ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆ. 4ರಂದು ಪ್ರತಿಭಟನೆ

KannadaprabhaNewsNetwork |  
Published : Aug 31, 2025, 02:00 AM IST
ಸೆ.4ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ಎಐಯುಟಿಯುಸಿ ಹಮ್ಮಿಕೊಂಡಿರುವ ಅಖಿಲ ಭಾರತ ಕಾರ್ಮಿಕರ ಪ್ರತಿಭಟನೆಯ ಭಿತ್ತಿಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರು ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಕಾರ್ಮಿಕರ ಹಕ್ಕು ರಕ್ಷಿಸಬೇಕು ಹಾಗೂ ಸಾರ್ವಜನಿಕ ವಲಯ ಮತ್ತು ಸರ್ಕಾರಿ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸೆ. 4ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಅಖಿಲ ಭಾರತ ಮಟ್ಟದ ಕಾರ್ಮಿಕರ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕಾರ್ಮಿಕರ ಹಕ್ಕು ರಕ್ಷಿಸಬೇಕು ಹಾಗೂ ಸಾರ್ವಜನಿಕ ವಲಯ ಮತ್ತು ಸರ್ಕಾರಿ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸೆ. 4ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಅಖಿಲ ಭಾರತ ಮಟ್ಟದ ಕಾರ್ಮಿಕರ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿರುವ ಭಾರತದ ಪ್ರಗತಿಗೆ ಕಾರ್ಮಿಕರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಆದರೆ, ಈ ವರೆಗೆ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ದುಡಿವ ಜನರ ಹಿತ ಕಾಯುವ ಬದಲು ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವ ನೀತಿಗಳನ್ನೇ ಅನುಸರಿಸುತ್ತಾ ಬಂದಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ದುಡಿಯುವ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ನಾಶವಾಗುವ ಅಪಾಯ ಎದುರಾಗಿದೆ. ಬಂಡವಾಳ ಶಾಹಿಗಳ ಹಿತ ಕಾಯುವಕ್ಕಾಗಿಯೇ ಕಾರ್ಮಿಕ ವಿರೋಧಿ ನೀತಿಗಳ ಜಾರಿಗೆ ಕೇಂದ್ರ ಹೆಚ್ಚು ಆಸ್ಥೆ ವಹಿಸಿದೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಒಗ್ಗಟ್ಟಿನ ಹೋರಾಟ ಕಟ್ಟುವುದು ಅನಿವಾರ್ಯವಾಗಿದೆ. ದೆಹಲಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಚಳವಳಿ ಮುಂದಿನ ಹಂತದ ಹೋರಾಟಕ್ಕೆ ತಿರುವು ನೀಡಲಿದೆ ಎಂದರು.

ಕಾರ್ಮಿಕರ ಹಕ್ಕು ಕಸಿದುಕೊಳ್ಳುವ 4 ಕಾರ್ಮಿಕ ಕಾಯ್ದೆ ರದ್ದುಗೊಳಿಸಬೇಕು. ಸಾರ್ವಜನಿಕ ವಲಯ ಮತ್ತು ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಸರ್ಕಾರಿ ಸ್ವಾಮ್ಯದ ವಲಯ ಬಲಗೊಳಿಸಬೇಕು. ವಿದ್ಯುತ್ (ತಿದ್ದುಪಡಿ) ಮಸೂದೆ 2023 ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ರದ್ದುಗೊಳಿಸಬೇಕು.

ಕೆಲಸದ ಅವಧಿ ದಿನಕ್ಕೆ 8 ಗಂಟೆಗಷ್ಟೇ ಇರಬೇಕು. ಕಾಯಂ ನೌಕರರ ಸಂಖ್ಯೆಯ ಕಡಿತ ನಿಲ್ಲಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಏಕೀಕೃತ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಬೇಷರತ್ತಾಗಿ ಜಾರಿಗೆಗೊಳಿಸಬೇಕು. ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿ ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು ಎಂಬುದು ಸೇರಿದಂತೆ ಒಟ್ಟು 17 ಬೇಡಿಕೆಗಳನ್ನಿಟ್ಟುಕೊಂಡು ಅಖಿಲ ಭಾರತ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಅಖಿಲ ಭಾರತ ಕಾರ್ಮಿಕರ ಪ್ರತಿಭಟನೆಯ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಎ. ದೇವದಾಸ್, ಕಾರ್ಯದರ್ಶಿ ಡಾ. ಪ್ರಮೋದ್, ಉಪಾಧ್ಯಕ್ಷ ಸೋಮಶೇಖರ ಗೌಡ, ಎ. ಶಾಂತಾ, ಜಿ. ಸುರೇಶ್, ಗೀತಾ, ಕಿರಣ್‌ಕುಮಾರ, ಮುರಳೀಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ