ರಾಜ್ಯದ ಕಠಿಣ ಚಾರಣ ತಾಣ ಪುಷ್ಪಗಿರಿ ವಲಯದ ಕುಮಾರಪರ್ವತಕ್ಕೆ ಕಳೆದ ವಾರಾಂತ್ಯ ಪ್ರವಾಸಿಗರ ದಟ್ಟಣೆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಚಾರಣಿಗರಿಗೆ ನಿರ್ಬಂಧ ವಿಧಿಸಲಾಗಿದೆ..
ಮುರಳೀಧರ್ ಶಾಂತಳ್ಳಿ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ರಾಜ್ಯದ ಕಠಿಣ ಚಾರಣ ತಾಣ ಪುಷ್ಪಗಿರಿ ವಲಯದ ಕುಮಾರಪರ್ವತಕ್ಕೆ ಕಳೆದ ವಾರಾಂತ್ಯ ಪ್ರವಾಸಿಗರ ದಟ್ಟಣೆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಚಾರಣಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಚಾರಣಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಇದೇ ಫೆ,1ರಿಂದ ಪ್ರವೇಶಾವಕಾಶ ಬಂದ್ ಮಾಡಿ ಮುಂದಿನ ಅಕ್ಟೋಬರ್‌ನಿಂದ ಆನ್‌ಲೈನ್ ಬುಕಿಂಗ್ ಆರಂಭಿಸಲು ಅರಣ್ಯ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಪ್ರತಿನಿತ್ಯ ಸುಬ್ರಮಣ್ಯ ಮತ್ತು ಪುಷ್ಪಗಿರಿ ವನ್ಯಜೀವಿ ವಲಯದ ಕಡೆಯಿಂದ ತೆರಳಲು ತಲಾ ೩೦೦ ಮಂದಿ ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ನಿರ್ಧಾರಕ್ಕೆ ಕಾರಣ ಏನು?
ಜ.೨೬ರಿಂದ ಸರಣಿ ರಜೆ ಇದ್ದುದರಿಂದ ಕುಕ್ಕೆ ಸುಬ್ರಮಣ್ಯ ವನ್ಯಜೀವಿ ಗೇಟ್‌ನಲ್ಲಿ ಸುಮಾರು ೧೨೦೦ಕ್ಕೂ ಅಧಿಕ ಚಾರಣಿಗರು ಟ್ರಕ್ಕಿಂಗ್‌ಗೆ ಬಂದಿದ್ದದ್ದರು.
ಈ ಹಿನ್ನೆಲೆ ತಪಾಸಣಾ ಗೇಟ್‌ನಲ್ಲಿ ಕೆಲಕಾಲ ನೂಕುನುಗ್ಗಲು ಆದ ಹಿನ್ನಲೆಯಲ್ಲಿ ಚಾರಣಿಗರು ಸೆರೆ ಹಿಡಿದ ವಿಡಿಯೋ ತುಣುಕು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಇದನ್ನು ಗಮನಿಸಿದ ಅರಣ್ಯ ಸಚಿವರು ಮತ್ತು ರಾಜ್ಯ ಸರ್ಕಾರ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿಎಫ್‌ಒ ಅವರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ಕೊಡುವಂತೆ ಆದೇಶಿಸಿದ್ದರು.
ಅರಣ್ಯ ಸಚಿವರ ಆದೇಶದನ್ವಯ ಸೋಮವಾರ ಕುಕ್ಕೆಸುಬ್ರಮಣ್ಯಕ್ಕೆ ತೆರಳಿದ್ದ ಮಡಿಕೇರಿ ವನ್ಯಜೀವಿ ವಿಭಾಗದ ಎಸಿಎಫ್ ಶ್ರೀನಿವಾಸ್ ನಾಯಕ್ ಮತ್ತು ಆರ್‌ಎಫ್‌ಒ ಜೆ.ಅನನ್ಯಕುಮಾರ್, ಡಿಆರ್‌ಎಪ್‌ಒ ಶಶಿ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ಡಿಎಫ್‌ಒ ಭಾಸ್ಕರ್ ಅವರಿಗೆ ವರದಿ ಸಲ್ಲಿಸಿದ್ದಾರೆ. ವರದಿಯನ್ನಾಧರಿಸಿ ಜ.೩೦ರಂದು (ಮಂಗಳವಾರ) ಟ್ರಕ್ಕಿಂಗ್ ಕುರಿತು ನೂತನ ಆದೇಶ ಜಾರಿಯಾಗಲಿದೆ.
ಈ ವರೆಗೆ ಅವಕಾಶ ಹೇಗಿತ್ತು?
ಸಾಮಾನ್ಯವಾಗಿ ಬೇಸಿಗೆ ಹಿನ್ನಲೆಯಲ್ಲಿ ಕುಮಾರಪರ್ವತಕ್ಕೆ ಫೆ. ೧೫ರಿಂದ ಟ್ರಕ್ಕಿಂಗ್ ನಿಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ವನ್ಯಜೀವಿ ಪ್ರದೇಶದಲ್ಲಿ ನೀರಿನ ಸೆಲೆ ಕಡಿಮೆಯಾಗುತ್ತಿರುವುದರಿಂದ ಫೆ.1ರಿಂದಲೇ ಬಂದ್ ಮಾಡಲಾಗುತ್ತಿದೆ.
ಬೇಸಿಗೆ ಮತ್ತು ಮಳೆಗಾಲ ಕಳೆದ ನಂತರ ಅಕ್ಟೋಬರ್‌ನಲ್ಲಿ ಪುನರಾರಂಭಿಸಲಾಗುವುದು. ಆ ಸಂದರ್ಭ ಪುಷ್ಪಗಿರಿ ವನ್ಯಜೀವಿ ಚೆಕ್‌ಪೋಸ್ಟ್‌ನಿಂದ ಪ್ರತಿನಿತ್ಯ ೩೦೦ ಚಾರಣಿಗರಿಗೆ ಮತ್ತು ಕುಕ್ಕೆ ಸುಬ್ರಮಣ್ಯ ಕಡೆಯಿಂದ ೩೦೦ ಚಾರಣಿಗರಿಗೆ ಮಾತ್ರ ಆನ್‌ಲೈನ್ ಬುಕ್ಕಿಂಗ್‌ನ್ನು ಕೊಡಗು ಇಕೊ ಟೂರಿಸಂ ಮುಖಾಂತರ ಮಾಡಿಕೊಂಡು ಚಾರಣ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪುಷ್ಪಗಿರಿ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಜೆ.ಅನನ್ಯಕುಮಾರ್ ತಿಳಿಸಿದ್ದಾರೆ.
ಪುಷ್ಪಗಿರಿ ವನ್ಯಜೀವಿ ಚೆಕ್‌ಪೋಸ್ಟ್‌ನಲ್ಲಿ ಪ್ರತಿನಿತ್ಯ ೧೦೦-೧೫೦ ಚಾರಣಿಗರು ಟ್ರಕ್ಕಿಂಗ್‌ಗೆ ಆಗಮಿಸಿದರೆ, ಕುಕ್ಕೆ ಕಡೆಯಿಂದ ಬೆಂಗಳೂರು ಮತ್ತು ರಾಜ್ಯದ ವಿವಿಧೆಡೆಗಳಿಂದ ಬಸ್‌ನಲ್ಲಿ ಬರಲು ಉತ್ತಮ ವ್ಯವಸ್ಥೆ ಇರುವುದರಿಂದ ಕುಕ್ಕೆಸುಬ್ರಮಣ್ಯ ಮಾರ್ಗವಾಗಿ ಹೆಚ್ಚು ಮಂದಿ ಬರುತ್ತಾರೆ.
ಅಲ್ಲದೆ ಚಾರಣ ಪಥ ಹತ್ತಿರದಲ್ಲೇ ಇರುವುದರಿಂದ ಆ ಕಡೆಯಿಂದ ಬರುವ ಚಾರಣಿಗರ ಸಂಖ್ಯೆ ಪ್ರತಿನಿತ್ಯ ಸಾವಿರಕ್ಕೂ ಅಧಿಕವಾಗುತ್ತಿದೆ. ಹೀಗಾಗಿ ಜ.೨೬ರಂದು ಶುಕ್ರವಾರ ಕುಕ್ಕೆ ಸುಬ್ರಮಣ್ಯ ಚೆಕ್ ಪೋಸ್ಟ್‌ನಲ್ಲಿ ೧೨೦೦ಕ್ಕೂ ಅಧಿಕ ಚಾರಣಿಗರು ಆಗಮಿಸಿದ್ದರು.
ಚೆಕ್‌ಪೋಸ್ಟ್‌ನ ನಿಯಮದಂತೆ ಪ್ರತಿಯೊಬ್ಬರನ್ನು ತಪಾಸಣೆ ಮಾಡುವಾಗ ಚಾರಣಿಗರು ಕೊಂಡೊಯ್ಯುವ ಪ್ಲಾಸ್ಟಿಕ್ ಬ್ಯಾಗ್‌ಗಳು ಮತ್ತು ಬಳಸುವ ನೀರನ ಬಾಟಲ್‌ಗಳು ಸೇರಿದಂತೆ ಪ್ರತಿಯೊಂದ ಪ್ಲಾಸ್ಟಿಕ್ ವಸ್ತುಗಳ ಪಟ್ಟಿ ಮಾಡಿ ಹಣವನ್ನು ಸಂಗ್ರಹಿಸಿ ಪಟ್ಟಿ ನೀಡಲಾಗುತ್ತದೆ.
ಆ ಪಟ್ಟಿಯಲ್ಲಿರುವಂತೆ ಟ್ರಕ್ಕಿಂಗ್ ಮುಗಿದ ನಂತರ ಚಾರಣಿಗರ ಬಳಿಯಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಚೆಕ್‌ಪೋಸ್ಟ್‌ನಲ್ಲಿ ಹಿಂತಿರುಗಿಸಿ ಹಣವನ್ನು ವಾಪಾಸು ಪಡೆಯಬೇಕು. ಹೀಗಾಗಿ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಪಟ್ಟಿ ಮಾಡುವಾಗ ಕನಿಷ್ಠ ೫ ನಿಮಿಷ ಬೇಕಾಗುತ್ತದೆ.
ಆ ಸಂದರ್ಭ ಚಾರಣಿಗರೊಬ್ಬರು ಕ್ಯೂನಲ್ಲಿ ನಿಂತಿರುವ ದೃಶ್ಯವಿರುವ ವಿಡಿಯೊ ವೈರಲ್ ಮಾಡಿದ್ದರು.
ಇದರಿಂದ ಆತಂಕಕ್ಕೊಳಗಾದ ಪರಿಸರವಾದಿಗಳೂ ಕೂಡ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಟ್ರಕ್ಕಿಂಗ್ ನಿಷೇಧಿಸಬೇಕು ಇಲ್ಲವೇ ಆನ್‌ಲೈನ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಮಾಡಿ ಪ್ರತಿನಿತ್ಯ ೨೦೦ ಮಂದಿಗೆ ಮಾತ್ರ ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಪ್ರತಿವರ್ಷ ಫೆ.೧೫ರಿಂದ ಟ್ರಕ್ಕಿಂಗ್ ಬಂದ್ ಮಾಡಲಾಗುತ್ತದೆ. ಆದರೆ ಈ ಬಾರಿ ಪುಷ್ಪಗಿರಿ ವನ್ಯಜೀವಿ ವಲಯದಲ್ಲಿ ನೀರಿಗೆ ಕೊರತೆಯಾಗಿರುವುದರಿಂದ ಫೆ.1ರಿಂದಲೇ ಗೇಟ್‌ಗಳನ್ನು ಬಂದ್ ಮಾಡಲಾಗುತ್ತದೆ.
ಮುಂದೆ ಅಕ್ಟೋಬರ್‌ನಲ್ಲಿ ಆರಂಭಿಸುವಾಗ ರಾಜ್ಯ ಸರ್ಕಾರದ ನೂತನ ಆದೇಶವನ್ನು ಪಾಲಿಸಲಾಗುವುದು.ಫೆ.1ರಿಂದ ಅನ್ವಯವಾಗುವಂತೆ ನೂತನ ನಿಯಮ ಜಾರಿಗೆ ಬರಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಕಠಿಣ ನಿರ್ಧಾರ ಕೈಗೊಳ್ಳಲಿದೆ.
-ಜೆ.ಅನನ್ಯಕುಮಾರ್, ಪುಷ್ಪಗಿರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ.