ಬಳ್ಳಾರಿ: ಭಾರತೀಯ ಸಂಸ್ಕೃತಿಯ ಅಡಿಪಾಯದಲ್ಲಿ ಆಧುನಿಕ ಶಿಕ್ಷಣವನ್ನು ನೀಡುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಈ ಮೂಲಕ ಭವ್ಯ ಭಾರತ ನಿರ್ಮಾಣದ ಕನಸು ಹೊತ್ತ ಕೇಂದ್ರ ಸರ್ಕಾರದ ಕಾರ್ಯ ಯೋಜನೆಗಳಿಗೆ ಜತೆಗೂಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಕರೆ ನೀಡಿದರು.
ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಎಸ್.ಬಿ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಪ್ರಾಥಮಿಕ ಹಂತದಲ್ಲಿಯೇ ಗುಣಾತ್ಮಕ ಚಟುವಟಿಕೆಗೆ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕು. ಇದರಿಂದ ಉತ್ತಮ ಭಾರತ ಕಟ್ಟುವ ಹಾಗೂ ನಾಗರಿಕ ಸಮಾಜ ನಿರ್ಮಿಸುವ ಕೆಲಸವು ಸುಲಲಿತವಾಗಲಿದೆ. ಭಾರತೀಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಕೆಲಸವು ಪ್ರಾಥಮಿಕ ಹಂತದಲ್ಲಿಯೇ ಆಗಬೇಕು. ಆಗ ಮಾತ್ರ ಸಮರ್ಥ ಯುವ ಭಾರತವನ್ನು ನಿರ್ಮಿಸಲು ಸಾಧ್ಯವಾಗಲಿದೆ ಎಂದರು.
ಭಾರತಕ್ಕೆ ಜ್ಞಾನ-ವಿಜ್ಞಾನದ ಪರಂಪರೆಯಿದೆ. ವೇದ ಕಾಲದಿಂದ ಈವರೆಗಿನ ಸಾಧನೆಯ ಕೈಪಿಡಿಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಮೂಲಕ ವಿಶ್ವಕ್ಕೆ ಸಾಧನೆಯ ಸಂದೇಶ ರವಾನಿಸಿದ್ದಾರೆ. ಶೈಕ್ಷಣಿಕ ವಿಚಾರದಲ್ಲಿ ಭಾರತ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸುತ್ತಿದೆ. ಅತ್ಯಂತ ಪ್ರಾಚೀನದ ನಳಂದಾ ವಿಶ್ವವಿದ್ಯಾಲಯದ ಪುನರುತ್ಥಾನದ ಕೆಲಸ ನಡೆದಿದೆ. ಪ್ರಧಾನಮಂತ್ರಿ ವಿವಿಯ ಹೊಸ ಕ್ಯಾಂಪಸ್ ಉದ್ಘಾಟಿಸಿ ಅದರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಆಶಯದಿಂದ ದಮ್ಮೂರು ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವ ದಮ್ಮೂರು ಶೇಖರ್ ಹಾಗೂ ಡಾ. ಭವ್ಯಾ ಶೇಖರ್ ಈ ಭಾಗದ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದು, ಇದು ಅತ್ಯಂತ ಅಭಿನಂದನಾ ಕಾರ್ಯ. ಈ ರೀತಿಯ ಶೈಕ್ಷಣಿಕ ಸೇವಾ ಕಾರ್ಯಗಳು ಈ ಭಾಗದಲ್ಲಿ ಹೆಚ್ಚಾಗಲಿ ಎಂದು ಹಾರೈಸಿದ ರಾಜ್ಯಪಾಲ ಗೆಹಲೋತ್ ಅವರು, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗುವಂತಾಗಲಿ ಎಂದು ಆಶಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ, ಎಸ್.ಬಿ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಅಧ್ಯಕ್ಷ ದಮ್ಮೂರು ಶೇಖರ್, ಸಂಸ್ಥೆಯ ಸಿಇಒ ಡಾ. ಭವ್ಯಾ ಶೇಖರ್ ಉಪಸ್ಥಿತರಿದ್ದರು.ಆಂಗ್ಲ ಭಾಷೆಯ ಕಲಿಕೆಗೂ ಆಸ್ಥೆ ವಹಿಸಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು. ಪ್ರಾದೇಶಿಕ ಭಾಷೆಯ ಜತನದ ಜತೆಗೆ ಆಂಗ್ಲ ಭಾಷೆಯ ಕಲಿಕೆಗೂ ಆಸ್ಥೆ ವಹಿಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.ಪ್ರಾದೇಶಿಕ ಭಾಷೆಯಲ್ಲಿಯೇ ಮಕ್ಕಳಿಗೆ ಉನ್ನತ ಶಿಕ್ಷಣ ಲಭಿಸುವ ಕಾರ್ಯ ಯೋಜನೆಗಳು ರೂಪುಗೊಳ್ಳಬೇಕು. ಚೀನಾ, ಜಪಾನ್, ಜರ್ಮನಿ ಸೇರಿದಂತೆ ಅನೇಕ ದೇಶಗಳು ಪ್ರಾದೇಶಿಕ ಭಾಷೆಯಲ್ಲಿಯೇ ಉನ್ನತ ಶಿಕ್ಷಣ ನೀಡುತ್ತವೆ. ಅದೇ ರೀತಿ ಕರ್ನಾಟಕದಲ್ಲೂ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ದಕ್ಕುವಂತಾಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯೂ ಸಾಧ್ಯವಿದೆ. ಈ ನೆಲೆಯಲ್ಲಿ ಚಿಂತನೆ ನಡೆಯಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಆದರ್ಶ ಜೀವನದ ಬಗ್ಗೆ ತಿಳಿಸಿಕೊಡಬೇಕು. ಪ್ರಾಥಮಿಕ ಹಂತದಲ್ಲಿಯೇ ನೈತಿಕ ಶಿಕ್ಷಣ ನೀಡಬೇಕು. ವ್ಯಕ್ತಿಯ ವಿಕಾಸಕ್ಕೆ ಶಿಕ್ಷಣವೇ ಮೂಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಮಕ್ಕಳನ್ನು ಪಠ್ಯಪುಸ್ತಕಕ್ಕೆ ಸೀಮಿತಗೊಳಿಸದೆ ಅವರ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.