ಕನ್ನಡಪ್ರಭ ವಾರ್ತೆ ಮೈಸೂರು
ಮನೋವಿಜ್ಞಾನ ವಿಷಯವು ವಿಶೇಷ ಮಾನ್ಯತೆಯುಳ್ಳ ಸ್ವತಂತ್ರ ಅಧ್ಯಯನ ಕ್ಷೇತ್ರವಾಗಿ ಬೆಳೆದಿದೆ. ಮನೋವಿಜ್ಞಾನವು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಮನೋಭಾವ ಬೆಳೆಯಲು ಸಹಕಾರಿಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ನಗರದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಮನೋವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘ ಸಂಯುಕ್ತವಾಗಿ ಮನೋವಿಜ್ಞಾನ ವಿಭಾಗದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಆಯೋಜಿಸಿರುವ 2 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಮ್ಮೇಳನವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮನೋವಿಜ್ಞಾನವು ಮನುಷ್ಯ ಮತ್ತು ಸಮಾಜದ ನಡುವೆ ಪರಸ್ಪರ ಸಂವಹನಾತ್ಮಕ ಸಂಬಂಧವನ್ನು ಹೊಂದಿದೆ. ಹೀಗಾಗಿ, ಮನೋವಿಜ್ಞಾನವು ಪ್ರತಿಯೊಬ್ಬ ವ್ಯಕ್ತಿಗೂ ಹತ್ತಿರವಾದ ವಿಷಯವಾಗಿದೆ. ಮಾನವೀಯತೆ ಮತ್ತು ವಿಜ್ಞಾನವನ್ನು ಬೆಸೆಯುವ ಸಾರ್ಥಕವಾದ ಕಾರ್ಯ ಮನಶಾಸ್ತ್ರ ವಿಷಯದಿಂದ ಸಾಧ್ಯವಿದೆ ಎಂದು ಅವರು ಹೇಳಿದರು.ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಸಮಾಜವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು, ಸಮಾಜವನ್ನು ಸಮಾಜಮುಖಿಯಾಗಿ ಬದಲಾಯಿಸಲು ಸಹಕಾರಿಯಾಗುತ್ತದೆ. ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಬೆಳಸುತ್ತದೆ ಎಂದು ಅವರು ಸಲಹೆ ನೀಡಿದರು.
ವಿದ್ಯಾರ್ಥಿಗಳು ಯಾವುದೇ ವಿಷಯ ಕ್ಷೇತ್ರದಲ್ಲಿ ಹೊಸ ಹೊಸ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಭಿನ್ನ ರೀತಿಯ ಸಂಶೋಧನೆಗಳನ್ನು ಸಮಾಜಕ್ಕೆ ಸಮರ್ಪಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಮನುಷ್ಯನ ಅಧೀನದಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ, ಇವುಗಳು ಮನುಷ್ಯನ ಬುದ್ಧಿಶಕ್ತಿಯನ್ನು ಮೀರಲು ಎಂದಿಗೂ ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಸಂಶೋಧನೆಗೆ ತಂತ್ರಜ್ಞಾನವನ್ನು ಸಮಾಜದ ಉನ್ನತಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ತಂತ್ರಜ್ಞಾನವನ್ನು ಬಳಸಿಕೊಳ್ಳಲು ಕೌಶಲ್ಯ ಬಹಳ ಮುಖ್ಯ. ಹೀಗಾಗಿ, ವಿದ್ಯಾರ್ಥಿಗಳು ಕೌಶಲ್ಯವಂತರಾಗಬೇಕು. ತಂತ್ರಜ್ಞಾನ ಮತ್ತು ಕೌಶಲ್ಯಾಧಾರಿತ ಶಿಕ್ಷಣದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.ಗುಜರಾತ್ ರಾಷ್ಟ್ರೀಯ ರಕ್ಷಾ ವಿವಿ ಜೀವಿತಾವಧಿ ಪ್ರಾಧ್ಯಾಪಕಿ ಡಾ.ಎಸ್.ಎಲ್. ವಯಾ ಮಾತನಾಡಿ, ಮನುಷ್ಯನ ಪುನಶ್ಚೇತನಕ್ಕೆ ಮನೋವಿಜ್ಞಾನ ಅಗತ್ಯವಿದೆ. ಪ್ರಸ್ತುತ ಮನೋವಿಜ್ಞಾನವು ಹಲವು ರೂಪಗಳಲ್ಲಿ ಅಧ್ಯಯನಕ್ಕೆ ಲಭ್ಯವಾಗುತ್ತಿದೆ. ಭವಿಷ್ಯದಲ್ಲಿ ಮನೋವಿಜ್ಞಾನ ಪದವೀಧರರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬೇಡಿಕೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ಮನೋವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮನೋವಿಜ್ಞಾನ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ಎಚ್.ಕೆ. ಮಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹಿತಾ ಕ್ಲಾಡಿಯಾ ರಾವ್ ಸ್ವಾಗತಿಸಿದರು.