ಕನ್ನಡಪ್ರಭ ವಾರ್ತೆ ಬೀದರ್
ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಾ.5ರಂದು ಪರಭಾಷೆ ನಾಮಫಲಕ ಕಿತ್ತೊಗೆದು ಕನ್ನಡ ನಾಮಫಲಕ ಅಳವಡಿಸುವಂತೆ ನಗರದಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲಾ-ಕಾಲೇಜು, ಹೊಟೇಲ್, ಬಟ್ಟೆ ಅಂಗಡಿ, ಮಾಲ್‌ಗಳು, ಆಸ್ಪತ್ರೆಗಳು ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ಶೇ.60ರಷ್ಟು ಕನ್ನಡ ಭಾಷೆಯುಳ್ಳ ನಾಮಫಲಕ ಅಳವಡಿಸಬೇಕು. ಇಲ್ಲದಿದ್ದರೆ ಪರಭಾಷೆ ನಾಮಫಲಕಗಳನ್ನು ಕಿತ್ತೆಸೆಯಲಾಗುವುದು ಎಂದರು.
ಮಾ.5ರಂದು ವೇದಿಕೆಯ ಸುಮಾರು 500 ರಿಂದ 600 ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ಐದು ತಂಡಗಳನ್ನು ರಚಿಸಲಾಗಿದೆ. ಒಂದೊಂದು ತಂಡದಲ್ಲಿ ಸುಮಾರು ನೂರು ಜನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಿದ್ಧಾರ್ಥ ಕಾಲೇಜಿನಿಂದ ಚಿಟ್ಟಾಕ್ರಾಸ್, ನೌಬಾದ, ಫತ್ತೆ ದರ್ವಾಜಾ, ಶಹಾಪುರ ಗೇಟ್ ಮೂಲಕ ಬಸವೇಶ್ವರ ವೃತ್ತದವರೆಗೆ ಪರಭಾಷೆ ನಾಮಫಲಕಗಳನ್ನು ಕಿತ್ತೊಗೆದು ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸಲಾಗುವುದು. ಅದಕ್ಕೂ ಕೇಳದಿದ್ದರೆ ಕಿತ್ತೆಸೆಯಲಾಗುವುದು ಎಂದು ತಿಳಿಸಿದರು.ಈ ಹಿಂದೆಯೂ ಕನ್ನಡ ನಾಮಫಲಕ ಬಳಸುವಂತೆ ನಗರದಲ್ಲಿ ಹೋರಾಟ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ, ನಗರಸಭೆಯವರಾಗಲಿ ಒಂದೇ ಒಂದು ಸಭೆ ಕರೆದಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಕಳೆದ ಡಿ.27ರಂದು ರಾಜ್ಯ ಸರ್ಕಾರ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ, ಸುಮಾರು 14 ದಿವಸಗಳ ಕಾಲ ನ್ಯಾಯಾಂಗ ಬಂಧನದಲ್ಲಿಟ್ಟಿದ್ದರು.ಡಿ.29ರಂದು ಸಿಎಂ ಸಿದ್ದರಾಮಯ್ಯ ಸಭೆ ಕರೆದು ಶೇ.60ರ ಅನುಪಾತದ ಅಡಿಯಲ್ಲಿ ಕನ್ನಡ ನಾಮಫಲಕ ಅಳವಡಿಸಲು ಸುಗ್ರೀವಾಜ್ಞೆ ಹೊರಡಿಸಿದ್ದರು. ಫೆ.28 ರವರೆಗೆ ಕೊನೆ ಗಡುವು ನೀಡಲಾಗಿತ್ತು. ಆದರೆ ಬಂಡವಾಳಶಾಹಿಗಳ ಓಲೈಕೆಗೆ ಸರ್ಕಾರ ಮತ್ತೆ ಎರಡು ವಾರಗಳ ಕಾಲ ವಿಸ್ತರಣೆ ಮಾಡಿದೆ. ಇದಕ್ಕೆ ನಾವು ಒಪ್ಪುವುದಿಲ್ಲ.
ಮಾ.5ರಂದು ಬೆಂಗಳೂರು ಗ್ರಾಮಾಂತರ ಮತ್ತು ನಗರ ಹೊರತುಪಡಿಸಿ ಇನ್ನುಳಿದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟ ಮಾಡಲಾಗುತ್ತಿದೆ ಎಂದು ಸೋಮನಾಥ ಮುಧೋಳ ತಿಳಿಸಿದರು.ಔರಾದ್ ತಾಲೂಕಾಧ್ಯಕ್ಷ ಅನೀಲ ಹೆಡೆ, ಬೀದರ್ ದಕ್ಷಿಣದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ಕಮಲನಗರ ತಾಲೂಕಾಧ್ಯಕ್ಷ ಸುಭಾಷ ಗಾಯಕವಾಡ, ಬೀದರ್ ಉತ್ತರದ ಅಧ್ಯಕ್ಷ ಸಚಿನ ಬೆನಕನಳ್ಳಿ, ಪ್ರಮುಖರಾದ ವಿನಾಯಕರೆಡ್ಡಿ ಬುಧೆರಾ, ವಿವೇಕ ನಿರ್ಮಳೆ, ಪ್ರಭು ಯಾಕತಪುರ, ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ಗೋಪಾಲ ಕುಲಕರ್ಣಿ, ಮಹೇಶ ಕಾಪಸೆ, ಲಕ್ಷ್ಮಣ ಅಟಕಾರ, ವಿಶ್ವನಾಥಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.