ಬೆಳ್ತಂಗಡಿ : ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಲ್ಲಿನ ಅವ್ಯವಸ್ಥೆಯಿಂದಾಗಿ ಶುಕ್ರವಾರ ಅಲ್ಲಲ್ಲಿ ಸಂಚಾರದಲ್ಲಿ ಅವ್ಯವಸ್ಥೆ ಉಂಟಾಗಿದೆ. ಇದರಿಂದಾಗಿ ದಿನನಿತ್ಯದ ಪ್ರಯಾಣಿಕರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ.
ಮಡಂತ್ಯಾರು ಎಂಬಲ್ಲಿ ರಾ.ಹೆ.ಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ತಿರುವೊಂದರಲ್ಲಿ ಕೆಟ್ಟು ನಿಂತ ಪರಿಣಾಮ ಸುಮಾರು ಒಂದು ಗಂಟೆ ಪುಂಜಾಲಕಟ್ಟೆಯಿಂದ ಮಡಂತ್ಯಾರುವಿನ ತನಕ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರಯಾಣಿಕರು ಹಿಡಿ ಶಾಪ ಹಾಕುವುದು ಕಂಡುಬಂತು. ಬಳಿಕ ಸ್ಥಳೀಯರೇ ಸೇರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇನ್ನೊಂದೆಡೆ ರಸ್ತೆಯಲ್ಲಿ ಟ್ರಕ್ ಜಾಮ್ ಆಗಿ ಕಿ.ಮೀ. ತನಕ ಟ್ರಾಫಿಕ್ ಜಾಮ್ ಉಂಟಾದ ಘಟನೆ ಶುಕ್ರವಾರ ಬೆಳ್ತಂಗಡಿ ಸನಿಹದ ಕಾಶಿಬೆಟ್ಟು ಎಂಬಲ್ಲಿ ಸಂಭವಿಸಿದೆ. ಮಧ್ಯಾಹ್ನ ಸುಮಾರು 1.50ರ ವೇಳೆಗೆ ಬೆಳ್ತಂಗಡಿಯಿಂದ ಉಜಿರೆಗೆ ಬರುತ್ತಿದ್ದ ಟ್ರಕ್ ರಸ್ತೆಯಲ್ಲೇ ಜಾಮ್ ಆಗಿದ್ದು ಆ ಬಳಿಕ ಎರಡೂ ಕಡೆ ಸಾಗುವ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಉಜಿರೆ ಹಾಗೂ ಬೆಳ್ತಂಗಡಿ ಕಡೆ ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು ಈ ಮಧ್ಯೆ ಬಂದ ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಪರದಾಡಿದೆ. ಉಜಿರೆಯಿಂದ ಬಂದ ಖಾಸಗಿ ಬಸ್ಸೊಂದು ಕಾಶಿಬೆಟ್ಟು ಬಸ್ ಸ್ಟಾಪ್‌ನಲ್ಲಿದ್ದ ಸ್ವಲ್ಪ ಜಾಗದಲ್ಲೇ ತಿರುವು ಪಡೆದುಕೊಂಡು ವಾಪಸ್ ಹೋಗಿದೆ. ಕಾಶಿಬೆಟ್ಟು ಪರಿಸರದ ರಸ್ತೆ ತೀರ ಕೆಟ್ಟು ಹೋಗಿದ್ದು ಭಾರಿ ಹೊಂಡ ನಿರ್ಮಾಣವಾಗಿದೆ. ಈ ರಸ್ತೆ ಸಂಚಾರವೇ ಬೇಡ ಎಂದರೂ ಪ್ರಯಾಣಿಕರು ಅನಿವಾರ್ಯವಾಗಿ ಇದೇ ರಸ್ತೆಯಲ್ಲಿ ಸಾಗಬೇಕಿದೆ. ಇದೊಂದು ಪರಿಹಾರವೇ ಕಾಣದ ಸಮಸ್ಯೆಯಾಗಿ ಪರಿಣಮಿಸಿದೆ.ಮತ್ತೊಂದೆಡೆ ಉಜಿರೆಯಿಂದ ಸೋಮಂತಡ್ಕದವರೆಗಿನ ರಾ.ಹೆ.ಯ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ರಸ್ತೆಯೊಳಗೆ ಹೊಂಡವೋ ಹೊಂಡದೊಳಗೆ ರಸ್ತೆಯೋ ಎಂಬಂತಹ ಸ್ಥಿತಿ ಇಲ್ಲಿಯದು. ಇಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ದುಸ್ಥಿತಿ ಇದೆ. ಬೇಸಗೆಯಲ್ಲಿ ಧೂಳೋ ಧೂಳು. ಈಗ ಮಳೆಗಾಲದಲ್ಲಿ ಕೆಸರು-ಗುಂಡಿ. ಚಾರ್ಮಾಡಿ ಮೂಲಕ ಚಿಕಮಗಳೂರು, ಬೆಂಗಳೂರು ಇತ್ಯಾದಿ ಊರುಗಳನ್ನು ಸಂಪರ್ಕಿಸುವ ರಸ್ತಯುಲ್ಲಿ ಸಂಚರಿಸುವ ಚಾಲಕರ ಕಷ್ಟ ಹೇಳತೀರದು.