕಾಳೇಬೈಲ್ ಗ್ರಾಮಕ್ಕೆ ಸಮರ್ಪಕ ಬಸ್ ನಿಲುಗಡೆ ಮಾಡದೆ ಇರುವುದರಿಂದ ಕಾಳೆಬೈಲ್, ಬೆಡಸಗಾಂವ, ಬಾಳೆಕೊಪ್ಪ, ತೊಗ್ರಳ್ಳಿ ಸುತ್ತಮುತ್ತ ಪ್ರದೇಶದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣ ಶಿರಸಿ ಸಾರಿಗೆ ಸಂಸ್ಥೆ ಬಸ್ ಘಟಕದ ಅಧಿಕಾರಿಗಳು ಸ್ಥಳಕ್ಕಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಬೆಳಗ್ಗೆ ೮ ಗಂಟೆಯಿಂದ ೧೦ ಗಂಟೆಯವರೆಗೆ ಸಂಚರಿಸುವ ಶಿರಸಿ- ಹುಬ್ಬಳ್ಳಿ ಬಸ್‌ಗಳು ಸಮರ್ಪಕ ಸೇವೆ ನೀಡುತ್ತಿಲ್ಲ. ಇದರಿಂದ ಈ ಭಾಗದಿಂದ ವ್ಯಾಸಂಗಕ್ಕಾಗಿ ಮಳಗಿ, ಮುಂಡಗೋಡ ಹಾಗೂ ಶಿರಸಿಗೆ ಹೋಗುವ ಶಾಲಾ- ಕಾಲೇಜು ವಿರ್ದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗೆ ತಲುಪಲಾಗದೆ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೇ ಬಸ್‌ ಚಾಲಕರು ಹಾಗೂ ನಿರ್ವಾಹಕರು ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಬಿಡದೆ ದುರ್ವರ್ತನೆಯಿಂದ ನಡೆದುಕೊಳ್ಳುತ್ತಾರೆ. ಹಾಗಾಗಿ ತಕ್ಷಣ ಗ್ರಾಮಕ್ಕೆ ಸರಿಯಾದ ಹಾಗೂ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ದುರ್ನಡತೆಯಿಂದ ವರ್ತಿಸುವ ಚಾಲಕರು ಹಾಗೂ ನಿರ್ವಾಹಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಳಿಕ ಶಿರಸಿ ಕೆಎಸ್ಆರ್‌ಟಿಸಿ ಘಟಕದ ಇನ್ಸಪೆಕ್ಟರ್‌ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮುಂದೆ ಈ ರೀತಿ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಬೆಡಸಗಾಂವ ಗ್ರಾಮದ ದೇವೇಂದ್ರ ನಾಯ್ಕ, ಸಂಜೀವ ನಾಯ್ಕ, ಲಕ್ಷ್ಮಣ ನಾಯ್ಕ, ನಾರಾಯಣ ಜೋಗಿ, ಕಾಳೇಬೈಲ್‌ನ ಪರಶುರಾಮ ಕಾಳೆಬೈಲ್, ಅಶೊಕ ನಾಯ್ಕ, ಉದಯಗೌಡ್ರು ಬಾಳೆಕೊಪ್ಪ, ಶಬ್ಬೀರ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share this article