ಕನ್ನಡಪ್ರಭ ವಾರ್ತೆ ದಾವಣಗೆರೆ
ಸ್ವತಃ ಅಂಧರಾಗಿದ್ದರೂ ಸಾವಿರಾರು ಅಂಧ ಮಕ್ಕಳ ಪಾಲಿಗೆ ಬೆಳಕಾದ ಪ್ರಾತಃ ಸ್ಮರಣೀಯರಾದ ಲಿಂಗೈಕ್ಯ ಪುಟ್ಟರಾಜ ಗವಾಯಿಗಳು ಇಡೀ ಜಗತ್ತಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್‌ನ ನಗರ ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಸಿರಿಗೆರೆ ತಿಳಿಸಿದರು.ನಗರದ ಪಿಬಿ ರಸ್ತೆಯ ಹೊಟೆಲ್ ಶ್ರೀಗಂಧ ರೆಸಿಡೆನ್ಸಿಯಲ್ಲಿ ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ, ಗದಗ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕಗಳಿಂದ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಗೀತ, ಸಾಹಿತ್ಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರ, ಮಾನವೀಯ ಕಾರ್ಯಕ್ಕೆ ಪುಟ್ಟರಾಜ ಕೊಡುಗೆ ಅನನ್ಯವಾದುದು ಎಂದರು.
ಪುಟ್ಟರಾಜ ಗವಾಯಿಗಳು ನಡೆದು ಬಂದ ದಾರಿ, ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನಾವ್ಯಾರೂ ಮರೆಯಲು ಸಾಧ್ಯವಿಲ್ಲ. ಸಾವಿರಾರು ಅಂಧ ಮಕ್ಕಳಿಗೆ, ಅನಾಥ ಮಕ್ಕಳಿಗೆ ಬಾಳು ಕೊಟ್ಟು, ಬದುಕಿನ ದಾರಿ ತೋರುವ ಮೂಲಕ ಅಂತಹ ಅಸಹಾಯಕ ಮಕ್ಕಳ ಬಾಳಿಗೆ ನಂದಾದೀಪವಾಗಿ ಬೆಳಕಾದವರು ಪುಟ್ಟರಾಜ ಗವಾಯಿಗಳು ಎಂದು ಸ್ಮರಿಸಿದರು.ದಾವಣಗೆರೆ ಜೊತೆಗೆ ಉತ್ತಮ ಬಾಂಧವ್ಯ:
ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ಸತೀಶ ಧಾರವಾಡ ಮಾತನಾಡಿ, ಪುಟ್ಟರಾಜ ಗವಾಯಿಗಳು ದಾವಣಗೆರೆ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಾಕಷ್ಟು ಕಾಲ ಇಲ್ಲಿ ಬಂದು ಕಾರ್ಯಕ್ರಮ ನಡೆಸಿಕೊಟ್ಟವರು. ಪುಟ್ಟರಾಜ ಗವಾಯಿಗಳ ಶಿಷ್ಯಂದಿರು, ಭಕ್ತಾದಿಗಳು ಇಂದಿಗೂ ಇಲ್ಲಿದ್ದಾರೆ. ಗವಾಯಿಗಳ ಇಚ್ಛೆಯಂತೆ ಇಲ್ಲಿನ ಸದ್ಭಕ್ತರು ಶ್ರೀ ವೀರೇಶ್ವರ ಪುಣ್ಯಾಶ್ರಮ ನಿರ್ಮಿಸುವ ಮೂಲಕ ಪುಟ್ಟರಾಜರು ತೋರಿದ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.ಸಮಿತಿ ಜಿಲ್ಲಾಧ್ಯಕ್ಷ ಪಿ.ಬಿ.ವಿನಾಯಕ ಮಾತನಾಡಿ, ಪುಟ್ಟರಾಜ ಗವಾಯಿಗಳ ಯಾವುದೇ ಕಾರ್ಯಕ್ರಮ ನಡೆಸುವ ವೇಳೆ ಗುರುಗಳು ಆ ಶಕ್ತಿಯ ನೀಡಿ, ನಮ್ಮಿಂದ ಸೇವೆ ಮಾಡುವಂತೆ ಪ್ರೇರೇಪಿಸುತ್ತಾರೆ. ನಮ್ಮೆಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ, ಅರ್ಥಪೂರ್ಣವಾಗಿ ನಡೆದಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು,
ಸಮಿತಿ ಜಿಲ್ಲಾ ಅಧ್ಯಕ್ಷ ಪಿ.ಬಿ.ವಿನಾಯಕ ಅಧ್ಯಕ್ಷತೆ ವಹಿಸಿದ್ದರು. ಮಮತಾ ನಾಗರಾಜ, ರೇವಣಸಿದ್ಧಪ್ಪ, ವನಜ ಮಹಾಲಿಂಗಯ್ಯ, ವಿಕ್ರಂ ಜೋಶಿ, ಎಸ್.ಆರ್. ಅಭಿಷೇ ಕ, ಶ್ರೀನಿವಾಸ ಕುಂದೂರು, ಪುಷ್ಪಾ, ಎನ್ ಎಚ್, ಹಾಲೇಶ, ಅನುಷಾ.ಮಂಜುಳಾ, ಮಂಜುಳಾ ಹುಂಡೇಕರ್, ಪುಷ್ಪಾ ವೀರೇಶ್, ಶಾಂತಾ ಶಿವಶಂಕರ, ಲತಾ ಕಪಾಲಿ, ರಾಜಶ್ರೀ, ಸುಜಾತಾ, ಜ್ಯೋತಿ, ಸುಭಾಷಿನಿ, ಪೂರ್ಣಿಮಾ, ಚೈತ್ರ, ಮಮತಾ, ಸುಮಾ, ವಿದ್ಯಾ, ಶೋಭಾ ಇತರರಿದ್ದರು. ಶಾಸ್ತ್ರೀಯ ಸಂಗೀತವನ್ನು ಆನಂದ ಪಾಟೀಲ್ ಮತ್ತು ಸಂಗಡಿಗರು, ಉಪಾಧ್ಯಕ್ಷ ರೇವಣಸಿದ್ದಪ್ಪ ಮತ್ತು ಶಿಷ್ಯಂದಿರು ಹಾಗೂ ನಂದೀಶ್ ರಿಂದ ಕೊಳವು ವಾದನ ನಡೆಯಿತು. ಇದೇ ವೇಳೆ ಜೂನಿಯರ್ ಪರೀಕ್ಷೆ ಉತ್ತೀರ್ಣರಿಗೆ ಸೌಮ್ಯಾ ಸತೀಶ ಬಹುಮಾನ ವಿತರಿಸಿದರು.