ಹಕ್ಕುಪತ್ರ ವಿತರಿಸುವಂತೆ ಕುಂದಗೋಳ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ

KannadaprabhaNewsNetwork | Published : Dec 27, 2024 12:45 AM

ಸಾರಾಂಶ

915 ಮನೆಗಳಿಂದ ಪ್ರತಿ ವರ್ಷ ಕರ, ನೀರಿನ ಬಿಲ್‌ ಸೇರಿದಂತೆ ಎಲ್ಲ ಕರ ವಸೂಲಾತಿ ಮಾಡಲಾಗುತ್ತಿದೆ. ಆದರೆ, ಈ ವರೆಗೂ ಒಂದೇ ಒಂದು ಮನೆಗೂ ಹಕ್ಕುಪತ್ರ ವಿತರಿಸಿಲ್ಲ.

ಕುಂದಗೋಳ:

ನಮ್ಮಿಂದ ಪ್ರತಿ ವರ್ಷವೂ ಗ್ರಾಮ ಪಂಚಾಯಿತಿಯಲ್ಲಿ ಕರ ವಸೂಲಿ, ನೀರಿನ ಬಿಲ್‌, ಕರೆಂಟ್‌ ಬಿಲ್ ವಸೂಲಿ ಮಾಡುತ್ತಿದ್ದಾರೆ. ಆದರೆ, ಈ ವರೆಗೂ ನಮಗೆ ಮನೆಯ ಹಕ್ಕುಪತ್ರ ವಿತರಿಸಿಲ್ಲ ಎಂದು ತಾಲೂಕಿನ ಸಂಶಿ ಗ್ರಾಮಸ್ಥರು ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಶಿ ಗ್ರಾಮದ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಕ್ರಮ ಸಕ್ರಮದ ಸರ್ವೇ ನಂಬರ 75, 76ರಲ್ಲಿ ವಾಸವಾಗಿರುವ ಅಂದಾಜು 915 ಮನೆಗಳಿಂದ ಪ್ರತಿ ವರ್ಷ ಕರ, ನೀರಿನ ಬಿಲ್‌ ಸೇರಿದಂತೆ ಎಲ್ಲ ಕರ ವಸೂಲಾತಿ ಮಾಡಲಾಗುತ್ತಿದೆ. ಆದರೆ, ಈ ವರೆಗೂ ಒಂದೇ ಒಂದು ಮನೆಗೂ ಹಕ್ಕುಪತ್ರ ವಿತರಿಸಿಲ್ಲ. ಈ ಕುರಿತು ಗ್ರಾಪಂ ಅಧ್ಯಕ್ಷರಿಗೆ ಹಾಗೂ ಪಿಡಿಒಗಳಿಗೆ ಕೇಳಿದರೆ ಈ ಎರಡೂ ಸರ್ವೇ ಸಂಖ್ಯೆಯ ಆಸ್ತಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಹೀಗಾದರೆ ಹೇಗೆ ಎಂದು ರೈತ ನಾಯಕ ಪರಮೇಶಪ್ಪ ನಾಯ್ಕರ ಆಕ್ರೋಶ ವ್ಯಕ್ತಪಡಿಸಿದರು.

ನಾವು ಬಡವರು, ನಾವು ದಿನನಿತ್ಯ ದುಡಿದು ಜೀವನ ಸಾಗಿಸಬೇಕು. ಒಂದು ಮನೆಗೆ 5-6 ಬಿಲ್‌ ವಸೂಲಿ ಮಾಡಿದ್ದಾರೆ. ಅದಕ್ಕೆ ಯಾವುದೇ ರೀತಿಯ ರಶೀದಿ ನೀಡಿಲ್ಲ. ನೀವು ಟ್ಯಾಕ್ಸ್‌ ತುಂಬದಿದ್ದರೆ ಮನೆ ಖಾಲಿ ಮಾಡಲು ನೋಟಿಸ್ ಕಳಿಸುತ್ತಾರೆ. ಆದ್ದರಿಂದ ನಾವು ಸಾಲ-ಸೂಲ ಮಾಡಿ ಬಂಗಾರ ಅಡವಿಟ್ಟು ಹಣ ತುಂಬಿದ್ದೇವೆ. ಆದರೆ, ಈ ವರೆಗೂ ಹಕ್ಕುಪತ್ರ ವಿತರಿಸಿಲ್ಲ ಎಂದು ನಾಗರತ್ನ ಯಲಿವಾಳ, ರೇಣಮ್ಮ ಕುಂದಗೋಳ, ಫಕ್ಕೀರವ್ವ ಬ್ಯಾಹಟ್ಟಿ, ರೇಖಾ ಆದಿ, ಲಲಿತವ್ವ ಹಕಾರಿ, ಗಂಗವ್ವ ಬಾರಕೇರ, ನೀಲವ್ವ ಹಡಪದ ಸೇರಿದಂತೆ ಅನೇಕ ಮಹಿಳಿಯರು ಆರೋಪಿಸಿದರು.

ಈ ವೇಳೆ ಗಂಗಾಧರ ಕುಬುಸದ, ಬಸವರಾಜ ಬಾಲೇಹೊಸೂರ, ದೇವಪ್ಪ ಹಿರೇವಾಡಿ, ನಾಗರಾಜ ಹೆಬಸೂರ, ಚನ್ನಪ್ಪ ಹೊಸಮನಿ, ಫಾತೀಮಾ ಕಳಸದ, ನಾಗಮ್ಮ ಕಮಡೋಳ್ಳಿ, ಶಾಂತಮ್ಮ ಹಿರೇಮಠ, ಮಾದೇವಿ ಘೋರ್ಪಡೆ, ರಮಿಜಾ ಜಾಕತ್ತಿ, ಗರಿಬಿ ಜಾಕತ್ತಿ, ರೇಖಾ ಆದಿ, ಶಾಂತವ್ವ ಅಕ್ಕಿ ಸೇರಿದಂತೆ ಅನೇಕರಿದ್ದರು.

Share this article