ಕನ್ನಡಪ್ರಭ ವಾರ್ತೆ ಅಥಣಿ
ಬೇಸಿಗೆಯ ಬಿಸಿಲಿನ ತಾಪಮಾನ ಒಂದು ತಿಂಗಳ ಮುಂಚಿತವಾಗಿಯೇ ಆರಂಭಗೊಂಡಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬರುತ್ತಿದ್ದು, ಗ್ರಾಪಂ ಹಾಗೂ ತಾಲೂಕು ಅಧಿಕಾರಿಗಳು ಬರುವ ಜೂನ್ ವರೆಗೆ ಜನ-ಜಾನುವಾರುಗಳಿಗೆ ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಸೂಚನೆ ನೀಡಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಅಥಣಿ ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷ್ಣಾನದಿಯಲ್ಲಿ ಈಗ 4 ಟಿಎಂಸಿ ನೀರು ಸಂಗ್ರಹವಿದ್ದು, ನೀರು ಇರುವವರೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ವಿವಿಧ ಹಳ್ಳಿಗಳಿಗೆ ಸಕಾಲಕ್ಕೆ ಕುಡಿಯುವ ನೀರು ಒದಗಿಸಬೇಕು. ಈ ಯೋಜನೆಯ ನೀರಿನಿಂದ ವಂಚಿತವಾದ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ಗ್ರಾಪಂ ಪಿಡಿಒಗಳು ಮತ್ತು ತಾಲೂಕು ಅಧಿಕಾರಿಗಳು ಈ ಬರಗಾಲ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನ ನಿಗವಹಿಸಿ ಕೆಲಸ ಮಾಡಬೇಕು. ಯಾವುದೇ ಗ್ರಾಮ, ಅಥವಾ ತೋಟದ ವಸತಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇರುವುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಆ ಗ್ರಾಮದ ಜನಸಂಖ್ಯೆ ಹಾಗೂ ಗ್ರಾಮದಲ್ಲಿರುವ ದನ ಕರುಗಳ ಸಂಖ್ಯೆ ಮತ್ತು ಅದಕ್ಕೆ ತಕ್ಕಂತೆ ಅಲ್ಲಿ ದಿನಕ್ಕೆ ತಗಲುವ ಕುಡಿಯುವ ನೀರಿನ ಪ್ರಮಾಣದ ಬೇಡಿಕೆಯ ಮನವಿಯನ್ನು ಕೂಡಲೇ ತಹಸೀಲ್ದಾರರಿಗೆ ಸಲ್ಲಿಸಬೇಕು ಎಂದರು.
ಸಮಸ್ಯೆ ಇರುವ ಗ್ರಾಮದ ಸಮೀಪ ಎಲ್ಲಿಯಾದರೂ ನೀರಿನ ಮೂಲಗಳ ಸೌಲಭ್ಯವಿದೆಯೋ? ಇಲ್ಲದಿದ್ದರೆ ಎಲ್ಲಿಂದ ನೀರು ತರಲು ಸಾಧ್ಯವಿದೆ. ಪರ್ಯಾಯ ವ್ಯವಸ್ಥೆ ಏನು ಮಾಡಿಕೊಳ್ಳಬೇಕು ಎಂಬುದನ್ನು ಅಧಿಕಾರಿಗಳು ಚರ್ಚಿಸಿ ತಿಳಿಸಬೇಕು. ಒಂದು ವೇಳೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದಾದರೆ ಅವರಿಗೆ ನೀರು ಸಮೀಪ ಎಲ್ಲಿ ಸಿಗುತ್ತದೆ ಎಂಬುದನ್ನು ಈಗಿನಿಂದಲೇ ಗುರುತಿಸಿಕೊಳ್ಳಬೇಕು. ನೀರು ಪೂರೈಕೆಗೆ ತಗಲುವ ವೆಚ್ಚವನ್ನು ಕೂಡ ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದರು.ವಿವಿಧ ಗ್ರಾಪಂಗಳಿಂದ ಆಗಮಿಸಿದ್ದ ಪಿಡಿಒಗಳ ಮೂಲಕ ಮಾಹಿತಿ ಪಡೆದುಕೊಂಡ ಶಾಸಕರು, ಎಲ್ಲ ಗ್ರಾಮಗಳಲ್ಲಿ ಮತ್ತು ತೋಟದ ವಸತಿಗಳ ಜನ ಮತ್ತು ಜಾನುವಾರಗಳಿಗೆ ನೀರಿನ ಸಮಸ್ಯೆಯಾಗದಂತೆ ನಿಗ ವಹಿಸಬೇಕೆಂದರು. ಕುಡಿಯುವ ನೀರು ಕೆಲವು ಗ್ರಾಮಗಳಲ್ಲಿ ಮೂರು ದಿನಕ್ಕೊಮ್ಮೆ ಬಂದರೆ ಇನ್ನೂ ಕೆಲವು ಗ್ರಾಮಗಳಲ್ಲಿ ವಾರಕ್ಕೊಮ್ಮೆ, ಹತ್ತು ದಿನಗಳ ನಂತರ ನೀರು ಪೂರೈಕೆಯಾಗುತ್ತಿದೆ. ಕೆಲವು ಹಳ್ಳಿಗಳಲ್ಲಿ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕಗಳು ಕೆಲವು ರಿಪೇರಿ ಹಂತದಲ್ಲಿವೆ. ಇನ್ನು ಕೆಲವು ನೀರಿನ ಅಭಾವದಿಂದ ಸ್ಥಗಿತಗೊಂಡಿವೆ. ಅವುಗಳನ್ನು ಕೂಡ ಕೂಡಲೇ ರಿಪೇರಿ ಮಾಡಿಸಬೇಕು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಅವುಗಳಿಗೆ ಕೂಡಲೇ ನೀರಿನ ಮೂಲದ ಸೌಲಭ್ಯ ಒದಗಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ ಎಂದರು.
ಈ ವೇಳೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ರವೀಂದ್ರ ಮುರಗಾಲಿ ಮಾತನಾಡಿ, ಬಹುಗ್ರಾಮ ಕುಡಿಯುವ ಯೋಜನೆಗೆ ಸಂಬಂಧಿಸಿದಂತೆ ಕಳೆದ 15 ವರ್ಷಗಳ ಹಿಂದೆ ಅಳವಡಿಸಲಾಗಿರುವ ಪಂಪ್‌ಸೆಟ್ ಮತ್ತು ಪೈಪ್‌ಲೈನ್ ದುರಸ್ತಿ ಮಾಡಲಾಗಿದ್ದು, ಸದ್ಯ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಸದ್ಯ ನೀರಿನ ಸಮಸ್ಯೆ ಇಲ್ಲ. ಈಗ ಪ್ರತಿ ಗ್ರಾಮಗಳಿಗೆ 2 ರಿಂದ 3 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಇನ್ನೂ 75 ದಿನ ಅಂದರೆ ಮೇ-15ರವರೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವುದಿಲ್ಲ. ನಂತರದ ದಿನಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದರು.ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಕುಡಿಯುವ ನೀರಿನ ಮೂಲಗಳು ಸರ್ವೆ ಮತ್ತು ಸಿದ್ಧತೆ ಕುರಿತು ಮಾಹಿತಿ ನೀಡಿದರು. ತಹಸೀಲ್ದಾರ್ ಸಿದ್ದರಾಯ್ ಬೋಸಗಿ ಸರ್ವರನ್ನು ಸ್ವಾಗತಿಸಿ, ಬರಗಾಲ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ನಿವಹಿಸಬೇಕು. ನೀರಿನ ಸಮಸ್ಯೆಗಳಿರುವ ಗ್ರಾಮಗಳು ಮತ್ತು ವಸತಿಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಈ ವೇಳೆ ಪಶು ಸಂಗೋಪನಾ ಇಲಾಖೆಯ ಡಾ. ಹುಂಡೇಕಾರ, ತಾಪಂ ವ್ಯವಸ್ಥಾಪಕ ಗುರುನಾಥ ಸ್ವಾಮಿ, ಕೃಷಿ ಅಧಿಕಾರಿ ನಿಂಗನಗೌಡ ಬಿರಾದಾರ ಪಾಟೀಲ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಯ ಪಿಡಿಒಗಳು , ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ನಿಗಾ ವಹಿಸುವುದು ಅಗತ್ಯ. ಕೃಷ್ಣಾ ನದಿ ತೀರದ ರೈತ ಬಾಂಧವರು ಕೂಡ ಬೆಳೆಗಳಿಗೆ ಅಗತ್ಯವಿದ್ದಷ್ಟು ಮಾತ್ರ ನೀರನ್ನು ಬಳಸಬೇಕು. ನದಿ ನೀರು ಹೆಚ್ಚಾಗಿ ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಹೆಸ್ಕಾಂ ಅಧಿಕಾರಿಗಳು ವಾರಕ್ಕೊಮ್ಮೆ ವಿದ್ಯುತ್ ಸ್ಥಗಿತ ಮಾಡುವ ಮೂಲಕ ನದಿಯಲ್ಲಿ ನೀರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.ಶಾಸಕ ಲಕ್ಷ್ಮಣ ಸವದಿ