ಧಾರವಾಡ: ಜೀವನ ಶೈಲಿ ಪ್ರಭಾವ, ಒತ್ತಡದ ಜೀವನ, ಆಹಾರ ಪದ್ಥತಿ ಆಧಾರದ ಮೇಲೆ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಸಮಸ್ಯೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳು ಮೊದಲಿಗಿಂದಲೂ ಸಮರ್ಥವಾಗಿ ಸೇವೆ ಸಲ್ಲಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗೂಂಡೂರಾವ್ ಹೇಳಿದರು.
ಇಲ್ಲಿಯ ಜಿಪಂ ಭವನದಲ್ಲಿ ಮಂಗಳವಾರ ಬೆಳಗಾವಿ ವಿಭಾಗ ಮಟ್ಟದ ಇಲಾಖೆಯ ಪ್ರಗತಿ ಪರಿಶೀಲನೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಿರಿವಂತರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಪ್ಪಟ್ಟು ಹಣ ನೀಡಿಯಾದರೂ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ, ಬಡವರ ಪರಿಸ್ಥಿತಿ ಹಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಹೀಗಾಗಿ ವೈದ್ಯರು ಪ್ರಾಮಾಣಿಕವಾಗಿ ಜವಾಬ್ದಾರಿಯಿಂದ ಸೇವೆ ಸಲ್ಲಿಸಬೇಕೆಂದರು.
ರಾಜ್ಯದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಪುನೀತ ರಾಜಕುಮಾರ ಹೃದಯ ಜ್ಯೋತಿ ಯೋಜನೆ, ಗೃಹ ಆರೋಗ್ಯ ಯೋಜನೆಗಳನ್ನು ವಿಸ್ತರಿಸಿದ್ದು, ಜತೆಗೆ ಡೇ ಕೇರ್ ಕಿಮೋಥೆರಪಿ, ಸೋಂಟ ಮತ್ತು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಅಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಫಲಾನುಭವಿಗಳಿಗೆ ಈ ಯೋಜನೆಗಳ ಲಾಭ ದೊರಕುವಂತೆ ಕಾರ್ಯ ಮಾಡಲು ಸೂಚಿಸಿದ ಸಚಿವರು, ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ, ಯಂತ್ರೋಪಕರಣಗಳು ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ತಮ್ಮ ಗಮನಕ್ಕೆ ತಂದರೆ ಪರಿಹಾರ ಒದಗಿಸಲಾಗುವುದು ಎಂಬ ಭರವಸೆ ನೀಡಿದರು.ಬೆಳಗಾವಿ ವಿಭಾಗದ ಬೆಳಗಾವಿ ಸೇರಿದಂತೆ ಧಾರವಾಡ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟ, ಗದಗ ಜಿಲ್ಲೆಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿ, ಪ್ಯಾರಾ-ಮೆಡಿಕಲ್ ಸಿಬ್ಬಂದಿ, ಕ್ಷೇತ್ರ ಸಿಬ್ಬಂದಿ, ಮೂಲಭೂತ ಸೌಕರ್ಯಗಳ ಮಾಹಿತಿ ಪಡೆದ ಸಚಿವರು, ಆಗಸ್ಟ್ ತಿಂಗಳಲ್ಲಿ ಸಿಬ್ಬಂದಿ ನೇಮಕಾತಿ ಭರವಸೆ ನೀಡಿದರು. ಜನನ ಹಾಗೂ ಮರಣ ದರ ಪ್ರಗತಿ ಸಮಯದಲ್ಲಿ ಹಾವೇರಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಜನನ, ಮರಣ ಹಾಗೂ ಜನನ ಪೂರ್ವವೇ ಮರಣ ಹೊಂದಿದ ಮಕ್ಕಳ ಪ್ರಮಾಣ ಹೆಚ್ಚಿರುವುದು ಆತಂಕಕಾರಿ ಸಂಗತಿ ಎಂದು ಆಯಾ ಆರೋಗ್ಯಾಧಿಕಾರಿಗಳಿಗೆ ಸಚಿವರು ಪ್ರಶ್ನಿಸಿದರು.
ಅಂಕಿ ಅಂಶ ಪರಿಶೀಲಿಸಿದರೆ ಧಾರವಾಡದಲ್ಲಿ ಒಂದೂ ರಕ್ತ ಸಂಗ್ರಹಣ ಕೇಂದ್ರಗಳಿಲ್ಲ, ವಿಜಯಪೂರದಲ್ಲಿ ಬರೀ ನಾಲ್ಕು ಇದ್ದು ಕಡ್ಡಾಯವಾಗಿ ತಾಲೂಕು ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹಣ ಕೇಂದ್ರಗಳನ್ನು ತರೆಯಲು ಕ್ರಮ ಕೈಗೊಳ್ಳಲು ಸೂಚಿಸಿದರು. ಒಟ್ಟು ವಿಭಾಗಕ್ಕೆ 194 ನಮ್ಮ ಕ್ಲಿನಿಕ್‌ಗಳು ಅನುಮೋದನೆಯಾಗಿದ್ದು, ಈ ಪೈಕಿ 171 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ ಕ್ಲಿನಿಕ್ ಆರಂಭಿಸಲು ಸಮಸ್ಯೆಗಳೇನು ಎಂದು ಪ್ರಶ್ನಿಸಿದರು. ಆಗ, ವಿವಿಧ ಜಿಲ್ಲೆಗಳ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿ, ಕ್ಲಿನಿಕ್ ಆರಂಭಕ್ಕೆ ಜಾಗದ ಸಮಸ್ಯೆ ಮುನ್ನಲೆಗೆ ಬಂತು. ಶೀಘ್ರ ಜಾಗದ ತೊಂದರೆ ಬಗೆಹರಿಸಿ ನಮ್ಮ ಕ್ಲಿನಿಕ್ ಆರಂಭಿಸಲು ಸಚಿವ ಗುಂಡೂರಾವ್ ಸೂಚಿಸಿದರು.ಈ ಬಾರಿ ಅದೃಷ್ಟವಶಾತ್ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದೆ. ಬೆಳಗಾವಿಯಲ್ಲಿ 21, ಬಾಗಕೋಟೆ 16, ಧಾರವಾಡ 62, ಗದಗ 40, ಉತ್ತರ ಕನ್ನಡ 22, ವಿಜಯಪುರ 58 ಹಾಗೂ ಹಾವೇರಿಯಲ್ಲಿ 29 ಪ್ರಕರಣಗಳು ಖಚಿತವಾಗಿವೆ. ಯಾವುದೇ ಮರಣ ಇಲ್ಲ ಎಂದ ಅವರು, ವಿಭಾಗದ ಏಳು ಜಿಲ್ಲೆಗಳಲ್ಲಿ ನಾಯಿ ಹಾಗೂ ಹಾವು ಕಡಿತದ ಪ್ರಕರಣಗಳಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಬೇಕಾದ ಚುಚ್ಚುಮದ್ದಿನ ಸಂಗ್ರಹ ಇರಲಿ. ವಿಭಾಗದಲ್ಲಿ 18 ಜನರು ಹಾವು ಕಡಿತದಿಂದ ಹಾಗೂ ಮೂವರು ನಾಯಿ ಕಡಿತದಿಂದ ಮೃತರಾಗಿದ್ದು, ಯಾವುದೇ ಕಾರಣಕ್ಕೂ ನಾಯಿ ಹಾಗೂ ಹಾವು ಕಚ್ಚಿಸಿಕೊಂಡವರು ಮರಣ ಹೊಂದದಂತೆ ಎಚ್ಚರ ವಹಿಸಲು ತಿಳಿಸಿದರು.
ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ. ಈಶ್ವರ ಹೊಸಮನಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ. ಅವಿನಾಶ ಮನೆನ್, ಆರೋಗ್ಯ ಇಲಾಖೆ ನಿರ್ದೇಶಕ ಕೆ. ವಸಂತಕುಮಾರ, ಜಿಪಂ ಸಿಇಓ ಭುವನೇಶ ಪಾಟೀಲ, ಧಾರವಾಡ ಡಿಎಚ್‌ಓ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಿ. ಗಾಬಿ ಸೇರಿದಂತೆ ಏಳು ಜಿಲ್ಲೆಗಳ ಆರೋಗ್ಯ ಇಲಾಖೆ ಮುಖ್ಯಸ್ಥರಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿ ಹಾಗೂ ವಿವಿಧ ಯೋಜನೆ ಅಡಿ ಫಲಾನುಭವಿಗಳಿಗೆ ಸನ್ಮಾನಿಸಲಾಯಿತು.