ಹಾವೇರಿ: ಸರ್ಕಾರ ಹಾಲಿನ ದರವನ್ನು ₹4 ಏರಿಸಿದ್ದರೂ ಹಾವೇರಿ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ₹3.50 ಕಡಿತ ಮಾಡಿದೆ. ಈ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಏ. 7ರಿಂದ ಹಾವೆಮುಲ್ ಆಡಳಿತ ಕಚೇರಿ ಎದುರು ನಿರಂತರ ಧರಣಿ ನಡೆಸುವುದು ನಿಶ್ಚಿತ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.ನಗರದ ಹಾವೇರಿ ಹಾಲು ಒಕ್ಕೂಟದ ಆಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಡಳಿತ ಮಂಡಳಿ ನಿರ್ದೇಶಕರು ಮತ್ತು ರೈತ ಸಂಘಟನೆಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಸಿಯುತ್ತದೆ. ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದರೂ ಅದರ ಲಾಭ ಜಿಲ್ಲೆಯ ರೈತರಿಗೆ ಸಿಗದಂತಾಗಿದೆ. ಇದು ಒಕ್ಕೂಟವು ರೈತರಿಗೆ ಮಾಡುವ ಮೋಸವಾಗಿದೆ. ನಷ್ಟದ ನೆಪ ಹೇಳಿ ರೈತರಿಗೆ ಮೋಸ ಮಾಡಿದರೆ ಸಹಿಸುವುದಿಲ್ಲ. ಇಲ್ಲಿನ ಅಧಿಕಾರಿಗಳ ಮಾತು ಕೇಳಿ ಈ ನಿರ್ಧಾರ ತೆಗೆದುಕೊಂಡಿದ್ದೀರಿ. ಕೂಡಲೇ ಆ ಆದೇಶವನ್ನು ವಾಪಸ್ ಪಡೆಯಿರಿ. ಸಂಕಷ್ಟದ ನಡುವೆ ಹೋರಾಟ ಮಾಡಬೇಕಾದ ಸಂದಿಗ್ಧತೆಗೆ ನಾವೆಲ್ಲ ಸಿಲುಕಿದ್ದೇವೆ. ದರ ಕಡಿತದ ಠರಾವ್ ವಾಪಸ್ ಪಡೆಯದಿದ್ದರೆ ಹೋರಾಟ ಅನಿವಾರ್ಯ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ನಿಸ್ವಾರ್ಥ ಸೇವೆಗೆ ಎಲ್ಲ ನಿರ್ದೇಶಕರು ಬಂದಿದ್ದಾರೆ. ಆರು ತಿಂಗಳು ಸಮಯ ಕೊಡಿ. ಒಕ್ಕೂಟದ ಅಭಿವೃದ್ಧಿ ಮಾಡೋಣ. ಹಳ್ಳಿಮಟ್ಟದ ಸಹಕಾರಿ ಸಂಘಗಳ ಸಿಐಒಗಳಿಗೆ, ಸಂಸ್ಥೆಯಲ್ಲಿ ಇರುವ ಸಿಬ್ಬಂದಿಗೆ ತರಬೇತಿಯೇ ಇಲ್ಲ. ಇದರ ಕೊರತೆಯಿಂದ ತಾಂತ್ರಿಕವಾಗಿ ಸಂಸ್ಥೆ ಹಿಂದುಳಿದಿದೆ. ಪ್ರಾಥಮಿಕ ಹಂತದಲ್ಲಿ ಸೆಕ್ರೆಟರಿಗಳಿಗೆ ಕಡ್ಡಾಯವಾಗಿ ತರಬೇತಿ, ಹಾಲು ಪರೀಕ್ಷೆ, ಲೆಕ್ಕಪತ್ರ ನಿರ್ವಹಣೆ ಇತ್ಯಾದಿ ತರಬೇತಿ ನೀಡಲಾಗುವುದು. ಸಹಕಾರ ಇಲಾಖೆ ಅಧಿಕಾರಿಗಳು ಒಕ್ಕೂಟದೊಂದಿಗೆ ಸಂಪರ್ಕವೇ ಇಲ್ಲ ಎಂಬಂತಾಗಿದೆ. ಇಲ್ಲಿನ ಅಧಿಕಾರಿಗಳಿಗೂ ಕ್ಯಾಶ್ ಬುಕ್ ಬರೆಯೋದು ಗೊತ್ತಿಲ್ಲ. ಒಟ್ಟಾರೆ ವ್ಯವಸ್ಥೆ ಹಿಂದುಳಿದಿದೆ. ಇಲ್ಲಿನ ಸಿಬ್ಬಂದಿಗೆ ತಮ್ಮ ಕೆಲಸ, ಜವಾಬ್ದಾರಿ ಏನೆಂದು ಗೊತ್ತೇ ಇಲ್ಲ, ಯರ‍್ಯಾರೋ, ಏನೇನೋ ಕೆಲಸ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಕಳಪೆ ಹಾಲಿನ ಬಗ್ಗೆ ದೊಡ್ಡ ಜಾಲವೇ ಇದೆ. ಆದರೆ ಯಾರೂ ಹೆಸರು ಹೇಳುತ್ತಿಲ್ಲ, ದೂರನ್ನೂ ನೀಡುತ್ತಿಲ್ಲ. ಎಲ್ಲೆಲ್ಲಿ ಇಂತಹ ಘಟನೆಗಳು ನಡೆದಿವೆ ಎಂಬುದನ್ನು ನಮಗೆ ದೂರು ನೀಡಿದರೆ 4 ದಿನಗಳ ಒಳಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ನಿಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯ ನಿರ್ವಹಿಸುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯೋಣ. ಕಳಪೆ ಹಾಲಿನ ಜಾಲದ ನಿರ್ಮೂಲನೆ ಆದಾಗ ನಮ್ಮ ಒಕ್ಕೂಟ ಆರ್ಥಿಕವಾಗಿ ಮುಂದುವರಿಯಲು ಸಾಧ್ಯ. ಇನ್ನು ಹಾವೇರಿ ಒಕ್ಕೂಟವನ್ನು ಮಾತೃ ಒಕ್ಕೂಟವಾದ ಧಾರವಾಡದೊಂದಿಗೆ ಮತ್ತೆ ವಿಲೀನ ಮಾಡುತ್ತಾರೆ ಎಂಬ ಗೊಂದಲ ಸೃಷ್ಟಿಸಲಾಗುತ್ತಿದೆ. ಅದು ಸಂಪೂರ್ಣ ಸುಳ್ಳು. ಯಾವುದೇ ಕಾರಣಕ್ಕೂ ವಿಲೀನ ಆಗಲು ಬಿಡುವುದಿಲ್ಲ. ಅದೇ ರೀತಿ ತರಬೇತಿ ಪಡೆಯದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು. ಸಹಕಾರಿ ಕಾನೂನು ಅಡಿಯಲ್ಲಿ ಒಟ್ಟು ವಹಿವಾಟಿನ ಶೇ. 3ರಷ್ಟನ್ನು ಸಿಬ್ಬಂದಿ ವೆಚ್ಚವಾಗಿ ಖರ್ಚು ಮಾಡಬಹುದು. ಅದರಂತೆ ಇಲ್ಲಿ ₹5 ಕೋಟಿ ಬದಲಾಗಿ ವಾರ್ಷಿಕವಾಗಿ ₹9.50 ಕೋಟಿ ವೆಚ್ಚ ಮಾಡಲಾಗುತ್ತಿದೆ. ಶೇ. 50ರಷ್ಟು ಸಿಬ್ಬಂದಿ ಹೆಚ್ಚಾಗಿದೆ. ಹೊರ ಗುತ್ತಿಗೆಯಡಿ ನೇಮಕ ಮಾಡಲಾಗಿದೆ. ಇಂತಹ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಇನ್ನು ಗುಣಮಟ್ಟದ ಹಾಲನ್ನೇ ಖರೀದಿಸುವಂತೆ ಹಾಲು ಉತ್ಪಾದಕ ಸಂಘಗಳಿಗೆ ತಿಳಿಸಲಾಗಿದೆ. ಕಡಿಮೆ ಕ್ವಾಲಿಟಿ ಹಾಲು ಪಡೆದಲ್ಲಿ ಒಕ್ಕೂಟಕ್ಕೆ ನಷ್ಟ ಆಗುತ್ತದೆ. ಹೀಗಾಗಿ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಧಾರವಾಡ ಹಾಲು ಒಕ್ಕೂಟದ ಪಶುಆಹಾರ ಚೆನ್ನಾಗಿದೆ ಎನ್ನಲಾಗಿದೆ. ಅವರಿಂದ ನಮ್ಮ ಒಕ್ಕೂಟ ಬೇರ್ಪಟ್ಟಾಗ ನಮಗೆ ₹9 ಕೋಟಿ ಅನುದಾನ ಬರಬೇಕಿದೆ. ಈ ಎಲ್ಲ ವಿಚಾರಗಳೊಂದಿಗೆ ಅಲ್ಲಿನ ಅಧ್ಯಕ್ಷರ ಭೇಟಿಗೆ ತೀರ್ಮಾನಿಸಿದ್ದೇವೆ. ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಒಂದು ಲೀಟರ್ ಹಾಲಿಗೆ ₹2.50 ಕಮಿಷನ್ ಕೊಡುತ್ತೇವೆ. ಬೇರೆ ಸಂಸ್ಥೆಯವರು ₹3.50ರಿಂದ ₹4 ನೀಡುತ್ತಿದ್ದಾರೆ. ಮಾರಾಟ ಮಳಿಗೆಗಳ ಹೆಚ್ಚಳಕ್ಕೂ ಒತ್ತು ನೀಡಲಾಗುವುದು. ಪ್ರತಿ ತಾಲೂಕಿನಲ್ಲಿ ಡೀಲರ್‌ಗಳ ಸಭೆ ಕರೆದು, ಅಧಿಕಾರಿಗಳನ್ನೂ ಸೇರಿಸಿಕೊಂಡು ಚರ್ಚೆ ಮಾಡಿ ಸಮಸ್ಯೆ ಪರಿಹರಿಸಿ, ದಿನದ 24 ಗಂಟೆ ಹಾಲು ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಒಕ್ಕೂಟ ಉಳಿಸಲು ರೈತರು ಅಗತ್ಯ ಸಹಕಾರ ನೀಡಿ, ಸಂಸ್ಥೆಯನ್ನು ಸದೃಢವಾಗಿಸಲು ಅವಕಾಶ ಕೊಡಿ. ರೈತರ ಕಲ್ಯಾಣಕ್ಕೆ ಶ್ರಮಿಸೋಣ ಎಂದು ರೈತ ನಾಯಕರಲ್ಲಿ ಮನವಿ ಮಡಿದರು.ಈ ವೇಳೆ ಹಾವೇಮುಲ್ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ನಿರ್ದೇಶಕರಾದ ಚಂದ್ರಪ್ಪ ಜಾಲಗಾರ, ಅಶೋಕ ಪಾಟೀಲ, ಶಶಿಧರ ಯಲಿಗಾರ, ತಿಪ್ಪಣ್ಣ ಸಾತಣ್ಣನವರ, ಪ್ರಕಾಶ ಬನ್ನಿಹಟ್ಟಿ, ಬಸವೇಶ್ವರಗೌಡ ಪಾಟೀಲ, ಶಂಕರಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ. ಅಶೋಕಗೌಡ ಇದ್ದರು.