ಕನ್ನಡಪ್ರಭ ವಾರ್ತೆ ಗುಬ್ಬಿ
ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಾ ಅಗತ್ಯ ಇರುವ ಅನುಕೂಲತೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುಲಾಗುತ್ತಿದೆ ಎಂದು ನಿವೃತ್ತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್. ಭೈರಪ್ಪ ತಿಳಿಸಿದರು.ಭಾನುವಾರ ಪಟ್ಟಣದಲ್ಲಿ ನಿರ್ಮಿಸಿರುವ ನಿವೃತ್ತ ನೌಕರರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತ ನೌಕರರು ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಯಾವುದೇ ಸಮಸ್ಯೆಗಳಿದ್ದರೂ ಸಂಘದ ಗಮನಕ್ಕೆ ತಂದಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿವೃತ್ತ ನೌಕರರ ಬಗ್ಗೆ ಮೃದು ಧೋರಣೆ ಹೊಂದಿದ್ದು ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ಚಿಂತಿಸಲು ಮಾರ್ಚ್ ತಿಂಗಳಲ್ಲಿ ರಾಜ್ಯಮಟ್ಟದ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಬದುಕಿದ್ದಾಗ ಮಾಡುವ ಸಾರ್ಥಕ ಕೆಲಸಗಳು ಚಿರಾಯುವಾಗಿ ಉಳಿದು ಸಮಾಜದಲ್ಲಿ ಮನ್ನಣೆಯನ್ನು ತಂದುಕೊಡುತ್ತವೆ ಎಂದರು.ನಿವೃತ್ತ ಜಿಲ್ಲಾಧಿಕಾರಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಮಾತನಾಡಿ, ನಿವೃತ್ತ ನೌಕರರು ನಿವೃತ್ತಿಯ ನಂತರ ಸಾಹಿತ್ಯ, ಸಂಸ್ಕೃತಿ, ಕೃಷಿ ಇತ್ಯಾದಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಸಾಧ್ಯವಾಗುವಷ್ಟು ಕಾಯಕ ಮಾಡುವುದನ್ನು ರೂಡಿಸಿಕೊಳ್ಳಬೇಕು. ಶರಣರ ಹಾದಿಯಲ್ಲಿ ಸಾಗುತ್ತಾ ಮುಂದಿನ ತಲೆಮಾರಿಗೆ ಮಾರ್ಗದರ್ಶನ ನೀಡಿ ಬದುಕಿನ ಅನುಭವವನ್ನು ಅವರಿಗೆ ಧಾರೆ ಎರೆಯುವಂತೆ ಸಲಹೆ ನೀಡಿದರು.
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಿವೃತ್ತ ನೌಕರರು ಮಂಚೂಣಿಗೆ ನಿಲ್ಲಬೇಕು ಎಂದು ತಿಳಿಸಿದರು.ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ಅನುಭವದ ಕಣಜಗಳಂತಿರುವ ನಿವೃತ್ತಿ ನೌಕರರು ಯುವ ಪೀಳಿಗೆಗೆ ಮಾರ್ಗದರ್ಶಕರಾಗಿರಬೇಕು. ಆಗಾಗ್ಗೆ ಸಭೆಗಳನ್ನು ನಡೆಸಿ ಕುಂದು ಕೊರತೆಗಳನ್ನು ಚರ್ಚಿಸಿ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡಬೇಕಿದೆ. ನಿವೃತ್ತ ನೌಕರರ ಎಲ್ಲ ಕಾರ್ಯಗಳಿಗೂ ಸಹಕರಿಸಿ ನಿರಂತರ ಅವರ ಬೆಂಬಲಕ್ಕೆ ನಿಲ್ಲುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ನಿವೃತ್ತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ. ರಮಾ ಕುಮಾರಿ ಹಾಗೂ ತಾಲೂಕು ಘಟಕದ ಅಧ್ಯಕ್ಷ ಎನ್. ಮಹದೇವಯ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸಿದ್ದರಾಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಶಿವಕುಮಾರ್, ನಿವೃತ್ತ ನೌಕರರ ಸಂಘದ ಆರ್.ಬಿ. ಜಯಣ್ಣ, ಗೋವಿಂದಪ್ಪ, ಅಪ್ಪಾಜಿ ಹಾಗೂ ನಿವೃತ್ತಿ ನೌಕರರ ಸಂಘದ ಎಲ್ಲ ಪದಾಧಿಕಾರಿಗಳು, ಸದಸ್ಯರು ಹಾಗೂ ನಿವೃತ್ತಿ ನೌಕರರು ಹಾಜರಿದ್ದರು.