ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹ

KannadaprabhaNewsNetwork | Published : Jul 2, 2024 1:35 AM

ಸಾರಾಂಶ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಸಂಬಂಧ ಕಾಯ್ದೆ ರೂಪಿಸಿ ಜಾರಿಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಸಲಾಯಿತು. ಕನ್ನಡದ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರ ರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಮೊದಲು ಕನ್ನಡಿಗರಿಗೆ ಆದ್ಯತೆ ದೊರೆಯುವಂತಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಮೀಸಲಾತಿ ನೀಡುವ ಸಂಬಂಧ ಕಾಯ್ದೆ ರೂಪಿಸಿ ಜಾರಿಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಶಾಮಿಯಾನ ಹಾಕಿ ಒಂದು ದಿನದ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೆ ವೇಳೆ ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಕನ್ನಡ ನಾಡು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಚಾರಿತ್ರಿಕವಾಗಿ ವೈಭವದ ಇತಿಹಾಸವನ್ನು ಹೊಂದಿದ ನಾಡು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂಥ ಸಕಲ ಸಮೃದ್ಧಿ ಚಿನ್ನನಾಡಿಗೆ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇತ್ತೀಚಿನ ಎರಡು ಮೂರು ದಶಕಗಳಲ್ಲಿ ಇದು ತಾರಕಕ್ಕೆ ಏರಿದೆ ಎಂದರು.

ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡ ನಾಡಿನ ಭೌಗೋಳಿಕ, ಸಾಮಾಜಿಕ, ರಾಜಕೀಯ ಚಹರೆಯೇ ಬದಲಾಗುತ್ತಿದೆ. ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರು ಈ ದೊಡ್ಡ ಪ್ರಮಾಣದ ವಲಸೆಯಿಂದ ಬಸವಳಿದು ಹೋಗುತ್ತಿದೆ. ಇದರಿಂದ ಕನ್ನಡಿಗರಿಗೆ ಈಗ ಉದ್ಯೋಗ ಇಲ್ಲದಂತಾಗಿದೆ. ಕನ್ನಡದ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರ ರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಬರುತ್ತಿದೆ. ಹೀಗೇ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ ಎಂದು ಹೇಳಿದರು.ಇಂತಹ ಸಂದರ್ಭದಲ್ಲಿ ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ದಕ್ಕಬೇಕು ಎಂದು ನಾವೆಲ್ಲ ದಶಕಗಳಿಂದ ಹೋರಾಡುತ್ತ ಬಂದಿದ್ದೇವೆ. ಎಲ್ಲಾ ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ (ಪಿ ಎಸ್‌ ಯು) ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಘಟಕಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಅನುಕ್ರಮವಾಗಿ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಎ’ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಕನಿಷ್ಠ 80 ಪ್ರತಿಶತ ಮತ್ತು 65 ಮೀಸಲಾತಿ ನೀಡಬೇಕು ಎಂದು ಸಮಿತಿಯು ಶಿಫಾರಸು ನೀಡಿತ್ತು. ಆದರೆ ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ ಎಂದು ದೂರಿದರು.

2019ರಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಸ್ಥಾಯಿ ಆದೇಶದ ನಿಯಮಗಳಿಗೆ ಬದಲಾವಣೆ ಮಾಡಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸಲು ಖಾಸಗಿ ವಲಯಕ್ಕೆ ಸೂಚಿಸಿದರೂ ಎಷ್ಟು ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂಬುದು ಸ್ಪಷ್ಟವಿರಲಿಲ್ಲ. ಹೀಗಾಗಿ ಈ ಕಾನೂನಿಗೆ ಯಾವ ಬಲವೂ ಇರಲಿಲ್ಲ, ಅರ್ಥವೂ ಇರಲಿಲ್ಲ. ಕೇಂದ್ರ ಸರ್ಕಾರದ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಪ್ರಕಾರ ಆಯಾ ರಾಜ್ಯಗಳಲ್ಲಿ ನಿಯಮಾವಳಿ ರೂಪಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ರಾಜ್ಯ ಸರ್ಕಾರವು ರೂಪಿಸುವ ಕಾನೂನನ್ನು 50 ಕ್ಕೂ ಹೆಚ್ಚು ಮಂದಿ ನೌಕರರನ್ನು ಹೊಂದಿರುವ ಕೈಗಾರಿಕೆಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ಈ ಕಾಯ್ದೆಯಡಿ ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನನ್ನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿ ಮಾಡಬಹುದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಇಚ್ಛಾಶಕ್ತಿಯನ್ನು ತೋರಬೇಕು ಎಂದು ಒತ್ತಾಯಿಸಿದರು.

ಕನ್ನಡ ನಾಮಫಲಕ ಕಡ್ಡಾಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡ ಹೋರಾಟದ ನಂತರ ತಾವು ಕನ್ನಡಿಗರ ಬೇಡಿಕೆಗಳಿಗೆ ಸ್ಪಂದಿಸಿ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಿದ್ದಿರಿ. ಇದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತ ಉದ್ಯೋಗಕ್ಕೆ ಸಂಬಂಧಿಸಿದ ಕಾಯ್ದೆಯನ್ನೂ ಜಾರಿ ಮಾಡಿದರೆ ತಮ್ಮನ್ನು ಕನ್ನಡದ ಮುಂದಿನ ಪೀಳಿಗೆ ಕೃತಜ್ಞತೆಯಿಂದ ನೆನೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕಾಯ್ದೆ ಜಾರಿಮಾಡುವಂತೆ ಈ ಮೂಲಕ ಕೋರುತ್ತೇವೆ ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಸೀತರಾಮು, ಕಾರ್ಮಿಕ ಘಟಕದ ಬೋರೇಗೌಡ, ಅಭಿ ಗೌಡ, ಯುವ ಘಟಕದ ಅಧ್ಯಕ್ಷ ಪ್ರೀತಮ್ ರಾಜ್, ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಸಮೀರ್ ಅಹಮದ್, ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್‌, ಆಲೂರು ತಾಲೂಕು ಅಧ್ಯಕ್ಷ ನಟರಾಜ್, ತನುಗೌಡ, ಅರಸೀಕೆರೆ ತಾಲೂಕು ಹೇಮಂತ್‌, ನಗರ ಅಧ್ಯಕ್ಷ ಶಿವಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ಇತರರು ಉಪಸ್ಥಿತರಿದ್ದರು.

Share this article