ಮಳೆ ಬಂದಾಗ ಕೆಸರು ಗದ್ದೆಯಂತಾಗುವ ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ

KannadaprabhaNewsNetwork | Published : May 7, 2024 1:05 AM

ಸಾರಾಂಶ

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73 ಇದರ ಕಾಮಗಾರಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಪುಂಜಾಲಕಟ್ಟೆಯಿಂದ ಮದ್ದಡ್ಕ, ಕುವೆಟ್ಟು, ಗುರುವಾಯನಕೆರೆ, ಬೆಳ್ತಂಗಡಿ, ಕಾಶಿಬೆಟ್ಟು, ಉಜಿರೆ, ಮುಂಡಾಜೆ, ಚಿಬಿದ್ರೆ ಚಾರ್ಮಾಡಿ ತನಕ ಮೊದಲಿನ ಹೆದ್ದಾರಿಯನ್ನುಅಳಿಸಿ ಹೊಸತಾಗಿ ದ್ವಿಪಥವಾಗಿ ರಚನೆಯಾಗುತ್ತಿದೆ. ಮಳೆ ಬಂದರೆ ಈ ಭಾಗ ಕೆಸರು ಗದ್ದೆಯಂತಾಗುತ್ತದೆ.

ದೀಪಕ್‌ ಅಳದಂಗಡಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಿಸಿಲು ಧಗಧಗಿಸುತ್ತಿದೆ. ಜನತೆ ತತ್ತರಿಸಿ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ ಇದುವರೆಗೆ ಕಂಡು ಬಂದಿಲ್ಲ. ಆದರೆ ಅಚಾನಕ್ ಆಗಿ ಧೋ ಎಂದು ಮಳೆ ಸುರಿಯತೊಡಗಿದರೆ ಮಾತ್ರ ತಾಲೂಕಿನ ಹಲವಾರು ಕಡೆ ಜನಜೀವನಕ್ಕೆ ಹಾಗೂ ಸಂಚಾರಕ್ಕೆ ತೊಂದರೆಯಾಗಲಿದೆ.

ಯಾಕೆಂದರೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ-73 ಇದರ ಕಾಮಗಾರಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಪುಂಜಾಲಕಟ್ಟೆಯಿಂದ ಮದ್ದಡ್ಕ, ಕುವೆಟ್ಟು, ಗುರುವಾಯನಕೆರೆ, ಬೆಳ್ತಂಗಡಿ, ಕಾಶಿಬೆಟ್ಟು, ಉಜಿರೆ, ಮುಂಡಾಜೆ, ಚಿಬಿದ್ರೆ ಚಾರ್ಮಾಡಿ ತನಕ ಮೊದಲಿನ ಹೆದ್ದಾರಿಯನ್ನುಅಳಿಸಿ ಹೊಸತಾಗಿ ದ್ವಿಪಥವಾಗಿ ರಚನೆಯಾಗುತ್ತಿದೆ. ಇದಕ್ಕಾಗಿ ಮರಗಳನ್ನು ಕಡಿಯಲಾಗಿದೆ. ರಸ್ತೆ ಬದಿಯ ಗುಡ್ಡಗಳನ್ನು ಅಗೆದು ಹಾಕಲಾಗಿದೆ. ಏರು ತಗ್ಗುಗಳನ್ನು ಇಲ್ಲದಂತೆ ಮಾಡಲಾಗುತ್ತಿದೆ. ತಿರುವುಗಳನ್ನು ನೇರಗೊಳಿಸಲಾಗುತ್ತಿದೆ.

ಮಳೆ ಬಂದರೆ ಎಲ್ಲ ಅಯೋಮಯ:

ಇಷ್ಟೆಲ್ಲಾ ಬೃಹತ್ ಪ್ರಮಾಣದಲ್ಲಿ ಕಾಮಗಾರಿಗಳು ನಡೆಯುತ್ತಿರಬೇಕಾದರೆ ಮಳೆಗಾಲವೇ ಪ್ರಾರಂಭವಾದರೆ ಇಲ್ಲಿನ ಸ್ಥಿತಿ ಅಯೋಮಯವಾಗಲಿದೆ. ಸಂಚಾರ ಅವ್ಯವಸ್ಥೆಯ ಚಿತ್ರಣ ಈಗಾಗಲೇ ಟ್ರೈಲರ್ ರೂಪದಲ್ಲಿ ಕಳೆದ ಹತ್ತು ದಿನಗಳ ಹಿಂದೆಯೇ ಆಗಿದೆ. ಉಜಿರೆಯಿಂದ ಸೋಮಂತಡ್ಕದ ಹೆದ್ದಾರಿಯು ಕೆಸರುಮಯವಾಗಿತ್ತು. ಹತ್ತಾರು ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬಿದ್ದಿದ್ದರು. ಕೆಲ ವಾಹನ ಅಪಘಾತಗಳೂ ಸಂಭವಿಸಿದ್ದವು. ಇದೇ ರೀತಿಯ ಚಿತ್ರಣ ಮಡಂತ್ಯಾರು, ಮದ್ದಡ್ಡ, ಹಳೇಕೋಟೆ, ಚಾರ್ಮಾಡಿ ಮೊದಲಾದೆಡೆ ಕಾಣಸಿಗಲಿದೆ.

ಈಗಾಗಲೇ ಸುಮಾರು 35 ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇನ್ನೂ ಒಂದು ವರ್ಷ ಕಾಮಗಾರಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಯಾವ ರೀತಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬಹುದು ಎಂದು ಕಾದು ನೋಡಬೇಕಾಗಿದೆ.

ಇಂದಿಗೂ ಮಾಸದ ಪ್ರವಾಹ:

2019ರಲ್ಲಿ ನೇತ್ರಾವತಿ, ಮೃತ್ಯುಂಜಯ ನದಿಗಳು ಉಕ್ಕಿ ಹರಿದು ಕಿಲ್ಲೂರು, ದಿಡುಪೆ, ಕಡಿರುದ್ಯಾವರ, ಚಾರ್ಮಾಡಿ, ನೆರಿಯ ಮೊದಲಾದ ಸುಮಾರು 10 ಗ್ರಾ.ಪಂ.ವ್ಯಾಪ್ತಿಯ ಪ್ರದೇಶದಲ್ಲಿ ಹಿಂದೆಂದೂ ಕಂಡರಿಯದ ಭಯಾನಕ ನೆರೆ ಉಂಟಾಗಿತ್ತು. ಅಂದು ಜನಜೀವನ, ಭೂ ಪ್ರದೇಶ ಅಲ್ಲೋಲ್ಲ ಕಲ್ಲೋಲವಾಗಿತ್ತು. ರಸ್ತೆ, ಸೇತುವೆಗಳು ಜಖಂಗೊಂಡಿದ್ದವು. ಹಲವಾರು ಮನೆಗಳು ಹಾನಿಗೊಂಡಿದ್ದವು. ಸಂತ್ರಸ್ತರಿಗೆ ಸರ್ಕಾರ, ಸಂಘ ಸಂಸ್ಥೆಗಳು ಸೂಕ್ತ ಪರಿಹಾರ ನೀಡಿ ಪುನರಪಿ ಜೀವನಕ್ಕೆ ಅನುವು ಮಾಡಿಕೊಟ್ಟಿದ್ದವು. ಆದರೆ ಮಳೆಗಾಲ ಶುರುವಾದರೆ ಅಲ್ಲಿನ ಜನ ಈಗಲೂ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಅರೆಕ್ಷಣ ಭಯಭೀತರಾಗುತ್ತಾರೆ. ಆದರೆ ಅದಾದ ಬಳಿಕ ಕಳೆದ ಬಾರಿಯ ಮಳೆಗಾಲದವರೆಗೆ ಯಾವುದೇ ದುರ್ಘಟನೆ ನಡೆದಿಲ್ಲ.

ಮರಳು ಮಾಫಿಯಾದಿಂದಾಗಿ ಯಾವುದೇ ನದಿಗಳು ಉಕ್ಕಿ ಹರಿದಿಲ್ಲ. ಮುಂದಿನ ಮಳೆಗಾಲ ಹೇಗಿರಬಹುದು ಎಂದು ಈಗಾಗಲೇ ಅಂದಾಜಿಸಲು ಅಸಾಧ್ಯವಾಗಿರುವುದರಿಂದ ಎಲ್ಲಿ ಏನಾದೀತು ಎಂದು ಹೇಳುವುದು ಕಷ್ಟಕರವೇ. ಆದರೆ ಸಾಧಾರಣ ಮಳೆಗೆ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಜನರಿಗೆ ತೊಂದರೆಯಾಗುವುದು ನಿಶ್ಚಿತ ಎಂದು ಹೇಳಬಹುದು.

ವಿಪರೀತ ಮಳೆ ಬಂದು ಹಾನಿಯಾದಲ್ಲಿ ಅದನ್ನು ನಿರ್ವಹಿಸಲು ಧರ್ಮಸ್ಥಳದಿಂದ ನಡೆಸಲ್ಪಡುವ ವಿಪತ್ತು ನಿರ್ವಹಣಾ ತಂಡ ‘ಶೌರ್ಯ’ದ ಸ್ವಯಂಸೇವಕರು ಸದಾ ಸಿದ್ಧರಿರುತ್ತಾರೆ.

..............

ಮಳೆಗಾಲ ಆರಂಭವಾಗುವ ಮೊದಲು ಪ್ರಸ್ತುತ ಅಗೆದು ಹಾಕಿರುವ ಸ್ಥಳಗಳಲ್ಲಿ ವಾಹನ ಸವಾರರಿಗೆ ಹಾಗೂ ಪರಿಸರದ ಜನರಿಗೆ ತೊಂದರೆಯಾಗದಂತೆ ಡಾಮರೀಕರಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮುಂದಿನ ಹಂತದ ಕಾಮಗಾರಿಗಳು ಡಾಮರೀಕರಣ ಪೂರ್ಣಗೊಂಡ ಬಳಿಕವೇ ಪ್ರಾರಂಭವಾಗುತ್ತವೆ

-ಶಿವಪ್ರಸಾದ ಅಜಿಲ, ಎ.ಇ.ಇ. ರಾಷ್ಟ್ರೀಯ ಹೆದ್ದಾರಿ ಇಲಾಖೆ

---ಗ್ರಾಹಕರಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ವಿದ್ಯುತ್ ಕಂಬಗಳ ಸ್ಥಳಾಂತರ ನಡೆಯುತ್ತಿದೆ. ಇದೀಗ ಮೊದಲ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿರುವ ಅಗತ್ಯ ಸ್ಥಳಗಳಲ್ಲಿ ವಿದ್ಯುತ್ ಕಂಬ ಸ್ಥಳಾಂತರ ನಡೆಯುತ್ತಿದ್ದು ಇದು ಹಂತ ಹಂತವಾಗಿ ಮುಂದುವರೆಯಲಿದೆ. ವಿದ್ಯುತ್ ಟವರ್‌ಗಳ ಸ್ಥಳಾಂತರ ಮುಂದಿನ ದಿನಗಳಲ್ಲಿ ನಡೆಯಲಿದೆ

- ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ , ಎಇಇ, ಮೆಸ್ಕಾಂ, ಉಜಿರೆ/ಬೆಳ್ತಂಗಡಿ ಉಪ ವಿಭಾಗ

Share this article