ಕೇಂದ್ರ ಸರ್ಕಾರದ ನೀತಿಗೆ ಜಿಲ್ಲಾದ್ಯಂತ ಪ್ರತಿಭಟನೆ

KannadaprabhaNewsNetwork |  
Published : Jul 10, 2025, 12:50 AM IST
ಪೋಟೋ: 09ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಗಳು ಹಾಗೂ ಕಾರ್ಪೊರೇಟ್ ಪರವಾದ ನಿಲುವನ್ನು ವಿರೋಧಿಸಿ ಬುಧವಾರ ನಗರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.  | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಗಳು ಹಾಗೂ ಕಾರ್ಪೊರೇಟ್ ಪರವಾದ ನಿಲುವನ್ನು ವಿರೋಧಿಸಿ ಬುಧವಾರ ನಗರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಗಳು ಹಾಗೂ ಕಾರ್ಪೊರೇಟ್ ಪರವಾದ ನಿಲುವನ್ನು ವಿರೋಧಿಸಿ ಬುಧವಾರ ನಗರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಅಕ್ಷರ ದಾಸೋಹ, ಅಂಗನವಾಡಿ ನೌಕರರ ಸಂಘ, ರೈತ ಸಂಘ ಮತ್ತು ಹಸಿರುಸೇನೆ, ಸಂಯುಕ್ತ ಕಿಸಾನ್ ಮೋರ್ಚಾ, ಗ್ರಾಮ ಪಂಚಾಯಿತಿ ನೌಕರರ ಸಂಘ, ವಿಮಾ ನೌಕರರ ಸಂಘ, ಅಂಚೆ ನೌಕರರ ಸಂಘ, ಗುತ್ತಿಗೆ ಕಾರ್ಮಿಕರ ಸಂಘ, ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಸೇರಿದಂತೆ ೧೮ಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ರೈತ ಸಂಘ:

ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ಬಲವಂತದ ಭೂಸ್ವಾಧೀನ ಬೇಡ, ಸಾಗುವಳಿ ರೈತರಿಗೆ ರಕ್ಷಣೆ ಕೊಡಬೇಕು, ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ವಿದ್ಯುತ್ ಖಾಸಗೀಕರಣ ಬೇಡ, ನೀರಾವರಿ ಯೋಜನೆ ಜಾರಿಗೊಳಿಸಬೇಕು, ಬಗರ್‌ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ಭೂಮಿ ಕೊಡಬೇಕು, ಕಾರ್ಪೊರೇಟ್ ನೀತಿಗಳನ್ನು ಕೈಬಿಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ರೈತ ಸಂಘ ಆಗ್ರಹಿಸಿದೆ. ಈ ಪ್ರತಿಭಟನೆಯಲ್ಲಿ ಪ್ರಮುಖರಾದ ಹೆಚ್.ಆರ್. ಬಸವರಾಜಪ್ಪ, ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಭಾಗ್ಯ ರಾಘವೇಂದ್ರ ಮೊದಲಾದವರಿದ್ದರು.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘ:

ಬಿಸಿಯೂಟ ತಯಾರಕರನ್ನು ಕಾಯಂಗೊಳಿಸಬೇಕು. ಕನಿಷ್ಠ ವೇತನ ನೀಡಬೇಕು. ಸ್ಕೀಂ ಎಂಬ ಪದದ ಹೆಸರಿನಲ್ಲಿ ಶೋಷಣೆ ಸಲ್ಲದು. ಬಿಸಿಯೂಟ ತಯಾರಕರನ್ನು ಕೂಡ ಕಾರ್ಮಿಕರೆಂದು ಪರಿಗಣಿಸಬೇಕು. ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಬಿಸಿಯೂಟ ತಯಾರಕರು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಜಿ. ಅಕ್ಕಮ್ಮ, ಜಿಲ್ಲಾಧ್ಯಕ್ಷೆ ಸರೋಜಮ್ಮ, ತಾಲೂಕು ಅಧ್ಯಕ್ಷೆ ಶಾರದಾ ಸೇರಿದಂತೆ ಹಲವರಿದ್ದರು.

ಅಂಗನವಾಡಿ ನೌಕರರ ಸಂಘ:

ಅಂಗನವಾಡಿ ನೌಕರರಿಗೆ ಎಫ್.ಆರ್.ಎಸ್. ಕಡ್ಡಾಯ ಮಾಡಬಾರದು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಕಾಯಂಗೊಳಿಸಬೇಕು. ಹೊಸದಾಗಿ ತಂದಿರುವ ೪ ಕಾನೂನುಗಳನ್ನು ರದ್ದುಗೊಳಿಸಬೇಕು. ಕನಿಷ್ಠ ೨೬ ಸಾವಿರ ರು. ವೇತನ ನೀಡಬೇಕು. ೧೦ ಸಾವಿರ ರು. ಮಾಸಿಕ ಪಿಂಚಣಿ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ. ಆರಂಭಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಮುಖರಾದ ಆರ್. ಮಂಜುಳಾ, ಜಯಲಕ್ಷ್ಮಿ ಮೊದಲಾದವರಿದ್ದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು):

ಕಾರ್ಮಿಕ ಹೊಸ 4 ಕಾಯ್ದೆಗಳನ್ನು ಜಾರಿಗೆ ತರಬಾರದು. ಅಭಿವೃದ್ಧಿ ಹೆಸರಿನಲ್ಲಿ ಕಂಪನಿಗಳ ಸೇವಕರನ್ನಾಗಿ ಮಾಡಬಾರದು, ದುಡಿಯುವ ಜನರಿಗೆ ಸ್ವಾಯತ್ತತೆ ನೀಡಬೇಕು. ಕನಿಷ್ಠ ದಿನಗೂಲಿ 60 ರು. ನೀಡಬೇಕು. ಸಾಮಾಜಿಕ ಭದ್ರತೆ ನೀಡಬೇಕು. ಸರ್ಕಾರದ ಒಡೆತನದಲ್ಲಿರುವ ಸಂಸ್ಥೆಗಳನ್ನು ಮುಚ್ಚಬಾರದು, 8 ಗಂಟೆ ಕೆಲಸ ನೀಡಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಇವತ್ತಿನ ಬೆಲೆಗೆ ಅನುಗುಣವಾಗಿ ರಾಷ್ಟ್ರವ್ಯಾಪಿ 26 ಸಾವಿರ ರು., ರಾಜ್ಯವ್ಯಾಪಿ 36 ಸಾವಿರ ರು. ಕನಿಷ್ಠ ವೇತನ ನೀಡಬೇಕು. ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ 9 ಸಾವಿರ ರು. ಪಿಂಚಣಿ ನೀಡಬೇಕು. ಹಳೆ ಪಿಂಚಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಂಗಾರಪ್ಪ, ರವಿ, ಕುಲಕರ್ಣಿ, ಅಶೋಕ್, ಸುರೇಶ್, ಶೈಲಜಾ, ರಾಜು ಚಿನ್ನಸ್ವಾಮಿ, ಚಂದ್ರಪ್ಪ, ಮಿಥುನ್, ಹನುಮಮ್ಮ, ಕುಮಾರ್ ಮೊದಲಾವರಿದ್ದರು.

PREV