ಹೊಸಪೇಟೆ: ಅಂಧ, ಅನಾಥ ಮಕ್ಕಳನ್ನು ನನ್ನ ಉಡಿಗೆ ಹಾಕಿ, ನನಗಿನ್ನೇನು ಬೇಡ ಎಂದು ಡಾ. ಪುಟ್ಟರಾಜ ಗವಾಯಿಗಳು ಹೇಳಿದ್ದರು ಎಂದು ಸ್ನಾತಕೋತ್ತರ ವಿದ್ಯಾರ್ಥಿ ಪೂಜಾರಿ ದುರ್ಗೇಶ್ ತಿಳಿಸಿದರು.
ಪುಟ್ಟರಾಜರು ಜನಿಸಿದ ಆರು ತಿಂಗಳಲ್ಲಿ ದೃಷ್ಟಿಹೀನರಾದರು. ಸಂಸ್ಕೃತ, ಹಿಂದಿ, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಸ್ವತಃ ನಾನು ಅಂಧನಾಗಿದ್ದೇನೆ. ನನ್ನಂಥ ಅನೇಕ ಅಂಧರಿಗೆ ಪುಟ್ಟರಾಜರು ಜೀವನ ಕಟ್ಟಿಕೊಟ್ಟಿದ್ದಾರೆ ಎಂದರು.
ಡಾ. ಗಂಗೂಬಾಯಿ ಹಾನಗಲ್ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದ ವಿದ್ಯಾರ್ಥಿ ಸಿ. ದುರ್ಗೇಶ್, ನೂರು ರಾಗಗಳ ಒಡತಿಯಾದ ರಾಗದೇವತೆ ಗಂಗೂಬಾಯಿ ಅವರು ಗುರು ಸವಾಯಿ ಗಂಧರ್ವರಲ್ಲಿ ಸಂಗೀತ ದೀಕ್ಷೆ ಪಡೆದು, ಕಿರಾಣಾ ಘರಾಣೆಯಲ್ಲಿ ಪ್ರಭುತ್ವ ಸಾಧಿಸಿ, ತನ್ನ ಗಂಡು ಧ್ವನಿಯಲ್ಲಿ ಸಂಗೀತ ಹಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ನನ್ನಂಥ ಹಿಂದೂಸ್ತಾನಿ ಸಂಗೀತ ವಿದ್ಯಾರ್ಥಿಗಳಿಗೆ ಕಲಿಯಲು ಸ್ಫೂರ್ತಿ ಸೆಲೆಯಾಗಿದ್ದಾರೆ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ತಂಬೂರಿ ಮೀಟುವ ಮೂಲಕ ಸ್ವರಸಂಚಾರ ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕ ಪಂ. ವಿರೂಪಾಕ್ಷಪ್ಪ ಇಟಗಿ ದುರ್ಗಾ ರಾಗದಲ್ಲಿ ಜೈಮಾತಾ ಭವಾನಿ ಮತ್ತು ಕಮಾಜ್ ರಾಗದಲ್ಲಿ ಒಂದು ಠುಮುರಿ ಗಾಯನ ಹಾಗೂ ಭೈರವಿ ರಾಗದಲ್ಲಿ ನೀ ಎನಗೆ ಗುರುವಾಗಬೇಕೆಂದು ಗಾಯನದ ಮೂಲಕ ಮನಸೆಳೆದರು.