ಕನ್ನಡಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನ ವಾಡಿ ಪಟ್ಟಣವು ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದ ನರಕದಂತಿದೆ. ಮೂತ್ರಾಲಯದಂತಹ ಮೂಲ ಸೌಕರ್ಯ ಒದಗಿಸಲು ಇಲ್ಲಿನ ಆಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ. ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿದರು. ಭೀಮಾ ನದಿಯಿಂದ ಕುಡಿಯಲು ಸರಬರಾಜು ಆಗುತ್ತಿರುವ ನೀರು ಶುದ್ಧೀಕರಣವಿಲ್ಲ. ನಗರದ ಯಾವೂದೇ ಸ್ಥಳದಲ್ಲಿ ಪುರಸಭೆಯಿಂದ ಮೂತ್ರಾಲಯಗಳು ನಿರ್ಮಿಸಿಲ್ಲ. ಸುಲಭ ಶೌಚಾಲಯ, ನಗರ ಬಸ್ ನಿಲ್ದಾಣ, ಗ್ರಂಥಾಲಯ, ಉದ್ಯಾನವನ, ಕ್ರೀಡಾಂಗಣ, ಸರ್ಕಾರಿ ಕಾಲೇಜು, ಮಾರುಕಟ್ಟೆ, ರೈಲ್ವೆ ಒಳಸೇತುವೆ, ಮಿನಿ ಬಸ್ ನಿಲ್ದಾಣಗಳು ಸೇರಿದಂತೆ ಹಲವು ಸೌಲಭ್ಯಗಳಿಂದ ಜನರನ್ನು ವಂಚಿಸಲಾಗಿದೆ. ಸ್ವಾತಂತ್ರ್ಯ ದೊರೆತು ೭೫ ವರ್ಷ ಕಳೆದರೂ ವಾಡಿ ನಗರ ನೂರಾರು ಸಮಸ್ಯೆಗಳಿಂದ ನಲುಗುತ್ತಿದೆ. ಇಲ್ಲಿನ ಜನರಿಗೆ ಸರ್ಕಾರ ಯಾವೂದೇ ಸೌಲಭ್ಯ ಒದಗಿಸದಿರುವುದು ಜನದ್ರೋಹವಾಗಿದೆ ಎಂದು ದೂರಿದರು.
ಮಾರುಕಟ್ಟೆಗೆ ಬರುವ ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಶೌಚಾಲಯ ಸೌಲಭ್ಯ ಕೊರತೆಯಿಂದ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಬಿಸಿಲಲ್ಲಿ, ಮಳೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ರಸ್ತೆಯ ದೂಳು ಜನರ ಜೀವ ಹಿಂಡುತ್ತಿದೆ. ಅಸ್ತಮಾ, ಶ್ವಾಸಕೋಶ ಸಮಸ್ಯೆಗಳು ಜನರ ಕರುಳು ತಿನ್ನುತ್ತಿವೆ. ನೀರು ಶುದ್ದೀಕರಣ ತೃಪ್ತಿದಾಯಕವಿಲ್ಲ. ಕೋಟಿಗಟ್ಟಲೆ ತೆರಿಗೆ ಸಂಗ್ರಹವಿದ್ದರೂ ಜನಪರ ಕೆಲಸಗಳು ನಡೆಯುತ್ತಿಲ್ಲ. ಇದು ಅಧಿಕಾರಿಗಳ ಅತ್ಯಂತ ಬೇಜವಾಬ್ದಾರಿ ನಡೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.ಜನಧ್ವನಿ ಜಾಗೃತ ಸಮಿತಿಯ ಗೌರವಾಧ್ಯಕ್ಷ ವಿ.ಕೆ.ಕೆದಿಲಾಯ ಮಾತನಾಡಿ, ಕನಿಷ್ಠ ಮೂಲಸೌಕರ್ಯ ಕೊಡದೇ ಜನರ ನರಳಾಟಕ್ಕೆ ಕಾರಣವಾಗಿರುವ ಸ್ಥಳೀಯ ಪುರಸಭೆ ಆಡಳಿತದ ಬೇಜವಾಬ್ದಾರಿ ಕ್ರಮ ಖಂಡಿಸಿ ಫೆ.೧೭ರಂದು ವಾಡಿ ಪಟ್ಟಣದಲ್ಲಿ ಜನಧ್ವನಿ ಜಾಗೃತ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ರೈಲು ನಿಲ್ದಾಣ ಮುಂದೆ ದಿನವಿಡೀ ಹೋರಾಟ ನಡೆಯಲಿದ್ದು, ಪಟ್ಟಣದ ಹನುಮಾನ ನಗರ, ವಿಜಯನಗರ, ರೈಲ್ವೆ ಕಾಲೋನಿ, ಪಿಲಕಮ್ಮಾ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ನೂರಾರು ಜನರು ಈ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನಪರವಾಗಿ ಚಿಂತಿಸುವ ಪ್ರತಿಯೊಬ್ಬರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಜನಧ್ವನಿ ಜಾಗೃತಿ ಸಮಿತಿ ಉಪಾಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ, ಗೌರವ ಸಲಹೆಗಾರರಾದ ಜಯದೇವ ಜೋಗಿಕಲ್‌ಮಠ, ಮುಖಂಡರಾದ ರಮೇಶ ಮಾಶಾಳ, ಮಹ್ಮದ್ ಯೂಸೂಪ್‌ಸಾಬ ಕಮರವಾಡಿ, ಹರೀಶ್ಚಂದ್ರ‍್ರ ಕರಣಿಕ, ಕೆ.ಮಹೇಬೂಬ ಸದ್ದಿಗೋಷ್ಠಿಯಲ್ಲಿ ಇದ್ದರು.