ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಚಂದ್ರಗುತ್ತಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಿ ಭಕ್ತಾದಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ತಾಲೂಕು ಘಟಕ ವತಿಯಿಂದ ಸೊರಬ ಪಟ್ಟಣದಲ್ಲಿ ತಹಸೀಲ್ದಾರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.ಸಮಿತಿ ತಾಲೂಕು ಅಧ್ಯಕ್ಷ ಟಿ.ಸಿ. ನಾಗರಾಜ ಮಾತನಾಡಿ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿ ಅಧಿಕ ಆದಾಯ ಹೊಂದಿರುವ ಐತಿಹಾಸಿಕ ಶ್ರೀ ರೇಣುಕಾಂಬಾ ದೇವಸ್ಥಾನ ಜೀರ್ಣೋದ್ಧಾರವಾಗದೇ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಆರೋಪಿಸಿದರು.
ಮಲೆನಾಡು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತನ್ನದೇ ಆದ ಭಕ್ತವೃಂದವನ್ನು ಹೊಂದಿರುವ ಶ್ರೀ ರೇಣುಕಾ ಅಮ್ಮನವರ ದರ್ಶನಕ್ಕೆ ವಾರದ ಮಂಗಳವಾರ, ಶುಕ್ರವಾರ ಮತ್ತು ತಿಂಗಳ ಹುಣ್ಣಿಮೆ, ಅಮಾವಾಸ್ಯೆ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೇ, ಮೇ ತಿಂಗಳಿನಲ್ಲಿ ಜರುಗುವ ಜಾತ್ರಾ ಸಮಯದಲ್ಲಿ ಲಕ್ಷಾಂತರ ಜನರು ಜಮಾಯಿಸುತ್ತಾರೆ. ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಪರಿತಪಿಸುವಂತಾಗಿದೆ. ಭಕ್ತರ ರೂಪದಲ್ಲಿ ಕೋಟ್ಯಂತರ ರು.ಗಳ ಆದಾಯ ಬಂದರೂ ಸರ್ಕಾರದ ಖಜಾನೆ ಸೇರುತ್ತಿದೆಯೇ ಹೊರತು, ರೇಣುಕಾಂಬಾ ದೇವಸ್ಥಾನ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎಂದು ಆರೋಪಿದರು.ಜಿಲ್ಲಾಧ್ಯಕ್ಷ ಪಿ.ಬಿ. ಶಿವಾನಂದಪ್ಪ ಮಾತನಾಡಿ, ಮುಜರಾಯಿ ಮತ್ತು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವ ಚಂದ್ರಗುತ್ತಿ ದೇವಸ್ಥಾನ ಯಾವುದೇ ಅಭಿವೃದ್ಧಿ ಕಾಣದೇ ಸೊರಗುತ್ತಿದೆ. ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ತಂಗುದಾಣ, ಯಾತ್ರಿ ನಿವಾಸ, ಅಡುಗೆ ತಯಾರಿಕಾ ಕೊಠಡಿ, ತಾಯಂದಿರ ವಿಶ್ರಾಂತಿ ಕೊಠಡಿ ಯಾವುದೂ ಇಲ್ಲ. ದೇವಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ಮಾರ್ಗದಲ್ಲಿ ಮೇಲ್ಛಾವಣಿ ಇಲ್ಲದೇ, ಬಿಸಿಲಿನಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಇದೆ.
ಅಲ್ಲದೇ, ಮಹಿಳೆಯರು ಬಯಲಿನಲ್ಲಿ ಸೀರೆ ಕಟ್ಟಿಕೊಂಡು ಸ್ನಾನ ಮಾಡುವ ದುಸ್ಥಿತಿಯಲ್ಲಿದ್ದಾರೆ. ರಥಬೀದಿಯ ತಾತ್ಕಾಲಿಕ ನಾಲ್ಕು ಶೌಚಗೃಹಗಳಿಗೆ ಮೇಲ್ಛಾವಣಿ ಮುರಿದುಬಿದ್ದಿವೆ ಮತ್ತು ಬಾಗಿಲಿಗಳೇ ಇಲ್ಲ. ದೇಹಬಾಧೆ ತೀರಿಸಿಕೊಳ್ಳಲು ಬಯಲು ಪ್ರದೇಶ ಆಶ್ರಯಿಸಬೇಕಿದೆ. ಇದರಿಂದ ಇಡೀ ಚಂದ್ರಗುತ್ತಿ ಗ್ರಾಮ ಮಲೀನವಾಗಿದೆ. ಕೂಡಲೇ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಚಂದ್ರಗುತ್ತಿ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ ಭಕ್ತರಿಗೆ ಸಹಕಾರಿಯಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭ ಸಮಿತಿಯ ಸೊರಬ ಕಸಬಾ ಹೋಬಳಿ ಘಟಕದ ಸಂಚಾಲಕ ಎ.ಕೆ.ರಂಗಸ್ವಾಮಿ, ಕುಪ್ಪಗಡ್ಡೆ ಘಟಕದ ಟಿ.ಎಸ್. ಲತಾ, ಅಣ್ಣಪ್ಪ ಆನವಟ್ಟಿ, ಮಂಜುನಾಥ ಜಡೆ, ಮಂಜಪ್ಪ ಛಲವಾದಿ ಹಿರೇಕೆರೂರು ಮೊದಲಾದವರಿದ್ದರು.
- - - -೨೯ಸೊರಬ೦೧:ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಚಂದ್ರಗುತ್ತಿ ಗ್ರಾಮದ ರೇಣುಕಾಂಬಾ ದೇವಿ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ವತಿಯಿಂದ ತಹಸೀಲ್ದಾರ್ ಹುಸೇನ್ ಸರಕಾವಸ್ ಅವರಿಗೆ ಮನವಿ ಸಲ್ಲಿಸಲಾಯಿತು.