ಅಣ್ಣಾಸಾಬ ತೆಲಸoಗ
ರಾಜ್ಯದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿರುವ, ಬಡವರ ಪಾಲಿನ ಸಂಜೀವಿನಿ ಅಥಣಿಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೆರಳು ಮತ್ತು ಆಸನ ವ್ಯವಸ್ಥೆ ಇಲ್ಲದೆ ರೋಗಿಗಳು ಮತ್ತು ಸಂಬಂಧಿಕರು ಪರದಾಡುತ್ತಿದ್ದಾರೆ. ಶಾಸಕ ಲಕ್ಷ್ಮಣ ಸವದಿ ತಮ್ಮ ಪ್ರಯತ್ನದಿಂದ ಅನೇಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ ಈ ಸಾರ್ವಜನಿಕ ಆಸ್ಪತ್ರೆಗೆ ಜೀವ ತುಂಬಿದ್ದರು. ಅತ್ಯುತ್ತಮ 10 ಆಸ್ಪತ್ರೆಗಳಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆಯೂ ಒಂದಾಗಿದ್ದು, ಇಲ್ಲಿ ಹೈಟೆಕ್ ಮಾದರಿಯ ಆರೋಗ್ಯ ಸೇವೆಗಳು ದೊರಕುತ್ತಿವೆ. ಹೀಗಾಗಿ, ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಕೆಲವೊಂದು ಮೂಲಸೌಕರ್ಯಗಳು ಸಾರ್ವಜನಿಕರಲ್ಲಿ ಬೇಸರ ಮೂಡಿಸುತ್ತಿದೆ. ಆಸ್ಪತ್ರೆಯ ಆವರಣದಲ್ಲಿ ನೆರಳಿನ ವ್ಯವಸ್ಥೆ, ಊಟ ಮತ್ತು ಉಪಹಾರದ ಕೊಠಡಿ, ಸಾರ್ವಜನಿಕ ಶೌಚಾಲಯ, ವಾಹನ ಪಾರ್ಕಿಂಗ್ ವ್ಯವಸ್ಥೆ, ಔಷಧಗಳ ಕೊರತೆ, ತಜ್ಞ ವೈದ್ಯರ ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಇನ್ನಷ್ಟು ಗಮನಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಸೆ.
ನೆರಳಿನ ವ್ಯವಸ್ಥೆ ಮಾಡಿ:ಆಸ್ಪತ್ರೆ ಆವರಣದಲ್ಲಿ ಕಳೆದ 6 ತಿಂಗಳ ಹಿಂದೆ ಶಾಸಕ ಲಕ್ಷ್ಮಣ ಸವದಿ ₹10 ಲಕ್ಷ ವೆಚ್ಚದಲ್ಲಿ ಚಾವಣಿ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಮಳೆಗಾಲದ ವೇಳೆ ಮಳೆಯಿಂದ ರಕ್ಷಣೆ ಪಡೆಯಲು ಸಹಕಾರಿಯಾಗಲಿ ಎಂದು ಜಿಪಂ ಇಂಜಿನಿಯರಿಂಗ್ ವಿಭಾಗೀಯ ಅಧಿಕಾರಿಗಳಿಗೆ ಈ ಕಾಮಗಾರಿಯನ್ನು ವಹಿಸಿದ್ದರು. ಆದರೆ, ಬೇಸಿಗೆಯ ಬಿಸಿಲು ಮುಗಿದು ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಆದರೆ, ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು 6 ತಿಂಗಳು ಗತಿಸಿದರೂ ಇನ್ನು ಕಾಮಗಾರಿ ಆರಂಭಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಮುಂಭಾಗದಲ್ಲಿ ಜತ್ತ - ಜಾಂಬೋಟಿ ಮತ್ತು ಜೇವರ್ಗಿ- ಸಂಕೇಶ್ವರ ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದು, ಆಸ್ಪತ್ರೆ ಮುಂಭಾಗದಲ್ಲಿಯೇ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಆಸ್ಪತ್ರೆ ಮುಂಭಾಗದಲ್ಲಿಯೇ 4 ರಾಷ್ಟ್ರೀಕೃತ ಬ್ಯಾಂಕುಗಳಿವೆ. ರಸ್ತೆಯ ಮೇಲೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ನಿತ್ಯ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಈ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಇಷ್ಟೇ ಅಲ್ಲದೇ, ಪಾರ್ಕಿಂಗ್ ಸ್ಥಳದಲ್ಲಿ ವಾಣಿಜ್ಯ ಕಟ್ಟಡಗಳ ಮಾಲೀಕರು ಪುರಸಭೆಯಿಂದ ಅನುಮತಿ ಪಡೆದುಕೊಳ್ಳುವಾಗ ನೆಲ ಮಾಳಿಗೆಯನ್ನು ಪಾರ್ಕಿಂಗ್ ವ್ಯವಸ್ಥೆ ಎಂದು ತೋರಿಸಿ ಈಗ ಪುರಸಭೆಯ ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಗಳಿಗೆ ಬಾಡಿಗೆ ನೀಡಿದ್ದಾರೆ. ಇದರಿಂದ ವಾಹನಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಅನಿವಾರ್ಯವಾಗಿ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸುವಂತಾಗಿದೆ. ಇದರಿಂದ ಟ್ರಾಫಿಕ್ ಕಿರಿಕಿರಿ ನಿತ್ಯದ ಗೋಳಾಗಿದೆ. ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಬರುವ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ಆಸ್ಪತ್ರೆಯ ರೋಗಿಗಳನ್ನು ಕಾಣಲು ಬರುವ ಸಂಬಂಧಿಕರು ಹಾಗೂ ಸಾರ್ವಜನಿಕರು ಕುಳಿತು ಊಟ ಮತ್ತು ಉಪಹಾರ ಸೇವಿಸಲು ಸೂಕ್ತವಾದ ಕೋಣೆ ವ್ಯವಸ್ಥೆ ಇಲ್ಲದ್ದರಿಂದ ಆಸ್ಪತ್ರೆಯ ಆವರಣದಲ್ಲಿಯೇ ಜನರು ಊಟ ಮತ್ತು ಉಪಹಾರ ಸೇವಿಸುವ ದೃಶ್ಯಗಳು ಸಾಮಾನ್ಯವಾಗಿವೆ. ಇದರಿಂದ ಆಸ್ಪತ್ರೆಯ ಪರಿಸರ ಮಲೀನವಾಗುತ್ತಿದ್ದು, ವ್ಯವಸ್ಥಿತವಾದ ಡೈನಿಂಗ್ ಹಾಲ್ ನಿರ್ಮಿಸಬೇಕಿದೆ. ಇಲ್ಲವೇ ಸರ್ಕಾರದಿಂದಲೇ ಕ್ಯಾಂಟೀನ್ ವ್ಯವಸ್ಥೆ ಆರಂಭಿಸಬೇಕು ಎಂದು ಇಲ್ಲಿಯ ಜನರ ಅನಿಸಿಕೆ.
----------
ಆಸ್ಪತ್ರೆಯ ಆವರಣದಲ್ಲಿ ಚಾವಣಿ ನಿರ್ಮಾಣ ಕಾಮಗಾರಿಗೆ ಅಂದಾಜು ₹ 14 ಲಕ್ಷ ಬೇಕಾಗಿತ್ತು. ಶಾಸಕ ಲಕ್ಷ್ಮಣ ಸವದಿ ಪ್ರಯತ್ನದಿಂದ ಮೊದಲ ಹಂತದಲ್ಲಿ ₹ 10 ಲಕ್ಷ ಮತ್ತು ಹೆಚ್ಚುವರಿಯಾಗಿ ₹4 ಲಕ್ಷ ಅನುದಾನಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಅದಕ್ಕಾಗಿ ಸ್ವಲ್ಪ ವಿಳಂಬವಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲಾಗುವುದು.
---------
- ಡಾ.ಬಸಗೌಡ ಕಾಗೆ, ತಾಲೂಕು ವೈದ್ಯಾಧಿಕಾರಿ