ಕನ್ನಡಪ್ರಭ ವಾರ್ತೆ ಚಿತ್ತಾಪುರ
ಹುಬ್ಬಳ್ಳಿ ನಗರದ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆಯನ್ನು ಕೋಲಿ ಸಮಾಜವು ಉಗ್ರವಾಗಿ ಖಂಡಿಸುತ್ತದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ರಾಮಲಿಂಗ ಬಾನರ್ ತಿಳಿಸಿದರು.ಪಟ್ಟಣದಲ್ಲಿ ಪ್ರತಿಭಟನೆ ನಂತರ ಮಾತನಾಡಿದ ಅವರು, ಪ್ರೀತಿಯ ಹೆಸರಿನಲ್ಲಿ ಕೊಲೆ ಮಾಡುವ ಘಟನೆಗಳು ಸಮಾಜದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಹೆಣ್ಣು ಮಕ್ಕಳ ಸುರಕ್ಷತೆಯ ಕುರಿತು ಪೋಷಕರು ಭಯ, ಆತಂಕದಲ್ಲಿ ಜೀವನ ಮಾಡುವಂತಹ ವಾತಾವರಣ ಸೃಷ್ಟಿಯಾಗಿದೆ. ಇಂತಹ ಭಯ, ಆತಂಕ ನಿವಾರಣೆ ಮಾಡುವ ಜವಬ್ದಾರಿ ಸರ್ಕಾರದ ಮೇಲಿದೆ. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರವು ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಅಂಜಲಿ ತನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಕೂಡಾ ಪೊಲೀಸ್ ಇಲಾಖೆ ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿಯ ವಿರುದ್ಧ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಡೆಗಣನೆ ಹಾಗೂ ಕರ್ತವ್ಯ ಲೋಪ ಎಸಗಿದ್ದರಿಂದ ಅಂಜಲಿ ಕೊಲೆ ನಡೆದಿದೆ. ಇಂತಹ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.ಅಂಜಲಿ ಕುಟುಂಬಕ್ಕೆ ಸರ್ಕಾರವು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸುವ ಮೂಲಕ ಸೂಕ್ತ ಪರಿಹಾರ ಧನವನ್ನು ನೀಡುವುದಲ್ಲದೇ ಸರ್ಕಾರವೇ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಒತ್ತಾಯಿಸುವ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಕೋಲಿ ಸಮಾಜದ ಮುಖಂಡರಾದ ಹಣಮಂತ ಸಂಕನೂರ, ಮಲ್ಲಿಕಾರ್ಜುನ ಎಮ್ಮೆನೋರ, ಸುರೇಶ ಬೆನಕನಹಳ್ಳಿ, ಭೀಮಣ್ಣ ಹೊತಿನಮಡಿ, ಗುಂಡು ಐನಾಪುರ, ದಶರಥ ದೊಡ್ಮನಿ, ತಮ್ಮಣ್ಣ ಡಿಗ್ಗಿ, ಶರಣು ಮುಡಬೂಳ, ರಾಜೇಶ ಹೊಳಿಕಟ್ಟಿ, ದೇವಿಂದ್ರ ಅಣಕಲ್, ನಾಗೇಂದ್ರ ಜೈಗಂಗಾ, ಕರಣ ಅಲ್ಲೂರ, ಸಾಬಣ್ಣ ಹೊಳಿಕಟ್ಟಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.