ಬಳ್ಳಾರಿ: ನಗರದ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್‌ನ ಶ್ರೀ ವಾಸವಿ ವಿದ್ಯಾಶಾಲೆಯ ವಿದ್ಯಾರ್ಥಿಗಳು ಭಾರತವು ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಗೆದ್ದು ಬರಲಿ ಎಂದು ಹಾರೈಸಿ, ಶಾಲೆಯ ಆವರಣದಲ್ಲಿ ಶ್ರೀ ವಾಸವಿ ಮಾತೆಗೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆ ಮಾಡಿದರು.
ರಾಷ್ಟ್ರೀಯ ಧ್ವಜ, ಭಾರತೀಯ ಕ್ರಿಕೆಟ್ ಆಟಗಾರರ ಭಾವಚಿತ್ರಗಳನ್ನು ಹಿಡಿದು "ಭಾರತ ಮಾತಕೀ ಜೈ, ಭಾರತ ಕ್ರಿಕೆಟ್ ಪಂದ್ಯದಲ್ಲಿ ಗೆದ್ದು ವಿಶ್ವಕಪ್ ತರಲಿ " ಎಂದು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು. ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀ ವಾಸವಿ ವಿದ್ಯಾಶಾಲೆಯ ಮುಖ್ಯಗುರು ವೀರೇಶ್ , ಭಾರತ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಭಾರತ ತಂಡದ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಇಡೀ ಪ್ರಪಂಚವೇ ಭಾರತದ ಕಡೆ ನೋಡುವಂತಾಗಿದೆ ಎಂದರು. ಕ್ರಿಕೆಟ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಭಾರತ ಗಮನೀಯ ಸಾಧನೆ ಮಾಡುತ್ತಿದೆ. ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಬಲವಾಗಿದೆ. ಇಡೀ ದೇಶವೇ ವಿಶ್ವಕಪ್ ಗೆಲುವಿಗಾಗಿ ದೇವರನ್ನು ಪ್ರಾರ್ಥಿಸುತ್ತಿದೆ. ಭಾರತ ತಂಡವು 1983 ಹಾಗೂ 2011ರಲ್ಲಿನ ಸಂಭ್ರಮವು ಮತ್ತೆ ಮರುಕಳಿಸುತ್ತಿರುವುದರೊಂದಿಗೆ ವಿಶ್ವಮಟ್ಟದಲ್ಲಿ ಇತಿಹಾಸ ಸೃಷ್ಟಿಸಲಿದೆ. ಮಕ್ಕಳ ಹಾರೈಕೆಯಿಂದ ಭಾರತ ತಂಡವು ವಿಶ್ವಕಪ್ ಗೆದ್ದು ಬರಲಿ. ಇಡೀ ವಿಶ್ವಕ್ಕೆ ಭಾರತದ ಕ್ರೀಡಾಶಕ್ತಿಯನ್ನು ಸಾಬೀತುಪಡಿಸುವಂತಾಗಲಿ ಎಂದು ಹಾರೈಸಿದರು.ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ಪದಾಧಿಕಾರಿಗಳು ಮಾತನಾಡಿದರು. ಟ್ರಸ್ಟ್‌ನ ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಭಾರತ ವಿಶ್ವಕಪ್ ಗೆದ್ದು ಬರಲಿ ಎಂದು ನಗರದ ಸೂರ್ಯಕಲಾ ಟ್ರಸ್ಟ್‌ನ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಸಿ, ಭಾರತ ತಂಡಕ್ಕೆ ಶುಭ ಕೋರಲಾಯಿತು. ಚೆಕ್ ದೇ ಇಂಡಿಯಾ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಕೊನೆಯಲ್ಲಿ ಭಾರತ ವಿಶ್ವಕಪ್ ಗೆದ್ದು ಬರಲಿ ಎಂದು ಮಕ್ಕಳು ಘೋಷಣೆಗಳನ್ನು ಕೂಗಿದರು.ನೇರ ಪ್ರಸಾರ ವೀಕ್ಷಣೆಗೆ ಪ್ರವೇಶ: ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಾವಳಿಯ ನೇರ ಪ್ರಸಾರ ವೀಕ್ಷಣೆ ಮಾಡಲು ನಗರದ ಡಾ. ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನದಲ್ಲಿ ಬಳ್ಳಾರಿ ಜಿಲ್ಲಾಡಳಿತವು ಎಲ್‍ಇಡಿ ಪರದೆ ವ್ಯವಸ್ಥೆ ಕಲ್ಪಿಸಿದೆ.
ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಾವಳಿಯು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನ. 19ರಂದು ನಡೆಯಲಿದ್ದು, ಮ್ಯಾಚ್‍ನ ನೇರ ಪ್ರಸಾರವನ್ನು ಮಧ್ಯಾಹ್ನ 1.30ರಿಂದ ನಗರದ ಡಾ. ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನದಲ್ಲಿ ಎಲ್‍ಇಡಿ ಪರದೆಯಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಪಂದ್ಯಾವಳಿಯನ್ನು ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.