ಸಾರ್ವಜನಿಕರ ‘ಭೂ ದಾಖಲೆ’ಗಳಿಗೆ ಬಂತು ಆಪತ್ತು..!

KannadaprabhaNewsNetwork | Published : May 20, 2024 1:33 AM

ಸಾರಾಂಶ

ಕೆ.ಆರ್.ಪೇಟೆ ಮಿನಿವಿಧಾನ ಸೌಧವನ್ನು ನಿರ್ಮಿಸಿದ ನಂತರ ತೆರವಾದ ಹಳೆಯ ತಾಲೂಕು ಕಚೇರಿಗೆ ಉಪ ನೋಂದಣಾಧಿಕಾರಿಗಳ ಕಚೇರಿ ಸ್ಥಳಾಂತರಿಸಲಾಗಿದ್ದರೂ ನೋಂದಣಿಯಾದ ಆಸ್ತಿ ದಾಖಲೆಗಳು ಮಾತ್ರ ಹಳೆಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಯೇ ಉಳಿದಿವೆ. ಅವುಗಳಿಗೆ ಸೂಕ್ತ ರಕ್ಷಣೆ ಕೊರತೆ ಎದುರಾಗಿದೆ.

ಎಂ.ಕೆ.ಹರಿಚರಣ್ ತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಸೇರಿದ ರೆಕಾರ್ಡ್ ರೂಂ ಸಹ ಸಂಪೂರ್ಣ ಶಿಥಿಲಗೊಂಡಿದೆ. ಇದರಿಂದ ತಾಲೂಕಿನ ಲಕ್ಷಾಂತರ ರೈತರಿಗೆ ಸಂಬಂಧಿಸಿದ ಭೂ ದಾಖಲೆಗಳು ಅಪಾಯಕ್ಕೆ ಸಿಲುಕುವ ಆತಂಕ ಎದುರಾಗಿದೆ.

ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ಇದ್ದು, ನಿತ್ಯ ನೂರಾರು ರೈತರು ಹಾಗೂ ಸಾರ್ವಜನಿಕರ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಕಾರಣ ಈ ಕಚೇರಿಯನ್ನು ತಾತ್ಕಾಲಿಕವಾಗಿ ಹಳೆ ತಾಲೂಕು ಕಚೇರಿಗೆ ಸ್ಥಳಾಂತರಿಸಲಾಗಿದೆ.

ಮಿನಿವಿಧಾನ ಸೌಧವನ್ನು ನಿರ್ಮಿಸಿದ ನಂತರ ತೆರವಾದ ಹಳೆಯ ತಾಲೂಕು ಕಚೇರಿಗೆ ಉಪ ನೋಂದಣಾಧಿಕಾರಿಗಳ ಕಚೇರಿ ಸ್ಥಳಾಂತರಿಸಲಾಗಿದ್ದರೂ ನೋಂದಣಿಯಾದ ಆಸ್ತಿ ದಾಖಲೆಗಳು ಮಾತ್ರ ಹಳೆಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಯೇ ಉಳಿದಿವೆ. ಅವುಗಳಿಗೆ ಸೂಕ್ತ ರಕ್ಷಣೆ ಕೊರತೆ ಎದುರಾಗಿದೆ.

ಹಳೇ ಕಚೇರಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಹೆಂಚಿನ ತೊಲೆ ಮತ್ತು ರಿಪೀಸ್ ಪಟ್ಟಿಯ ಮರಗಳು ಗೆದ್ದಲು ಹಿಡಿದಿವೆ. ಕಟ್ಟಡದ ಸುತ್ತ ಗಿಡಗೆಂಟೆಗಳು ಬೆಳೆದು ನಿಂತಿವೆ. ಮಳೆ ಬಂದರೆ ಕಟ್ಟಡದೊಳಗೆ ನೀರು ಸೋರಿಕೆಯಾಗುತ್ತಿದೆ. ಸಾರ್ವಜನಿಕರ ದಾಖಲೆಗಳ ಸಂರಕ್ಷಣೆ ಉಪ ನೋಂದಣಾಧಿಕಾರಿಗಳಿಗೆ ಬಹು ದೊಡ್ಡ ಸವಾಲಾಗಿದೆ.

ದಾಖಲೆ ಸಂಗ್ರಹಿಸಲು ಜಾಗದ ಸಮಸ್ಯೆ:

ಪಟ್ಟಣದ ಹಳೆಯ ತಾಲೂಕು ಕಚೇರಿಯನ್ನು ಮೈಸೂರು ಮಹಾರಾಜರ ಆಳ್ವಿಕೆಯ ಸಂದರ್ಭದಲ್ಲಿ (1895) ರಲ್ಲಿ ನಿರ್ಮಿಸಲಾಗಿದೆ. ಮುಂದಿನ ಜಾಗಕ್ಕೆ ಹೊಂದಿಕೊಂಡಂತೆ ನಂತರದ ಕಾಲಘಟ್ಟದಲ್ಲಿ ಉಪ ನೋಂದಣಾಧಿಕಾರಿಗಳ ಕಾರ್ಯಾಲಯವನ್ನು ಮಂಗಳೂರು ಹೆಂಚು ಹಾಗೂ ಮದ್ರಾಸ್ ಆರ್.ಸಿ.ಸಿ ಬಳಸಿ ನಿರ್ಮಿಸಲಾಗಿದೆ.

ಕಟ್ಟಡ ಶಿಥಿಲವಾದ ಕಾರಣದಿಂದ ಕಚೇರಿಯನ್ನು ಹಳೆಯ ತಾಲೂಕು ಕಚೇರಿಗೆ ವರ್ಗಾಯಿಸಲಾಗಿದೆ. ಇದೇ ಜಾಗದಲ್ಲಿ ನೂತನ ಉಪ ನೋಂದಣಾಧಿಕಾರಿಗಳ ಕಚೇರಿ ನೂತನ ಕಟ್ಟಡ ನಿರ್ಮಿಸಲು ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಕಳೆದ 2019ರ ಮಾರ್ಚ್ 18ರಲ್ಲಿಯೇ 1,27,30,000 ಮೊತ್ತದ ಹಣವನ್ನು ಆಡಳಿತಾತ್ಮಕ ಮಂಜೂರಾತಿ ಪಡೆದು ಅನುಮೋದಿಸಿದ್ದಾರೆ.

ಈ ಕುರಿತು ರಾಜ್ಯ ಮುದ್ರಾಂಕ ಇಲಾಖೆ ಇಲ್ಲಿನ ತಹಸೀಲ್ದಾರರಿಗೂ ಲಿಖಿತ ಪತ್ರ ಬರೆದಿದೆ. ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ತಾಲೂಕು ಕಚೇರಿಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ಸಹಕರಿಸುತ್ತಿಲ್ಲ. ಇದು ಪಾರಂಪರಿಕ ಕಟ್ಟಡವಲ್ಲದಿದ್ದರೂ ಹಳೆಯ ತಾಲೂಕು ಕಚೇರಿ ಆವರಣದಲ್ಲಿರುವ ಕಾರಣದಿಂದ ಈ ಕಟ್ಟಡಕ್ಕೂ ಪಾರಂಪರಿಕ ಕಟ್ಟಡದ ಹಣೆಪಟ್ಟಿ ಕಟ್ಟಲಾಗಿದೆ.

ರಾಜ್ಯ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಶಿಥಿಲವಾಗಿರುವ ಹಳೆಯ ಕಟ್ಟಡವನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ಜಿಲ್ಲಾ ಪಾರಂಪರಿಕ ಸಂರಕ್ಷಣಾ ಸಮಿತಿ ಅನುಮೋದನೆ ಪಡೆಯುವಂತೆ ಸೂಚಿಸಿದೆ. ಸಾರ್ವಜನಿಕರ ಆಸ್ತಿ ಪತ್ರಗಳ ಸಂರಕ್ಷಣೆ ದೃಷ್ಟಿಯಿಂದ ಉಪ ನೋಂದಣಾಧಿಕಾರಿಗಳ ನೂತನ ಕಟ್ಟಡ ನಿರ್ಮಿಸಲೇಬೇಕಾಗಿದೆ. ಆದರೆ, ಉಪ ನೋಂದಣಾಧಿಕಾರಿಗಳ ಕಚೇರಿ ನಿರ್ಮಿಸಲು ಅಥವಾ ಹಳೆಯ ಶಿಥಿಲವಾಗಿರುವ ಕಟ್ಟಡವನ್ನು ಕೆಡವಲು ಜಿಲ್ಲಾಧಿಕಾರಿಗಳಾಗಲೀ ಅಥವಾ ತಹಸೀಲ್ದಾರರಾಗಲೀ ಮುದ್ರಾಂಕ ಇಲಾಖೆಗೆ ಅಗತ್ಯ ಸಹಕಾರ ನೀಡುತ್ತಿಲ್ಲ. ಹಳೆಯ ಶಿಥಿಲ ಕಟ್ಟಡದಲ್ಲಿರುವ ನೂರಾರು ವರ್ಷಗಳ ಹಳೆಯ ಆಸ್ತಿ ದಾಖಲಾತಿಗಳು ಹಾಳಾಗುವ ಅಪಾಯಕ್ಕೆ ಸಿಲುಕಿದ್ದರೂ ಸ್ಥಳೀಯವಾಗಿ ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ತಲೆಕಡೆಸಿಕೊಳ್ಳುತ್ತಿಲ್ಲ.

ಉಪ ನೋಂದಣಾಧಿಕಾರಿಗಳು ಶಿಥಿಲಗೊಂಡ ಕಚೇರಿಯಲ್ಲಿರುವ ಎಲ್ಲಾ ಆಸ್ತಿ ದಾಖಲಾತಿಗಳನ್ನು ರಕ್ಷಿಸಿ ನೂತನ ಕಟ್ಟಡ ನಿರ್ಮಾಣ ಆಗುವವರೆಗೆ ತಾಲೂಕು ಆಡಳಿತ ಸೌಧದ ಕಚೇರಿ ಒಳಗೆ ಯಾವುದಾರೊಂದು ಸುಸಜ್ಜಿತ ಕೊಠಡಿ ಪಡೆದು ಇರಿಸಬೇಕು. ಸರ್ಕಾರಿ ಜಾಗದಲ್ಲಿ ಮತ್ತೊಂದು ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ತಹಸೀಲ್ದಾರರು ಅಸಹಕಾರ ನೀಡುತ್ತಿರುವುದು ಖಂಡನಾರ್ಹ. ಈ ಬಗ್ಗೆ ಕ್ಷೇತ್ರದ ಶಾಸಕರು ತುರ್ತು ಗಮನ ಹರಿಸಬೇಕು. ಇಲ್ಲದಿದ್ದರೆ ರೈತರ ಆಸ್ತಿ ಪತ್ರಗಳ ಸಂರಕ್ಷಣೆಗೆ ಒತ್ತಾಯಿಸಿ ರೈತ ಸಂಘದಿಂದ ಹೋರಾಟ ಮಾಡಲಾಗುವುದು.

- ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ

Share this article