ತುಮಕೂರಿಗೆ 2 ದಿನಕ್ಕೊಮ್ಮೆಯಾದ್ರೂ ಕುಡಿವ ನೀರು ಪೂರೈಕೆ ಮಾಡಿ: ಡಾ.ಜಿ.ಪರಮೇಶ್ವರ ಸೂಚನೆ

KannadaprabhaNewsNetwork | Published : Mar 17, 2024 1:45 AM

ಸಾರಾಂಶ

ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಪ್ರತಿ ದಿನ ಸಾಧ್ಯವಾಗದಿದ್ದರೂ 2 ದಿನಕ್ಕೊಮ್ಮೆಯಾದರೂ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ವಹಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಪ್ರತಿ ದಿನ ಸಾಧ್ಯವಾಗದಿದ್ದರೂ 2 ದಿನಕ್ಕೊಮ್ಮೆಯಾದರೂ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ವಹಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲೇ ಕುಡಿಯುವ ನೀರಿಗೆ ಕ್ಷಾಮ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ನೀರಿಗಾಗಿ ತತ್ತರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕಾರ್ಯತತ್ಪರಾಗುವಂತೆ ಈಗಾಗಲೇ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಪಿ.ಡಿ. ಖಾತೆಯಲ್ಲಿರುವ ಹಣವನ್ನು ಬಳಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 30 ಕೋಟಿ ರು.ಗಳಿದ್ದರೂ ಕುಡಿಯುವ ನೀರಿನ ಕಾಮಗಾರಿಗಳಿಗೆ ಖರ್ಚು ಮಾಡದೆ ಹಾಗೆ ಉಳಿಸಿಕೊಂಡಿರುವುದರಲ್ಲಿ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕಿಗೂ ತಲಾ ೫೦ ಲಕ್ಷ ರು.ಗಳನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಅವಶ್ಯಕತೆ ಇರುವ ಕಡೆ ಹೊಸ ಕೊಳವೆ ಬಾವಿ ಕೊರೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ನಿವಾರಿಸದಿದ್ದಲ್ಲಿ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚಾಗಲಿದೆ. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಬಹುದೆಂದು ತಿಳಿದಿದ್ದರೂ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಮುಂದಾಗಿಲ್ಲ. ಖಾಸಗಿ ಕೊಳವೆ ಬಾವಿ ನೀರು ಪಡೆಯುತ್ತಿರುವ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸುವ ಮೂಲಕ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಟ್ಯಾಂಕರ್ ನೀರು ಮತ್ತು ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡುವುದರಿಂದ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಜಲ್ ಜೀವನ್ ಮಿಷನ್ ಯೋಜನೆಯಡಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿದ ಸಚಿವರು, ತಿಪಟೂರು ನಗರ ಸಭೆ ಯಲ್ಲಿ 5 ದಿನಗಳಿಗೊಮ್ಮೆ ಕುಡಿಯುವ ನೀರಿನ ಪೂರೈಕೆ ಮಾಡಿದರೆ ಜನರು ಹೇಗೆ ಬದುಕಬೇಕು ? ಎಂದು ಮುಖ್ಯಾಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡಾಗ ಉತ್ತರಿಸಿದ ಮುಖ್ಯಾಧಿಕಾರಿ ತಿಪಟೂರು ನಗರಸಭೆಯಲ್ಲಿ ಇದುವರೆಗೂ ಕುಡಿಯುವ ನೀರಿಗೆ ಸಮಸ್ಯೆ ಕಂಡು ಬಂದಿಲ್ಲ. ಜನರಿಗೆ ತೊಂದರೆಯಾಗದಂತೆ ಸಮಪರ್ಕಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಹೇಮಾವತಿ ನಾಲೆ ನೀರು ಜಿಲ್ಲೆಗೆ ಹರಿಯುತ್ತಿರುವುದರಿಂದ ಪಟ್ಟಣ ಪ್ರದೇಶದ ನಾಗರಿಕರಿಗೆ ಸಮಸ್ಯೆಯಾಗದಂತೆ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂದು ಸೂಚನೆ ನೀಡಿದರಲ್ಲದೆ ಮುಂದಿನ ಒಂದೂವರೆ ವರ್ಷದೊಳಗೆ ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ನೀರು ಹರಿಯಲಿದ್ದು, ಈ ನೀರನ್ನು ಶೇಖರಣೆ ಮಾಡುವಂತಹ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಗೆ ಹೇಮಾವತಿ ನಾಲೆಗೆ ನೀರು ಬಿಡುಗಡೆ ಮಾಡುವ ಮುನ್ನ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸುವ ಕೊಳವೆ ಮಾರ್ಗ, ಪಂಪ್‌ಹೌಸ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಬಗ್ಗೆ ಸೂಚನೆ ನೀಡಿದ್ದರೂ ಮಧುಗಿರಿಯಿಂದ ಸಿದ್ದಾಪುರ ಕೆರೆಗೆ ನೀರು ಪಂಪ್ ಮಾಡುವ ಮಾರ್ಗದಲ್ಲಿ ಮಸಣಾಪುರದ ಬಳಿ ಕೊಳವೆ ಒಡೆದು ಹೋಗಿದ್ದು, ಈವರೆಗೆ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಭಾನುವಾರ ಸಂಜೆಯೊಳಗೆ ದುರಸ್ತಿಪಡಿಸಿ ನೀರು ಹರಿಯುವಂತೆ ಮಾಡಬೇಕೆಂದು ಮಧುಗಿರಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಆಯಾ ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲ್ಲೂಕುಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಬರ ನಿರ್ವಹಣೆಗಾಗಿ ಅಧಿಕಾರಿಗಳು ವರ್ಷದಲ್ಲಿ ೩ ತಿಂಗಳು ಕಷ್ಟಪಡಲು ಸಾಧ್ಯವಿಲ್ಲವೆ? ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಿ ಬರ ನಿರ್ವಹಣೆ ಮಾಡಬೇಕೆಂದು ನಿರ್ದೇಶಿಸಿದರು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಜಿಲ್ಲೆಯಲ್ಲಿ 50 ಹೋಬಳಿಗಳಿದ್ದು, ಬರಪರಿಸ್ಥಿತಿ ನಿರ್ವಹಣೆಗಾಗಿ ಪ್ರತಿ ಹೋಬಳಿಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿ ಪ್ರತಿ ವಾರ ಸಮಸ್ಯಾತ್ಮಕ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕಳೆದ ೧ ತಿಂಗಳಿಂದ ನೋಡಲ್ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಜಾನುವಾರು ಮೇವಿಗಾಗಿ ಜನವರಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಜಿಲ್ಲೆಯಲ್ಲಿ 1 ಲಕ್ಷ ಮಿನಿ ಕಿಟ್‌ಗಳನ್ನು ನೀಡಲಾಗಿದೆ. ಇದರಿಂದ 1.5ಲಕ್ಷ ಟನ್ ಮೇವು ಉತ್ಪಾದನೆಯಾಗಿರುವುದರಿಂದ ಮೇವಿನ ಕೊರತೆ ನೀಗಲಿದೆ. ಸಧ್ಯಕ್ಕೆ ಪಾವಗಡ ತಾಲ್ಲೂಕು ನಾಗಲಮಡಿಕೆಯಲ್ಲಿ ಮಾತ್ರ ಮೇವು ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೂಡಲೇ ಮೇವು ಬ್ಯಾಂಕ್ ತೆರೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಜಿಲ್ಲಾ ಪಂಚಾತಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

----------------------------------------ಮೇವಿನ ವಿಚಾರಕ್ಕೆ ಸಚಿವ ಪರಮೇಶ್ವರ ಗರಂ

ಮೇವಿನ ದಾಸ್ತಾನಿಗೆ ಸಂಬಂಧಿಸಿದಂತೆ ಪ್ರತೀ ಸಭೆಯಲ್ಲಿ ನಿಖರ ಮಾಹಿತಿ ನೀಡದೇ ಒಂದೊಂದು ಬಾರಿ ಒಂದೊಂದು ಅಂಕಿ-ಅಂಶ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಡಾ.ಪರಮೇಶ್ವರ ಗರಂ ಆದರು. ಮಧುಗಿರಿ ತಾಲೂಕಿನಲ್ಲಿ ಮೇವಿನ ಕೊರತೆ ಇದ್ದರೂ 49 ಸಾವಿರ ಟನ್ ಮೇವು ದಾಸ್ತಾನಿದೆ ಎಂದು ವರದಿಯಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿಯೂ ೩,೫೪,೦೦೦ ಟನ್ ಮೇವು ದಾಸ್ತಾನು ಇದೆ ಎಂದು ಮನಸ್ಸಿಗೆ ಬಂದ ಹಾಗೆ ಮಾಹಿತಿ ನೀಡಲಾಗಿದ್ದು, 3ಲಕ್ಷ ಟನ್ ಮೇವು ಇದ್ದರೆ ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಸಮಸ್ಯೆಯೇ ಉಂಟಾಗುತ್ತಿರಲಿಲ್ಲ. ಅಧಿಕಾರಿಗಳು ಮೇವು ದಾಸ್ತಾನು ಕುರಿತು ನೀಡಿರುವ ಅಂಕಿ-ಅಂಶವನ್ನು ನಾನು ಒಪ್ಪುವುದಿಲ್ಲವೆಂದು ವರದಿಯನ್ನು ತಿರಸ್ಕರಿಸಿದ ಅವರು ಮುಂದಿನ ಬಾರಿ ಬೇಜವಾಬ್ದಾರಿಯಿಂದ ವರದಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮೇವು ಕೊರತೆ ಕಂಡು ಬಂದಲ್ಲಿ ಮೇವು ಬ್ಯಾಂಕ್ ತೆರೆಯಬೇಕೆಂದು ಸೂಚಿಸಿದರು.

Share this article