ಮಾ.3 ರಂದು ಪಲ್ಸ್ ಪೋಲಿಯೊ ಕಾರ್ಯಕ್ರಮ

KannadaprabhaNewsNetwork |  
Published : Feb 20, 2024, 01:48 AM IST
19ಸಿಎಚ್‌ಎನ್‌55ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ಪೋಲಿಯೊ ಕಾರ್ಯಕ್ರಮದ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು  ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ನಡೆಸಿದರು. | Kannada Prabha

ಸಾರಾಂಶ

ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಮಾ.3 ರಂದು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಈ ಸಂಬಂಧ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಮಾ.3 ರಂದು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಈ ಸಂಬಂಧ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ದೇಶದ ಭವಿಷ್ಯವಾಗಿದ್ದಾರೆ. ಭಾರತ ಪೋಲಿಯೋ ಮುಕ್ತವಾಗಿದ್ದು, ನೆರೆಹೊರೆಯ ದೇಶಗಳಲ್ಲಿ ಪೋಲಿಯೊ ಪ್ರಕರಣಗಳಿವೆ. ಪೋಲಿಯೊವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮುನ್ನೆಚ್ಚರಿಕೆಯಾಗಿ ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹನಿಯನ್ನು ಕಡ್ಡಾಯವಾಗಿ ಹಾಕಲಾಗುತ್ತದೆ. ಪಲ್ಸ್ ಪೋಲಿಯೊ ರಾಷ್ಟ್ರೀಯ ಕಾರ್ಯಕ್ರಮವಾಗಿರುವುದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿ ಶೇ. 100ರಷ್ಟು ಗುರಿ ಸಾಧನೆಗೆ ಮುಂದಾಗಬೇಕು ಎಂದರು.ಈ ಬಾರಿ ಚಾಮರಾಜನಗರ ತಾಲೂಕಿನ 20514, ಗುಂಡ್ಲುಪೇಟೆ 11426, ಕೊಳ್ಳೇಗಾಲ 10647, ಹನೂರು 11861 ಹಾಗೂ ಯಳಂದೂರಿನ 4209 ಮಕ್ಕಳು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 58,657 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 612 ಬೂತ್‌ಗಳು, 23 ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದೆ. ಲಸಿಕೆ ಹಾಕಲು 2,394 ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಅಲ್ಲದೆ ಜಿಲ್ಲೆಯ ನಗರ, ಗ್ರಾಮಾಂತರ ಪ್ರದೇಶಗಳು, ಕಾಡಂಚಿನ ಪ್ರದೇಶಗಳು, ಹಾಡಿಗಳಲ್ಲಿನ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲೆಯ ಸರ್ಕಾರಿ, ಖಾಸಗಿ ಬಸ್ ಹಾಗೂ ರೈಲ್ವೆ ನಿಲ್ದಾಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದೆ. ಲಸಿಕಾ ಕೇಂದ್ರ ತೆರೆಯಲು ಅನುಕೂಲವಾಗುವಂತೆ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಅವಶ್ಯವಿರುವೆಡೆ ಶಾಲೆಗಳಲ್ಲಿ ಅನುವು ಮಾಡಿಕೊಡಬೇಕು. ಎಲ್ಲಾ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಶಿಕ್ಷಕರು ಪೋಲಿಯೊ ಲಸಿಕೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಪೋಷಕರು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜಿಲ್ಲಾವ್ಯಾಪ್ತಿಯ ಎಲ್ಲಾ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ವ್ಯಾಪಕವಾಗಿ ತೊಡಗಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ ಮಾತನಾಡಿ, 1995ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನೀರು ಆಹಾರದ ಮೂಲಕ ಪೋಲಿಯೊ ವೈರಸ್‌ನಿಂದ ನಮ್ಮ ದೇಹ ಸೇರಲಿದ್ದು, ಇದರಿಂದ ದೇಹ ಸ್ವಾಧೀನ ಕಳೆದುಕೊಳ್ಳಲಿದೆ. ಮಕ್ಕಳಿಗೆ ಈ ಹಿಂದೆ ಪೋಲಿಯೊ ಹನಿ ಹಾಕಿಸಿದ್ದರು ಸಹ ಈ ಬಾರಿಯೂ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಪಲ್ಸ್ ಪೋಲಿಯೊ ಕಾರ್ಯಕ್ರಮದ ನಿರ್ವಹಣೆಗಾಗಿ ತಾಲೂಕು ಆರೋಗ್ಯಾಧಿಕಾರಿಗಳನ್ನೊಳಗೊಂಡ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆ ನಡೆಸಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ ವಿ ಸುಧಾ, ತಹಸೀಲ್ದಾರ್ ಐಈ ಬಸವರಾಜು, ಆರೋಗ್ಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...