ಪ್ರಕಾಶನ ಸಾಹಿತ್ಯ ಸೇವೆಯ ಭಾಗ: ಬಾಚರಣಿಯಂಡ ಅಪ್ಪಣ್ಣ

KannadaprabhaNewsNetwork | Published : Mar 15, 2024 1:24 AM

ಸಾರಾಂಶ

ಮಡಿಕೇರಿ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 84ನೇ ಪುಸ್ತಕ ಬಾಚರಣಿಯಂಡ ರಾಣು ಅಪ್ಪಣ್ಣ ಅವರ ‘ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ’, 85ನೇ ಪುಸ್ತಕ ‘ಕೊಡಗ್‌ರ ವಾಣಿಜ್ಯ ಬೊಳೆ’ ಹಾಗೂ 86ನೇ ಪುಸ್ತಕ ಬಾಚರಣಿಯಂಡ ಅಪ್ಪಣ್ಣ ಅವರ ‘ಜನಪದ ಸಿರಿ’ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೇವಲ ಬರೆಯುವುದನ್ನು ಮಾತ್ರ ಸಾಹಿತ್ಯ ಸೇವೆ ಎಂದು ಹೇಳಲಾಗುವುದಿಲ್ಲ, ಬರಹವನ್ನು ಪ್ರಕಾಶನದ ರೂಪದಲ್ಲಿ ಹೊರತರುವುದು ಮತ್ತು ಜನರ ಮನೆಮನೆಗೆ ತಲುಪಿಸುವುದು ಕೂಡ ಸಾಹಿತ್ಯ ಸೇವೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 84ನೇ ಪುಸ್ತಕ ಬಾಚರಣಿಯಂಡ ರಾಣು ಅಪ್ಪಣ್ಣ ಅವರ ‘ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ’, 85ನೇ ಪುಸ್ತಕ ‘ಕೊಡಗ್‌ರ ವಾಣಿಜ್ಯ ಬೊಳೆ’ ಹಾಗೂ 86ನೇ ಪುಸ್ತಕ ಬಾಚರಣಿಯಂಡ ಅಪ್ಪಣ್ಣ ಅವರ ‘ಜನಪದ ಸಿರಿ’ ಲೋಕಾರ್ಪಣೆಗೊಂಡಿತು.

ಕೊಡವ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಹಿಂದಿನ ಕಾಲದಲ್ಲಿ ಸಾಹಿತಿಗಳಿಗೆ ಅಷ್ಟು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ, ಶ್ರವಣ ಮಾಧ್ಯಮ ಜನರಿಗೆ ಅದರ ಸಾರವನ್ನು ತಿಳಿಸಿ, ಇಂದಿನ ಸಮಾಜವನ್ನು ಜಾಗೃತ ಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಿದೆ ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎಂ.ಎ ಕೊಡವ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸುವ ದೃಷ್ಟಿಯಿಂದ ತಮ್ಮ ಅನುಭವದ ವಿಷಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದರು.

ಆಧುನೀಕರಣಗೊಳ್ಳುತ್ತಿರುವ ಸಮಾಜದಲ್ಲಿ ಹಳೆಯ ಕಾಲದ ಬದುಕು, ಸಂಸ್ಕೃತಿ, ಜನಪದ ಕ್ರೀಡೆ, ಜಾನಪದ ರಂಗಭೂಮಿ, ವೈದ್ಯ ಪದ್ಧತಿ ಸೇರಿದಂತೆ ವಿವಿಧ ಕ್ಷೇತ್ರದ ಮಾಹಿತಿಯನ್ನು ಜನಪದ ಸಿರಿ ಪುಸ್ತಕದಲ್ಲಿ ಲಿಖಿತ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಸಾಹಿತ್ಯ ಎನ್ನುವುದು ವ್ಯಕ್ತಿಯ ಮನದಾಳದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಪ್ರೋತ್ಸಾಹ ನೀಡಿದರೆ ಮಾತ್ರ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.ಹಿಂದಿನ ದಿನಗಳಲ್ಲಿ ಮಾಧ್ಯಮಗಳು ಅಷ್ಟು ಪ್ರಭಾವಿಯಾಗಿರಲಿಲ್ಲ. ಪ್ರಸ್ತುತ ದೃಶ್ಯ ಮಾಧ್ಯಮ, ಸುದ್ದಿ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿದ್ದು, ಎಲ್ಲಾ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.

ಕೊಡಗ್‌ನ ವಾಣಿಜ್ಯ ಬೆಳೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೊಡಗು ಸಾಮಾಜಿಕ ಅರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹಾಲಿ ಪ್ರಬಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಡುವಂಡ ಸುರೇಶ್ ಚಂಗಪ್ಪ, ಕೊಡವ ಮಕ್ಕಡ ಕೂಟ ಸುಮಾರು 86 ಪುಸ್ತಕಗಳನ್ನು ಹೊರ ತಂದಿದೆ. ಜೊತೆಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಆ ಮೂಲಕ ಯುವ ಪೀಳಿಗೆಗೆ ಸಾಂಸ್ಕೃತಿಕ ಚಟುವಟಿಕೆ ಮತ್ತು ಹಿಂದಿನ ಆಚಾರ, ವಿಚಾರವನ್ನು ಮುಂದುವರೆಸಿಕೊಂಡು ಹೋಗಲು ಪ್ರೇರೆಪಿಸುತ್ತಿದೆ ಎಂದರು.

ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಜ್ಞಾನೋದಯ ಆಂಗ್ಲ ಮಾದ್ಯಮ ವಿದ್ಯಾಸಂಸ್ಥೆಯ ಆಡಳಿತಧಿಕಾರಿ ಹಾಗೂ ಪ್ರಾಂಶುಪಾಲ ಚೀಯಕಪೂವಂಡ ಶ್ವೇತನ್ ಚಂಗಪ್ಪ, ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಅವರು ವಿವಿಧ ದೇಶ ಸುತ್ತಿದ್ದು, ಎಲ್ಲಾ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಇವರ ಜ್ಞಾನ ಅಪಾರ, ಇವರುಗಳು ಕೊಡಗಿನ ನಿಘಂಟು ಇದ್ದಂತೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಯ ಮೇಲಿನ ಆಸಕ್ತಿಯಿಂದ ಕೊಡವ ಮಕ್ಕಡ ಕೂಟ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಒಟ್ಟು 86 ಕೃತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ ಅಂತ್ಯದೊಳಗೆ 14 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಈಗಾಗಲೇ ತಯಾರಿ ಹಂತದಲ್ಲಿದೆ. ಆ ಮೂಲಕ ಒಟ್ಟು 100 ಪುಸ್ತಕಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಖಜಾಂಚಿ ಮೂವೇರ ಧರಣಿ ಗಣಪತಿ ‘ಜನಪದ ಸಿರಿ’ ಪುಸ್ತಕ ಬಿಡುಗಡೆಗೊಳಿಸಿದರು.

Share this article