ಆಲೂರು ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Mar 11, 2025 12:46 AM

ಸಾರಾಂಶ

ಆಲೂರು ತಾಲೂಕಿನಲ್ಲಿ ಪ್ರತಿನಿತ್ಯ ವಿದ್ಯುತ್ ವ್ಯತ್ಯಯವಾಗುತ್ತಿದ್ದು ಕೃಷಿ ಜಮಿನಿಗೆ ನೀರನ್ನು ಹರಿಸಲು ಸಮರ್ಪಕ ವಿದ್ಯುತ್ ಸರಬರಾಜು ಮಾಡದೇ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ರೈತರಿಗೆ ಕೃಷಿ ಜಮೀನಿನಲ್ಲಿ ಬೆಳೆ ಬೆಳೆಯಲು ನೂತನ ವಿದ್ಯುತ್ ತಂತಿ ಮಾರ್ಗವನ್ನು ಕೂಡಲೇ ಸಕ್ರಿಯಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಅಲ್ಲದೆ ಉಪ ವಿಭಾಗ ಕೇಂದ್ರಗಳಲ್ಲಿ ಸುಟ್ಟು ಹೋಗುವ ಪರಿವರ್ತಗಳನ್ನು ಕೂಡಲೇ ಬದಲಾಯಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಕಳೆದ ಎರಡು ತಿಂಗಳಿನಿಂದ ತಾಲೂಕಿನಲ್ಲಿ ಪ್ರತಿನಿತ್ಯ ವಿದ್ಯುತ್ ವ್ಯತ್ಯಯವಾಗುತ್ತಿದ್ದು ಕೃಷಿ ಜಮಿನಿಗೆ ನೀರನ್ನು ಹರಿಸಲು ಸಮರ್ಪಕ ವಿದ್ಯುತ್ ಸರಬರಾಜು ಮಾಡದೇ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಚ್ ಪಿ ಧರ್ಮರಾಜ್ ಹುಣಸವಳ್ಳಿ ಅವರ ನೇತೃತ್ವದಲ್ಲಿ ಆಲೂರು ಚೆಸ್ಕಾಂ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಉದ್ದೇಶದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾವು ಹಲವಾರು ವರ್ಷಗಳಿಂದ ರೈತರ ಪರವಾಗಿ ಸೆಸ್ಕಾಂ ಇಲಾಖೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸೆಸ್ಕಾಂ ಇಲಾಖೆಯು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ತಾಲೂಕಿನಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಎರಡು ಮೂರು ಕೇಂದ್ರಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು(MUSS ) ತೆರೆದು ಕಣ್ಣ ಮುಚ್ಚಾಲೆ ಆಡುತ್ತಿರುವ ವಿದ್ಯುತ್ ಪೂರೈಕೆಯ ಆಟವನ್ನು ನಿಲ್ಲಿಸಿ ರೈತರಿಗೆ ಕೃಷಿ ಜಮೀನಿನಲ್ಲಿ ಬೆಳೆ ಬೆಳೆಯಲು ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಹಾಗೂ ಉಗನೆ ಮಾರ್ಗವಾಗಿ ಬಂದಿರುವ ನೂತನ ವಿದ್ಯುತ್ ತಂತಿ ಮಾರ್ಗವನ್ನು ಕೂಡಲೇ ಸಕ್ರಿಯಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಅಲ್ಲದೆ ಉಪ ವಿಭಾಗ ಕೇಂದ್ರಗಳಲ್ಲಿ ಸುಟ್ಟು ಹೋಗುವ ಪರಿವರ್ತಗಳನ್ನು ಕೂಡಲೇ ಬದಲಾಯಿಸಿ ಕೊಡಬೇಕು, ಅದಕ್ಕಾಗಿ ಬೇಕಾಗುವ ವಿದ್ಯುತ್ ಪರಿವರ್ತಕಗಳನ್ನು ಉಪ ವಿಭಾಗಗಳಲ್ಲಿ ಮುಂಗಡವಾಗಿ ಶೇಖರಿಸಿರಬೇಕು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ಬೇಕಾಗುವ ಸಾಮಗ್ರಿಗಳನ್ನು ಶಾಖೆಗಳಲ್ಲಿ ಹಾಗೂ ಉಪ ವಿಭಾಗದಲ್ಲಿ ಇಟ್ಟಿರಬೇಕು. ತಾಲೂಕಿನ ಎಲ್ಲಾ ರೈತರ ಮುಖಂಡರನ್ನು ಸಭೆ ಕರೆದು ರೈತರ ಸಮಸ್ಯೆಗಳನ್ನು ಅವರುಗಳಿಗೆ ಸ್ಪಂದಿಸಬೇಕು. ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವಿಧಿಸಿರುವ ನಿಯಮ ಮತ್ತು ನಿಬಂಧನೆಗಳನ್ನು ಸಡಿಲಗೊಳಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಕೃಷಿ ಜಮೀನಿಗೆ ನಿರಂತರ ವಿದ್ಯುತ್ ಸಂಪರ್ಕವನ್ನು ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಮಾಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟರೂ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಯಾರು ಕೂಡ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ತಾಲೂಕಿನ ಪಾಳ್ಯ ಭಾಗದಲ್ಲಿ ಹಾಗೂ ಕಣತೂರು ಭಾಗದಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸದೇ ಇರುವುದೇ ರೈತರ ತೊಂದರೆಗಳಿಗೆ ಮುಖ್ಯ ಕಾರಣ. ಈ ಬಗ್ಗೆ ಜನಪ್ರತಿನಿಧಿಗಳಾಗಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ರೈತ ಸಂಘಟನೆಗಳು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ದೇಶದ ಬೆನ್ನೆಲುಬಾಗಿ ದುಡಿಯುತ್ತಿರುವ ರೈತರು ದೇಶಕ್ಕೆ ಎಲ್ಲರಿಗಿಂತಲೂ ಅತಿ ಹೆಚ್ಚು ತೆರಿಗೆ ನೀಡುತ್ತಿದ್ದಾರೆ. ಜೊತೆಗೆ ಹಗಲಿರುಳು ಶ್ರಮಿಸಿ ಎಲ್ಲರಿಗೂ ಬದುಕಿಗೆ ಬೇಕಾದ ಆಹಾರ ನೀಡುತ್ತಿದ್ದಾರೆ. ಅಂತಹ ರೈತರಿಗೆ ನೀವು ಅವರ ಕಷ್ಟಗಳಿಗೆ ಸ್ಪಂದಿಸದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕರ್ತರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು. ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ಇಲಾಖೆಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿ, ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ವಿಭಾಗ ಸೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮಾತನಾಡಿ, ರೈತರ ಹೇಳಿಕೆಯಂತೆ ವಿದ್ಯುತ್ ಪೂರೈಕೆಯಲ್ಲಿ ವೋಲ್ಟೇಜ್‌ನ ತೊಂದರೆ ಆಗುತ್ತಿರುವುದು ಗಮನದಲ್ಲಿದ್ದು ವಿತರಣಾ ಕೇಂದ್ರದೊಂದಿಗೆ ಸಂಪರ್ಕಿಸಿ ಅದಕ್ಕೆ ಅಗತ್ಯ ಕ್ರಮ ಕಂಡುಕೊಳ್ಳುತ್ತೇವೆ. ತಾಲೂಕು ಕೇಂದ್ರಗಳಲ್ಲಿ ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ಸಾಮಗ್ರಿಗಳಾದ ಎಲ್‌ಟಿ ಕಿಟ್ ಮುಂತಾದ ಬೇಕಾಗುವ ಸಾಮಗ್ರಿಗಳನ್ನು ಸಂಗ್ರಹಿಸಲು ತಾಂತ್ರಿಕ ದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಲ್ಲೇ ತಾಲೂಕು ಮಟ್ಟದಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ರೈತ ಮುಖಂಡ ರಾಜ್ಯ ರೈತ ಸಂಘದ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್‍ಪಿ ಧರ್ಮರಾಜ್ ಅವರ ನೇತೃತ್ವದಲ್ಲಿ ಕಾರ್ಯಪಾಲಕ ಅಭಿಯಂತರ ಮಂಜುನಾಥ ಅವರಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಕಲೇಶಪುರ ವಿಭಾಗದ ಕಾರ್ಯಪಾಲಕ ಅಭಿಯಂತರ ಮಂಜುನಾಥ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಘವೇಂದ್ರ, ಆಲೂರು ಶಾಖೆಯ ಕಿರಿಯ ಎಂಜಿನಿಯರ್ ಎನ್‌ಡಿ ಕುಮಾರ್, ರೈತ ಮುಖಂಡ ಶಾಂತಾರಾಜ ಅರಸ್, ಹರೀಶ, ಮಲ್ಲಿಕಾರ್ಜುನ, ಮೂರ್ತಿ ನಂದೀಶ ಇನ್ನು ಮುಂತಾದ ರೈತರು ಹಾಜರಿದ್ದರು.*ಹೇಳಿಕೆ1:

ರೈತರ ಬೇಡಿಕೆಯಂತೆ ಉಗನೆ ಮಾರ್ಗದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೇ ತಂತಿ ಮಾರ್ಗದ ಕೆಲಸವೂ ಮುಗಿದಿರುತ್ತದೆ. ಅದನ್ನು ಕೆಲವು ತಾಂತ್ರಿಕ ಕೆಲಸಗಳು ಬಾಕಿ ಇದ್ದು ಅದನ್ನು ಮುಗಿದ ನಂತರ ವಿದ್ಯುತ್ ಪೂರೈಸಲಾಗುವುದು. ಹಾಗೂ ಪಾಳ್ಯ ಹಾಗೂ ಕಣತೂರು ಭಾಗಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಯ ಕಾರ್ಯ ಪ್ರಕ್ರಿಯೆಯಲ್ಲಿದ್ದು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.

- ಮಂಜುನಾಥ್, ಸಕಲೇಶಪುರ ವಿಭಾಗ ಸೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರ

Share this article