ಕುಡಿವ ನೀರಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ಒದಗಿಸಿ

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ಪಟ್ಟಣದಲ್ಲಿ ೫೬ ಬೋರ್‌ವೆಲ್‌ಗಳು, ೨೧ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸಾರ್ವಜನಿಕರಿಗೆ ಮಾತ್ರ ನೀರಿನ ಸೌಲಭ್ಯದ ದಾಹ ನೀಗಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಪಟ್ಟಣಕ್ಕೆ ಎಷ್ಟು ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುತ್ತಾರೆ ಎಂದು ಸಭೆಯಲ್ಲಿ ಶಾಸಕರು ಕೇಳಿದಾಗ, ಪಿಡಿಒ ರತ್ನಮ್ಮ ೬ ದಿನಗಳಿಗೊಮ್ಮೆ ಬಿಡುತ್ತಾರೆ ಸಾರ್ ಎಂದು ಉತ್ತರಿಸಿದರು. ಫಾರಂ- ೩ ಕೊಡಲು ಫಲಾನುಭವಿಗಳಿಂದ ಹಣ ಪಡೆಯುತ್ತೀರಿ ಎಂದು ಆರೋಪಗಳು ಕೇಳಿಬರುತ್ತಿವೆ. ಜತೆಗೆ ಸಾರ್ವಜನಿಕರು ಫಾರಂಗಾಗಿ ಅಲೆದಾಡುವಂತೆ ಮಾಡುತ್ತೀರಿ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ಪಟ್ಟಣದ ೨೩ ವಾರ್ಡ್‌ಗಳ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡುತ್ತಿಲ್ಲ ಎಂದು ಶಾಸಕ ಕೆ. ನೇಮರಾಜನಾಯ್ಕ ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ವಿರುದ್ಧ ಹರಿಹಾಯ್ದರು.

ಪಟ್ಟಣದ ತಾಪಂ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿ, ಪುರಸಭೆಯ ಟ್ಯಾಂಕರ್ ಮೂಲಕ ಮಾಜಿ ಶಾಸಕ, ಗುತ್ತಿಗೆದಾರರ ಮನೆಗೆ ನೀರನ್ನು ಹಾಕುತ್ತೀರಿ. ಆದರೆ, ಪಟ್ಟಣದ ಸಾಮಾನ್ಯ ಜನರಿಗೆ ಕುಡಿಯುವ ನೀರು ಕೊಡಲು ಮೀನಮೇಷ ಮಾಡುತ್ತೀರಿ ಎಂದು ಕಿಡಿಕಾರಿದರು. ಪಟ್ಟಣದಲ್ಲಿ ೫೬ ಬೋರ್‌ವೆಲ್‌ಗಳು, ೨೧ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸಾರ್ವಜನಿಕರಿಗೆ ಮಾತ್ರ ನೀರಿನ ಸೌಲಭ್ಯದ ದಾಹ ನೀಗಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಪಟ್ಟಣಕ್ಕೆ ಎಷ್ಟು ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುತ್ತಾರೆ ಎಂದು ಸಭೆಯಲ್ಲಿ ಶಾಸಕರು ಕೇಳಿದಾಗ, ಪಿಡಿಒ ರತ್ನಮ್ಮ ೬ ದಿನಗಳಿಗೊಮ್ಮೆ ಬಿಡುತ್ತಾರೆ ಸಾರ್ ಎಂದು ಉತ್ತರಿಸಿದರು. ಫಾರಂ- ೩ ಕೊಡಲು ಫಲಾನುಭವಿಗಳಿಂದ ಹಣ ಪಡೆಯುತ್ತೀರಿ ಎಂದು ಆರೋಪಗಳು ಕೇಳಿಬರುತ್ತಿವೆ. ಜತೆಗೆ ಸಾರ್ವಜನಿಕರು ಫಾರಂಗಾಗಿ ಅಲೆದಾಡುವಂತೆ ಮಾಡುತ್ತೀರಿ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಕಲೆಕ್ಷನ್ ತಪ್ಪಿಸಿ:

ಮಾಜಿ ಶಾಸಕರು ತಮ್ಮ ತೋಟದ ಮನೆಗೆ ಸಾರ್ವಜನಿಕರು ಕುಡಿಯುವ ನೀರಿನ ರೈಸಿಂಗ್ ಮೇನ್ ಪೈಪ್‌ನ್ನು ಒಯ್ದಿರೋದನ್ನು ಕೂಡಲೇ ಕಡಿತ ಮಾಡಿ ಎಂದು ಮುಖ್ಯಾಧಿಕಾರಿಗೆ ಖಡಕ್ ಆದೇಶ ಮಾಡಿದರು.ಗ್ರಾಪಂ ಸಿಬ್ಬಂದಿ ವರ್ಗಾಯಿಸಿ:ಬಹುವರ್ಷಗಳಿಂದ ಒಂದೇ ಗ್ರಾಪಂ, ತಾಪಂನಲ್ಲಿ ನೆಲೆಯೂರಿರುವ ಕಂಪ್ಯೂಟರ್ ಆಪರೇಟರ್‌ಗಳನ್ನು ಬೇರೆಡೆ ವರ್ಗಾಯಿಸಿ ಎಂದು ಶಾಸಕರು ತಾಪಂ ಇಒ ಪರಮೇಶ್ವರಗೆ ತಿಳಿಸಿದರು. ಮಾದೂರು ಗ್ರಾಪಂನಲ್ಲಿ ಕೆಲಸ ನಿರ್ವಹಿಸುವ ನರೇಗಾ ಎಂಜಿನಿಯರ್ ಚಂದ್ರಶೇಖರ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಎಂದು ಪಿಡಿಒ ಖಾಜಾಬನ್ನಿ, ಇಒರಿಗೆ ಶಾಸಕರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಆಗಬಾರದು. ಪ್ರತಿ ಬೋರ್‌ವೆಲ್‌ಗಳಿಗೆ ಎನ್‌ಜೆವೈ ವಿದ್ಯುತ್ ಅಳವಡಿಸಿ ಎಂದು ತಾಪಂ ಇಒಗೆ ತಿಳಿಸಿದರು. ಮರಬ್ಬಿಹಾಳು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಂಥಾಲಯ ಕಟ್ಟಲು ಯಾಕೆ ನಿವೇಶನ ನೀಡಿಲ್ಲ ಎಂದು, ಪಿಡಿಒ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಕುರಿತು ನಮ್ಮ ಗಮನಕ್ಕೆ ತನ್ನಿ ಎಂದು ಪಿಡಿಒ ಖಾಜಾಬನ್ನಿ ಅವರಿಗೆ ತಿಳಿಸಿದರು.

ಕುಡಿಯುವ ನೀರಿನ ಆರ್‌ಒ ಪ್ಲಾಂಟ್‌ಗಳ ವಿದ್ಯುತ್ ಬಿಲ್‌ ಬಾಕಿ ನೆಪದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಡಿ ಎಂದು ಜೆಸ್ಕಾಂ ಅಧಿಕಾರಿಗೆ ಶಾಸಕರು ಖಡಕ್ ಆಗಿ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜೋತು ಬಿದ್ದಿರುವ ಹಳೆ ಲೈನ್‌ಗಳನ್ನು ಕೂಡಲೇ ಸರಿಪಡಿಸಿ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ, ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪರೆಡ್ಡಿ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸುನೀಲ್‌ನಾಯ್ಕ, ಬಿಸಿಯೂಟ ಯೋಜನಾಧಿಕಾರಿ ರವಿನಾಯ್ಕ, ತಾಲೂಕು ವೈದ್ಯಾಧಿಕಾರಿ ಶಿವರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ, ತಾಲೂಕಿನ ಎಲ್ಲ ಗ್ರಾಪಂಗಳ ಪಿಡಿಒಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Share this article