ಕನಕಪುರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಒಕ್ಕಲಿಗ ಜನಾಂಗದವರು ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸುವಂತೆ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು. ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ನಡೆದ ಕನಕಪುರ ತಾಲೂಕು ಒಕ್ಕಲಿಗ ಸಮುದಾಯದ ಮುಖಂಡರ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಒಕ್ಕಲಿಗ ಜನಾಂಗದಲ್ಲಿ ಸಾಕಷ್ಟು ಬಡವರು, ಅವಿದ್ಯಾವಂತರು, ಭೂಮಿ ಇಲ್ಲದವರಿದ್ದರೂ ಒಕ್ಕಲುತನ ಮಾಡಿ ಬೇರೆಯವರಿಗೆ ಆಹಾರ ಕೊಡುತ್ತಿದ್ದು, ಸಮೀಕ್ಷೆಯಲ್ಲಿ ತಮ್ಮ ಸ್ಥಿತಿಗತಿಗಳು ಏನಿದೆಯೋ ಅದನ್ನು ಮರೆಮಾಚದೆ ತಪ್ಪದೇ ತಿಳಿಸುವಂತೆ ಸೂಚನೆ ನೀಡಿದರು.
ಅವಿದ್ಯಾವಂತರು, ಆಸ್ತಿ ಇಲ್ಲದವರು, ಮನೆ ಇಲ್ಲದವರು, ಕೂಲಿ ಮಾಡುವವರು ಯಾವುದೇ ಹಿಂಜರಿಕೆ ಅವಮಾನವಿಲ್ಲದೆ ತಮ್ಮ ಕುಟುಂಬದ ಸ್ಥಿತಿಗತಿ ಬಗ್ಗೆ ತಿಳಿಸಿ ಕುಟುಂಬದ ಎಲ್ಲಾ ಸದಸ್ಯರ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಪ್ರಮುಖವಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದ್ದು ರಾಜಕೀಯ ಕಾರಣದಿಂದ ಒಗ್ಗೂಡುತ್ತಿಲ್ಲ. ಸಮೀಕ್ಷೆ ವೇಳೆ ತಮ್ಮ ರಾಜಕೀಯ ಮರೆತು ಎಲ್ಲರೂ ಒಟ್ಟಾಗಿ ನಮ್ಮ ಜನಾಂಗದ ಏಳಿಗೆ ಹಾಗೂ ಪ್ರಗತಿಗಾಗಿ ಕೆಲಸ ಮಾಡುವಂತೆ ಕರೆ ನೀಡಿದರು.ಸಮುದಾಯದ ಹಿರಿಯ ಮುಖಂಡ ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಸಮುದಾಯದ ಮುಖಂಡರು ರಾಜಕೀಯ ಭಿನ್ನಾಭಿಪ್ರಾಯ, ವೈಯಕ್ತಿಕ ವೈಮನಸ್ಯ, ಬದಿಗಿಟ್ಟು, ಪ್ರಾಮಾಣಿಕವಾಗಿ ಜಾತಿ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡುತ್ತೀವೋ ಅದೇ ರೀತಿ ಪ್ರತಿಮನೆಗಳಿಗೂ ಭೇಟಿ ನೀಡಿ ಸಮುದಾಯದ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ವಿವರಗಳನ್ನು ಕೊಡಿಸಬೇಕು. ರೇಷನ್ ಕಾರ್ಡಿನಲ್ಲಿ ಸಣ್ಣ ಮಕ್ಕಳ ಹೆಸರು ನೋಂದಣಿ ಆಗದಿದ್ದರೆ ಆಧಾರ್ ಕಾರ್ಡ್ ದಾಖಲಾತಿ ನೀಡಿ ನೋಂದಣಿ ಮಾಡಿಸುವಂತೆ ಸಲಹೆ ನೀಡಿದರು.ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವೆಂಕಟರಾಮೇಗೌಡ, ಒಕ್ಕಲಿಗ ಮುಖಂಡರಾದ ಪಟೇಲ್ ಸಿ.ರಾಜು, ಡಿ.ಎಂ.ವಿಶ್ವನಾಥ್, ಕೆ.ಪಿ.ಕುಮಾರ್, ಸಂಪತ್ ಕುಮಾರ್, ನಾಗರಾಜು, ಗಬ್ಬಾಡಿ ಕಾಡೇಗೌಡ, ರಾಮದಾಸ್, ಯಧುನಂದನ್, ಸಾತನೂರು ನಾಗರಾಜು, ಕುಮಾರಸ್ವಾಮಿ, ಸಿದ್ದರಾಜು, ಸ್ಟುಡಿಯೋ ಚಂದ್ರು, ಬೊಮ್ಮನಹಳ್ಳಿ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:
ಕನಕಪುರದಲ್ಲಿ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ನೇತೃತ್ವದಲ್ಲಿ ತಾಲೂಕು ಒಕ್ಕಲಿಗ ಸಮುದಾಯದ ಮುಖಂಡರ ಸಭೆ ನಡೆಯಿತು.