ಏರ್‌ಪೋರ್ಟ್‌ ಬಳಿ ಹೊಸ ರಸ್ತೆಗೆ ಬೀದಿದೀಪ, ಪೊಲೀಸ್ ವ್ಯವಸ್ಥೆ ಕಲ್ಪಿಸಿ

KannadaprabhaNewsNetwork | Published : Nov 23, 2023 1:45 AM

ಸಾರಾಂಶ

ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಮುಂದುವರೆಸಲು ಹೋದಾಗ ಗ್ರಾಮಸ್ಥರು ಅದಕ್ಕೆ ಅಡ್ಡಿಪಡಿಸಿದರು. ಈ ಹಿಂದೆ ಜಿಲ್ಲಾಧಿಕಾರಿ ಅಂಡರ್‌ಪಾಸ್ ಮಾಡಿಕೊಡುವ ಭರವಸೆ ನೀಡಿದ್ದರು. ಅದು ಸಹ ಆಗಿಲ್ಲ. ತಹಸೀಲ್ದಾರ್ ಬಂದು ಭರವಸೆ ನೀಡುವರೆಗೂ ಕೆಲಸ ನಡೆಸಲು ಬಿಡುವುದಿಲ್ಲ ಎಂದು ಆಗ್ರಹಿಸಿದರು. ಕೆಲಕಾಲ ಪೊಲೀಸರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿದ್ಧರಹಟ್ಟಿ ಗ್ರಾಮಸ್ಥರು ಏರ್‌ಪೋರ್ಟ್ ಬಳಿ ಕಾಂಪೌಂಡ್ ಕಾಮಗಾರಿಗೆ ಅಡ್ಡಿಪಡಿಸಿದ ಘಟನೆ ಬುಧವಾರ ನಡೆಯಿತು. ಈ ವೇಳೆ ಪೊಲೀಸರು, ಗ್ರಾಮಸ್ಥರು ನಡುವೆ ಮಾತಿನ ಚಕಮಕಿ ನಡೆಯಿತು.

ವಿಮಾನಳ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ, ರನ್ ವೇ ವಿಸ್ತರಣೆ ಸಂಬಂಧ ಅಂದಾಜು 500 ಮೀಟರ್‌ನಷ್ಟು ಜಾಗವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಬಳಸಿಕೊಂಡಿದೆ. ಅದಕ್ಕೆ ಕಾಂಪೌಂಡ್ ಹಾಕುವ ಕೆಲಸ ನಡೆಯುತ್ತಿದೆ. ವಿಮಾನ ನಿಲ್ದಾಣದ ಕಾಂಪೌಂಡ್ ಪಕ್ಕದಿಂದಲೇ ಈಗ ಹೊಸ ಜೈಲು, ಸಿದ್ಧರಹಟ್ಟಿ ಗ್ರಾಮಕ್ಕೆ ಹೋಗಬೇಕು. ಈಗ ಕಾಂಪೌಂಡ್ ನಿರ್ಮಾಣದಿಂದಾಗಿ 1 ಕಿ.ಮೀ. ಸುತ್ತುವರಿದು ಗ್ರಾಮಗಳಿಗೆ ಬರಬೇಕಾಗಿದೆ ಎಂದು ದೂರಿದರು.

ಇದು ಅರಣ್ಯ ಪ್ರದೇಶವಾಗಿದ್ದು, ಜನರು ಓಡಾಡುವುದು ವಿರಳ. ರಾತ್ರಿವೇಳೆ ಇಲ್ಲಿ ಪುಂಡ ಪೋಕರಿಗಳು ಮದ್ಯ ಸೇವನೆ ಮಾಡುತ್ತಿದ್ದಾರೆ. ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗಿಬರುವ ಹೆಣ್ಣುಮಕ್ಕಳಿಗೆ ಇದರಿಂದ ಇರಿಸುಮುರಿಸು ಆಗುತ್ತಿದೆ. ಏರ್‌ಪೋರ್ಟ್‌ಗೆ ಮುಂದುವರಿದ ಕಾಮಗಾರಿಗೆ ಕಾಂಪೌಂಡ್ ನಿರ್ಮಾಣಕ್ಕೆ ನಮಗೆ ಅಡ್ಡಿ ಇಲ್ಲ. ನಮಗೆ ಹೊಸದಾಗಿ ಮಾಡಿರುವ ರಸ್ತೆಗೆ ಬೀದಿದೀಪ ವ್ಯವಸ್ಥೆ, ಪೊಲೀಸ್ ಬೀಟ್ ವ್ಯವಸ್ಥೆ, ಈ ದಾರಿಯಲ್ಲಿ ಹೋಗುತ್ತಿರುವ ಸರ್ಕಾರಿ ಬಸ್‌ ಅನ್ನು ಗ್ರಾಮದವರೆಗೆ ಬರುವಂತೆ ಮಾಡಬೇಕು. ಅಲ್ಲಿಯವರೆಗೂ ಕೆಲಸ ನಡೆಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಮುಂದುವರೆಸಲು ಹೋದಾಗ ಗ್ರಾಮಸ್ಥರು ಅದಕ್ಕೆ ಅಡ್ಡಿಪಡಿಸಿದರು. ಈ ಹಿಂದೆ ಜಿಲ್ಲಾಧಿಕಾರಿ ಅಂಡರ್‌ಪಾಸ್ ಮಾಡಿಕೊಡುವ ಭರವಸೆ ನೀಡಿದ್ದರು. ಅದು ಸಹ ಆಗಿಲ್ಲ. ತಹಸೀಲ್ದಾರ್ ಬಂದು ಭರವಸೆ ನೀಡುವರೆಗೂ ಕೆಲಸ ನಡೆಸಲು ಬಿಡುವುದಿಲ್ಲ ಎಂದು ಆಗ್ರಹಿಸಿದರು. ಕೆಲಕಾಲ ಪೊಲೀಸರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ತಹಸೀಲ್ದಾರ್ ಎನ್.ಜೆ. ನಾಗರಾಜ್ ಸ್ಥಳಕ್ಕೆ ಆಗಮಿಸಿ ರಸ್ತೆಗೆ ಬೀದಿದೀಪ ವ್ಯವಸ್ಥೆ, ಬಸ್ ಸೇವೆ ವಿಸ್ತರಿಸುವ ಭರವಸೆ ನೀಡಿದ ಬಳಿಕ ಗ್ರಾಮದ ಮುಖಂಡರು ಪ್ರತಿಭಟನೆ ಹಿಂಪಡೆದರು. ಅನಂತರ ಕಾಂಪೌಂಡ್ ಕಾಮಗಾರಿ ಆರಂಭಗೊಂಡಿತು.

ಈ ಸಂದರ್ಭ ತುಂಗಾನಗರ ಪೊಲೀಸ್‌ ಠಾಣೆ ಪಿಐ ಮಂಜುನಾಥ್, ಪಿಎಸ್‌ಐ ಮಂಜುನಾಥ್, ಕುಮಾರ್, 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು.

- - - -22ಎಸ್‌ಎಂಜಿಕೆಪಿ03:

ಸಿದ್ಧರಹಟ್ಟಿ ಗ್ರಾಮಸ್ಥರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿವಮೊಗ್ಗ ಏರ್‌ಪೋರ್ಟ್ ಬಳಿ ಕಾಂಪೌಂಡ್‌ ಕಾಮಗಾರಿಗೆ ಅಡ್ಡಿಪಡಿಸಿ, ಪ್ರತಿಭಟನೆ ನಡೆಸಿದರು.

Share this article