ಬಾಕಿ ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿ ದೇವದಾಸಿಯರ ಪ್ರತಿಭಟನೆ

KannadaprabhaNewsNetwork |  
Published : Jun 06, 2024, 12:30 AM IST
ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಬಳ್ಳಾರಿ ಡಿಸಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆಗೆ ಕ್ರಮ ವಹಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯ ಅನೇಕ ಮಾಜಿ ದೇವದಾಸಿಯರಿಗೆ 2020ರಿಂದ ಈ ವರೆಗೆ ಗೌರವಧನ ಬಿಡುಗಡೆಯಾಗಿಲ್ಲ. ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಿದರೂ ಪ್ರೋತ್ಸಾಹಧನ ವಿತರಣೆಯಾಗಿಲ್ಲ. ವೃದ್ಧಾಪ್ಯದಲ್ಲಿರುವ ಇವರಿಗೆ ಕೆಲಸ ಮಾಡಲು ಕಷ್ಟವಾಗಿದೆ. ಇದರಿಂದ ಜೀವನ ನಿರ್ವಹಣೆಯೂ ಮತ್ತಷ್ಟೂ ಜಟಿಲವಾಗಿದೆ.2017 ಮತ್ತು 2020ರ ವರೆಗೆ ಕೆಲ ದೇವದಾಸಿಯರಿಗೆ ಆಶ್ರಯ ಮನೆಗಳು ಆಯ್ಕೆಯಾಗಿವೆ. ಆದರೆ, ಮನೆ ಕಟ್ಟಿಕೊಳ್ಳುವುದಕ್ಕೆ ಆದೇಶ ಪತ್ರ ನೀಡಿಲ್ಲ. ಇನ್ನು ಕೆಲವು ದೇವದಾಸಿಯರಿಗೂ ಮನೆಗಳು ಕಟ್ಟಿಕೊಳ್ಳುವುದಕ್ಕೆ ಅರ್ಜಿಯನ್ನು ಹಾಕಿದ್ದು, ಈ ವರೆಗೆ ವಿಲೇವಾರಿ ಮಾಡಲಾಗಿಲ್ಲ. ದೇವದಾಸಿಯರ ಮನೆ ನಿರ್ಮಾಣದಲ್ಲಿ ಎಲ್ಲೂ ಪ್ರಗತಿ ಕಂಡು ಬರುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎ. ಸ್ವಾಮಿ ಹಾಗೂ ಕಾರ್ಯದರ್ಶಿ ಎಚ್. ದುರುಗಮ್ಮ ಮಾತನಾಡಿ, 1993ರಿಂದ 2008ರ ವರೆಗೆ ಸರ್ಕಾರವೇ ಸರ್ವೆ ಮಾಡಿ ಗುರುತಿಸಲ್ಪಟ್ಟ ದೇವದಾಸಿಯರಿಗೆ ದೇವದಾಸಿ ದೃಢೀಕರಣ ಪತ್ರ ನೀಡಬೇಕು. ದೇವದಾಸಿಯರು ಈಗಾಗಲೇ ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಹಾಕಿದ್ದು, ಅವರಿಗೆ ಬೋರ್ ವೆಲ್ ಕೊರಿಸಿ ಕೊಡಬೇಕು. ಪ್ರತಿ ತಿಂಗಳು ಪ್ರೋತ್ಸಾಹಧನ ವಿತರಣೆಯಾಗುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರಲ್ಲದೆ, ದೇವದಾಸಿ ವಿಮೋಚನಾ ಸಂಘದಿಂದ ಈಗಾಗಲೇ ಅನೇಕ ಬಾರಿ ಹೋರಾಟಗಳನ್ನು ಹಮ್ಮಿಕೊಂಡಿದ್ದು, ಬಹುತೇಕ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಕೂಡಲೇ ಶೋಷಿತ ಸಮುದಾಯದ ಬೇಡಿಕೆಗಳತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಪದಾಧಿಕಾರಿಗಳಾದ ಎಚ್. ಯಂಕಮ್ಮ, ಹುಲಿಗೆಮ್ಮ, ಎಚ್. ವೀರೇಶ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರಕ್ಕೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ