ಕೆಪಿಎಸ್ ಮ್ಯಾಗ್ನೆಟ್ ಶಾಲೆ ವಿರೋಧಿಸಿ ದೇವಸಮುದ್ರದಲ್ಲಿ ಪ್ರತಿಭಟನೆ

KannadaprabhaNewsNetwork |  
Published : May 25, 2026, 02:30 AM IST
ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಕ್ರಮವನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಪ್ರತಿಭಟನಾಕಾರರು ಸರ್ಕಾರದ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಕಂಪ್ಲಿ: ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಕ್ರಮವನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ), ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ತಾಲೂಕಿನ ದೇವಸಮುದ್ರ ಗ್ರಾಮದ ಸಹಿಪ್ರಾ ಶಾಲೆ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಸರ್ಕಾರದ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಶಾಲೆ ವ್ಯವಸ್ಥೆಯಿಂದಾಗಿ ಬಡವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು, ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮದಲ್ಲೇ ಇರುವ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳನ್ನು ನಾಲ್ಕೈದು ಕಿ.ಮೀ. ದೂರದ ಶಾಲೆಗಳಿಗೆ ಕಳುಹಿಸುವ ಪರಿಸ್ಥಿತಿ ಬಂದರೆ ಪೋಷಕರಿಗೂ ಹೆಚ್ಚುವರಿ ಹೊರೆ ಆಗಲಿದೆ. ಪ್ರತಿದಿನ ದೂರ ಪ್ರಯಾಣ ಮಾಡಬೇಕಾದ ಕಾರಣ ಪುಟ್ಟ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಹೈರಾಣಾಗುವ ಸಾಧ್ಯತೆ ಇದೆ. ಇದರಿಂದ ಶಾಲೆ ಬಿಟ್ಟುಕೊಡುವವರ ಸಂಖ್ಯೆ ಹೆಚ್ಚಾಗುವ ಆತಂಕವೂ ಎದುರಾಗಲಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳು ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣದ ಆಧಾರವಾಗಿದ್ದು, ಅವುಗಳನ್ನು ಬಲಪಡಿಸುವ ಬದಲು ಮುಚ್ಚುವ ಕ್ರಮ ಸರಿಯಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಎಐಕೆಕೆಎಂಎಸ್ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದ ಮಾತನಾಡಿ, ಶಿಕ್ಷಣ ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು. ಗ್ರಾಮೀಣ ಮಕ್ಕಳಿಗೆ ಸಮೀಪದಲ್ಲೇ ಶಿಕ್ಷಣ ಸಿಗುವ ವ್ಯವಸ್ಥೆ ಉಳಿಯಬೇಕು. ಸರ್ಕಾರ ತಕ್ಷಣ ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಹಿಂಪಡೆದು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಉಳಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಕರಿಯಪ್ಪ, ಮಲ್ಲಿಕಾರ್ಜುನ, ಸಿದ್ದಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟದ ಶಿಕ್ಷಣವೇ ಸರ್ಕಾರಿ ಶಾಲೆಗಳ ಮೂಲ ಆಶಯ: ನಾಗೇಂದ್ರಪ್ಪ
ಆರೋಗ್ಯಪೂರ್ಣ ಜೀವನಕ್ಕೆ ಬ್ಲಡ್ಡು, ದುಡ್ಡು ಬೇಕು-ಶಿವಬಸವ ಶ್ರೀ