ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾರಾಷ್ಟ್ರ ಸರ್ಕಾರ ಜವಳಿ ಉದ್ಯಮಿಗಳಿಗೆ ನೀಡುತ್ತಿರುವ ವಿದ್ಯುತ್ ಸಬ್ಸಿಡಿ ಸೇರಿದಂತೆ ಅಲ್ಲಿನ ಸರ್ಕಾರದ ನೀತಿಯ ಕುರಿತು ಅಧ್ಯಯನ ಮಾಡಿ ವರದಿ ನೀಡುವಂತೆ ಜವಳಿ ಖಾತೆಯ ಸಚಿವ ಶಿವಾನಂದ ಪಾಟೀಲ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಹುಕ್ಕೇರಿ ತಾಲೂಕಿನ ಕುರ್ಣೆ ಟೆಕ್ಸಟೈಲ್ ಪಾರ್ಕ್ ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿ ಪವರ್ ಲೂಮ್ ಮಾಲೀಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುತ್ ಬದಲಿಗೆ ಸೋಲಾರ್ ಅಳವಡಿಸಿಕೊಂಡರೆ ಅದರ ಸಾಧಕ ಬಾಧಕಗಳ ಬಗ್ಗೆಯೂ ವರದಿ ನೀಡುವಂತೆ ಸೂಚಿಸಿದರು.
ಜವಳಿ ಉದ್ಯಮ ಅಭಿವೃದ್ಧಿ ಮತ್ತು ನೇಕಾರರ ಹಿತ ಗಮನದಲ್ಲಿರಿಸಿಕೊಂಡು ಹೊಸ ಜವಳಿ ನೀತಿ ರೂಪಿಸಲಾಗುತ್ತಿದೆ. ಉದ್ಯಮಕ್ಕೆ ಪೂರಕವಾಗಿ ನೀತಿಯಲ್ಲಿ ಸೇರ್ಪಡೆ ಮಾಡಬೇಕಾದ ಅಂಶಗಳ ಬಗ್ಗೆ ಪರಿಣಿತರಿಂದ ಸಲಹೆ ಪಡೆಯಲಾಗುತ್ತಿದೆ ಎಂದು ಹೇಳಿದರು.ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಉದ್ಯಮ ಬೆಳೆಸಬೇಕಾದರೆ ಮಹಾರಾಷ್ಟ್ರ ಸರ್ಕಾರದ ವಿದ್ಯುತ್ ನೀತಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಹಾಗೂ ಬಂಡವಾಳ ಸಬ್ಸಿಡಿಯನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು ಎಂದು ಜವಳಿ ಉದ್ಯಮಿಗಳು ಸಚಿವರಿಗೆ ಮನವಿ ಮಾಡಿದರು.
ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ವಿದ್ಯುತ್ ನೀತಿ ಜವಳಿ ಉದ್ಯಮ ಬೆಳವಣಿಗೆಗೆ ಪೂರಕವಾಗಿದ್ದು, ವಿದ್ಯುತ್ ಸಬ್ಸಿಡಿಯನ್ನು 25 ವರ್ಷಗಳವರೆಗೆ ಮುಂದುವರಿಸಬೇಕು. ಆಗ ಈ ಭಾಗದಲ್ಲಿ ಸುಮಾರು ₹1 ಸಾವಿರ ಕೋಟಿ ಹೂಡಿಕೆ ಹರಿದುಬರಲಿದ್ದು, 3000 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ವಿದ್ಯುತ್ ಸಬ್ಸಿಡಿ ಬಿಲ್‌ನಲ್ಲೇ ಕಡಿತ ಮಾಡುವ ಪದ್ಥತಿ ಸೂಕ್ತ. ವಿದ್ಯುತ್ ಬಿಲ್ ಪಾವತಿ ಮಾಡಿದ ನಂತರ ಸರ್ಕಾರ ಸಬ್ಸಿಡಿ ಮರುಪಾವತಿ ಮಾಡುವ ವ್ಯವಸ್ಥೆ ಉದ್ಯಮಕ್ಕೆ ಪೂರಕವಲ್ಲ ಎಂದು ಹೇಳಿದರು.ಅಹವಾಲು ಆಲಿಸಿದ ಸಚಿವರು, ನಮ್ಮ ಸರ್ಕಾರ ಜವಳಿ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಹೀಗಾಗಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಪೂರಕವಾದವ ಅಂಶಗಳನ್ನು ಪರಿಗಣಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾರಾಷ್ಟ್ರ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ಸರ್ಕಾರ ಜವಳಿ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಆದರೂ ಸಹ ಇನ್ನೂ ಹೆಚ್ಚಿನ ಬೆಳವಣಿಗೆ ದೃಷ್ಟಿಯಿಂದ ಮಹಾರಾಷ್ಟ್ರದ ನೀತಿಯನ್ನೂ ಅಧ್ಯಯನ ಮಾಡಿ ಸಾಧ್ಯವಿರುವ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ಪಶುಪತಿನಾಥ ಟೆಕ್ಸಟೈಲ್ಸ್ ಘಟಕಕ್ಕೆ ಭೇಟಿ ನೀಡಿ ಏರ್ಜೆಟ್ ಮಗ್ಗ ಕಾರ್ಯನಿರ್ವಹಣೆ ಬಗ್ಗೆ ಸಚಿವರು ಮಾಹಿತಿ ಪಡೆದರು. ಸ್ಪರ್ಧಾತ್ಮಕ ಜವಳಿ ಉದ್ಯಮದಲ್ಲಿ ಪೈಪೋಟಿ ನೀಡಲು ಏರ್ಜೆಟ್ ಮಗ್ಗಗಳು ಸೂಕ್ತವಾಗಿವೆ ಎಂದು ಟೆಕ್ಸಟೈಲ್ ಸಲಹೆಗಾರ ರಮಾನಂದ ಕುಲಕರ್ಣಿ ಮಾಹಿತಿ ನೀಡಿದರು.
ಜವಳಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವರಾಜ ಕುಲಕರ್ಣಿ ಅವರು ಕುರ್ಣೆ ಟೆಕ್ಸಟೈಲ್ ಪಾರ್ಕ್ ಯೋಜನೆ ಬಗ್ಗೆ ವಿವರಿಸಿದರು. ಪ್ರಶಾಂತ ಗೌಡರ್ ಹರ್ಷವರ್ಧನ ಕುರಣೆ, ದಯಾನಿಧಿ ಕುರಣೆ, ಅಂಕಿತ್ ಬಹೆಟಿ, ಕೃಷ್ಣ ಗಿಲಾದ, ಪ್ರಶಾಂತ ಗೌಡರ ಉಪಸ್ಥಿತರಿದ್ದರು. ರಾಜ್ಯದಲ್ಲಿ ಜವಳಿ ಉದ್ಯಮದ ಬೆಳವಣಿಗೆಗೆ ಪೂರಕವಾದ ಹೊಸ ನೀತಿ ರೂಪಿಸಲಾಗುತ್ತಿದ್ದು, ಪರಿಣಿತರಿಂದ ಸಲಹೆ ಪಡೆಯಲಾಗುತ್ತದೆ. ಜೊತೆಗೆ ನೆರೆಯ ಮಹಾರಾಷ್ಟ್ರ ಸರ್ಕಾರ ಅನುಸರಿಸುತ್ತಿರುವ ನೀತಿಯ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.-ಶಿವಾನಂದ ಪಾಟೀಲ
ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಡೆ ಸಚಿವರು