ಬಡವರಿಗೆ ನಿವೇಶನ ಒದಗಿಸಲು ಅ. 8ರಂದು ಪ್ರತಿಭಟನಾ ಧರಣಿ

KannadaprabhaNewsNetwork | Published : Aug 4, 2024 1:21 AM

ಸಾರಾಂಶ

ನಗರದ ನಾಗರಿಕರಿಂದ ನಿವೇಶನ ನೀಡುವುದಾಗಿ ಹೇಳಿ ಲಕ್ಷಾಂತರ ಸಂಗ್ರಹ ಮಾಡಲಾಗಿದೆ. ಆದರೆ, ಪ್ರಾಧಿಕಾರ ಇದು ವರೆಗೆ ಯಾವುದೇ ಕ್ರಮವಹಿಸಿಲ್ಲ.

ಹೊಸಪೇಟೆ: ನಗರದ ಬಡ ಜನರಿಗೆ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿ ಅ. 8ರಂದು ನಗರದ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ವಿಜಯನಗರ ಪ್ರಜಾ ವೇದಿಕೆಯ ಅಧ್ಯಕ್ಷ ವೈ.ಗೋವಿಂದರಾಜ್‌ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 2014ರಲ್ಲಿ ತಲಾ ₹10 ಸಾವಿರದಂತೆ ನಗರದ ನಾಗರಿಕರಿಂದ ನಿವೇಶನ ನೀಡುವುದಾಗಿ ಹೇಳಿ ಲಕ್ಷಾಂತರ ಸಂಗ್ರಹ ಮಾಡಲಾಗಿದೆ. ಆದರೆ, ಪ್ರಾಧಿಕಾರ ಇದು ವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.

ನಗರದ ವಿವಿಧ ಭಾಗಗಳಲ್ಲಿ ಲೇಔಟ್ ಮಾಡಿ 30/20, 40/30 ನಿವೇಶನಗಳನ್ನು ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡಿದ್ದು, ಈ ಬಗ್ಗೆ ಕೇಳಿದರೆ ಪ್ರಾಧಿಕಾರದ ಅಧಿಕಾರಿಗಳು ಸರಿಯಾದ ಉತ್ತರ ನೀಡುತ್ತಿಲ್ಲ. ಕಳೆದ 30 ವರ್ಷಗಳ ಹಿಂದೆ ಸಂತಾನಹರಣ ಚಿಕಿತ್ಸೆ ಮಾಡಿಕೊಂಡಿದ್ದ 76 ಬಡವರಿಗೆ ನಗರದ ಹೊರವಲಯದ ಸರ್ವೇ ನಂ. 189, 190,191ರಲ್ಲಿ 30/40 ಅಳತೆಯ ನಿವೇಶನ ನೀಡಿಲಾಗಿತ್ತು. ಆದರೆ ಅವರಿಗೆ ಇದುವರೆಗೆ ಪಟ್ಟಾ ನೀಡಿಲ್ಲ ಎಂದು ಆರೋಪಿಸಿದರು.

ನಗರದ ಜೆ.ಪಿ. ನಗರದ ಸರ್ವೇ ನಂ. 123ರಲ್ಲಿ ವಾಸ ಮಾಡುವ ಬಡ ಜನರಿಗೆ ಪಟ್ಟಾ ನೀಡಬೇಕು. ಸ್ಥಳೀಯ ಐ.ಎಸ್.ಆರ್. ಸಕ್ಕರೆ ಕಾರ್ಖಾನೆಯನ್ನು ಮತ್ತೆ ಪ್ರಾರಂಭ ಮಾಡಬೇಕು. ನಗರದ 35 ವಾರ್ಡ್‌ಗಳಲ್ಲಿರುವ ಎಲ್ಲ ವರ್ಗದ ನಿವೇಶನ ರಹಿತ ಬಡಜನರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಅ. 8ರಂದು ನಗರದ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಧರಣಿಯನ್ನು ನಡೆಸಲಾಗುವುದು ಎಂದರು.

ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತು ಹಾಲಿ, ಮಾಜಿ ಶಾಸಕರು ರಾಜಕಾರಣ ಮಾಡುತ್ತಿದ್ದು. ಇದರಿಂದ ತಾಲೂಕಿನ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಖಾನೆ ಸ್ಥಾಪನೆಗೆ ಸ್ಥಳ ಗುರುತಿಸುವ ಕುರಿತು ಮಾಜಿ ಸಚಿವ ಆನಂದ ಸಿಂಗ್ ಮತ್ತು ಹಾಲಿ ಶಾಸಕ ಎಚ್.ಆರ್. ಗವಿಯಪ್ಪ ಅವರ ನಡುವೆ ರಾಜಕೀಯ ಜಟಾಪಟಿ ಆರಂಭವಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಸ್ಥಗಿತಗೊಂಡಿರುವ ಐ.ಎಸ್.ಆರ್. ಸಕ್ಕರೆ ಕಾರ್ಖಾನೆಯನ್ನು ಮಾಲೀಕರ ಜತೆ ಮಾತುಕತೆ ನಡೆಸಿ ಆರಂಭ ಮಾಡಬೇಕು ಎಂದರು.

ಮುಖಂಡರಾದ ಬಿ.ಆರ್. ಶರತ್ ಬಾಬು, ಶೈನಾಜ್, ಶಮ್‌ಷಾದ್ ಬೇಗಂ, ಅಕ್ಬರ್, ಲಿಂಗಪ್ಪ ಇತರರಿದ್ದರು.

Share this article