ನರಗುಂದ: ಶಿಕ್ಷಣ, ಶಿಕ್ಷಕರಿಲ್ಲದೇ ಜೀವನ ಪೂರ್ಣವಾಗಲಾರದು, ಅಂಕ ಗಳಿಕೆ ಜೀವನಕ್ಕೆ ಮಾನದಂಡವಲ್ಲ. ಆದರಿಂದ ಬಾಳು ಬೆಳಗಲು ಔಪಚಾರಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕನವರು ಹೇಳಿದರು.
ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ 110 ಅತಿಥಿ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕ ಗುರು ಪದದ ಅರ್ಥ ವಿಶಾಲವಾಗಿದೆ. ಅದರ ಮಹತ್ವ ಮೊದಲು ಶಿಕ್ಷಕರು ಅರಿತು ಅದೇ ರೀತಿಯಲ್ಲಿ ಮಕ್ಕಳಿಗೆ ಬೋಧಿಸಬೇಕಿದೆ. ಆಧುನಿಕತೆಯ ನೆಪದಲ್ಲಿ ಆಧ್ಯಾತ್ಮಿಕತೆ ಮರೆಯುವುದು ಸರಿಯಾದುದಲ್ಲ. ಪರಮಾತ್ಮನೇ ಜಗತ್ತಿಗೆ ಶಿಕ್ಷಕ, ಅವನ ನಿತ್ಯ ಸ್ಮರಣೆಯಲ್ಲಿ ಮಕ್ಕಳ ಬದುಕು. ನಿಮ್ಮ ಬದುಕನ್ನು ಸುಧಾರಿಸಿಕೊಳ್ಳಬೇಕು. ಸಂಬಳ ಎಷ್ಟೇ ಇರಲಿ, ಶಿಕ್ಷಕ ಹುದ್ದೆಗೆ ಬಂದಿರುವುದೋ ಜೀವನದ ಶ್ರೇಷ್ಠ ಭಾಗ. ಅದನ್ನು ಸರಿಯಾಗಿ ಅರ್ಥೈಸಿಕೊಂಡು ಸಮಾಜ, ಮಕ್ಕಳ ಬಾಳಿಗೆ ಬೆಳಕು ಮೂಡಿಸಿ ವೃತ್ತಿ ಗೌರವ ಹೆಚ್ಚಿಸಿಕೊಳ್ಳಬೇಕು ಎಂದರು. ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಮನ್ವಯಾಧಿಕಾರಿ ಪ್ರೇರಣಾ ಪಾತ್ರಾ ಮಾತನಾಡಿ, ಇಂದಿನ ಶಿಕ್ಷಣ ಹಾಗೂ ಹಿಂದಿನ ಶಿಕ್ಷಣ ವ್ಯವಸ್ಥೆ ಅವಲೋಕನ ಮಾಡಬೇಕಿದೆ. ಹಿಂದೆ ಮಕ್ಕಳಿಗೆ ಶಿಕ್ಷಕರು ಶಿಕ್ಷೆ ನೀಡಿದರೆ ಆಕ್ಷೇಪವೆತ್ತುತ್ತಿರಲಿಲ್ಲ. ಆದರೆ ಇಂದು ಕೇವಲ ಗದರಿಸಿದರೆ ಪಾಲಕರು ಶಿಕ್ಷಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಇದರ ನಡುವೆ ಶಿಕ್ಷಕ ಹುದ್ದೆ ನಿಭಾಯಿಸಿ ವೃತ್ತಿ ಗೌರವ ಹೆಚ್ಚಿಸಿಕೊಳ್ಳಬೇಕು ಎಂದರು.ಲಯನ್ಸ್ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಡಾ. ಬಸವರಾಜ ಹಲಕುರ್ಕಿ ಮಾತನಾಡಿ, ಶಿಕ್ಷಕ ಹುದ್ದೆ ಜವಾಬ್ದಾರಿಯಿಂದ ನಿರ್ವಹಿಸಬೇಕು. ಮಕ್ಕಳಿಗೆ ಮೋಸ ಮಾಡದೇ ಆತ್ಮನಿಷ್ಠೆಯಿಂದ ಶಿಕ್ಷಕರು ಬೋಧಿಸಬೇಕಿದೆ. ಸರ್ಕಾರ ಅತಿಥಿ ಶಿಕ್ಷಕರನ್ನು ನೋಡಿಕೊಳ್ಳುವ ಪರಿ ಬದಲಾಗಬೇಕು. ಗೌರವ ನೀಡಿ ಸಂಬಳ ಹೆಚ್ಚು ಮಾಡಬೇಕು. ಜೈಲಿನ ಕೈದಿಗಳಿಗಿಂತಲೂ ಕಡಿಮೆ ಸಂಬಳ ನೀಡುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ ಮಾತನಾಡಿ, ಆಧ್ಯಾತ್ಮಿಕ ಶಿಕ್ಷಣದಲ್ಲಿ ನಂಬಿಕೆ ಅಗತ್ಯ. ನಾಸ್ತಿಕ, ಆಸ್ತಿಕ ವಿಷಯಗಳನ್ನು ಮಕ್ಕಳಿಗೆ ಸರಿಯಾಗಿ ಮನದಟ್ಟು ಮಾಡಬೇಕು ಎಂದರು.ಶಿಕ್ಷಕಿಯರಾದ ಗಿರಿಜಾ ಹಾಲಪ್ಪನವರ, ಗೀತಾ ಗದಗಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳ್ಳಾರಿಯ ನರಸಿಂಹಮೂರ್ತಿ, ವಿ.ಎನ್. ಕೊಳ್ಳಿಯವರ, ಶಂಕ್ರಣ್ಣ ಇಂಗಳಹಳ್ಳಿ, ನಿವೃತ್ತ ಶಿಕ್ಷಕ ಎಚ್.ಎಸ್. ಬೆಳಕೊಪ್ಪದ, ಸಿ.ಎಂ. ಕೊಳ್ಳಿಯವರ, ಶಿಕ್ಷಕರಾದ ಡಿ.ಬಿ. ಪಾಟೀಲ, ಹನಮಂತ ಮಾದರ, ತಳವಾರ, ಬಾಲು, ಉಮೇಶ ಹಾಗೂ ಈಶ್ವರೀಯ ಪರಿವಾರದವರು ಇದ್ದರು.