ಕನ್ನಡಪ್ರಭ ವಾರ್ತೆ ಪುತ್ತೂರುಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚತುರ್ಥ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ಕಾರ್ಯಕ್ರಮ ಗುರುವಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಪುತ್ತೂರು ಪೌರ ಸನ್ಮಾನ ಸಮಿತಿಯಿಂದ ಪುತ್ತಿಗೆ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು ಪೌರ ಸನ್ಮಾನ ಸ್ವೀಕರಿಸಿ, ಭಗವಂತನ ಅನುಗ್ರಹಕ್ಕಾಗಿ ನಾವೆಲ್ಲ ದೇವರ ಪೂಜೆ ಸೇವೆ ಮಾಡಬೇಕು. ಆದರೆ ಭಗದ್ಗೀತೆಯ ಮೂಲಕ ನಾವು ಗರಿಷ್ಟ ಪ್ರಮಾಣದ ಅನುಗ್ರಹ ಪಡೆಯಬಹುದು. ಶ್ರೀ ಕೃಷ್ಣನ ಅನುಗ್ರಹ ಬೇಕಾದರೆ ಶ್ರೀ ಕೃಷ್ಣನಿಗೆ ಪ್ರೀತಿಯಾಗಬೇಕು. ಕೃಷ್ಣನಿಗೆ ಪ್ರೀತಿಯಾಗಬೇಕಾದರೆ ಗೀತೆಯನ್ನು ಪಠಣ ಮಾಡಬೇಕು ಎಂದರು.
ಬಹಳ ಜನರು ನನ್ನ ಪ್ರೀತಿಗಾಗಿ ಪ್ರಯತ್ನಿಸುತ್ತಾರೋ ಆ ಎಲ್ಲ ಮಾರ್ಗಗಳಿಗಿಂತಲೂ ಶ್ರೇಷ್ಠವಾದ ಮಾರ್ಗ ನನ್ನ ಗೀತೆಯನ್ನು ಯಾರು ಓದುತ್ತಾರೋ ಅವರಷ್ಟು ಇಷ್ಟರಾಗುವವರು ನನಗೆ ಬೇರೆ ಯಾರು ಇಲ್ಲ. ಅವನಿಗೆ ನಾನು ಸಂಪೂರ್ಣ ಅನುಗ್ರಹ ಮಾಡುತ್ತೇನೆ ಎಂದು ಶ್ರೀ ಕೃಷ್ಣನೇ ಗೀತೆಯ ಕೊನೆಯಲ್ಲಿ ಘೋಷಣೆ ಮಾಡಿದ್ದಾನೆ. ಹಾಗಾಗಿ ನಾವೆಲ್ಲ ಶ್ರೀಕೃಷ್ಣ ಅನುಗ್ರಹಕ್ಕಾಗಿ ಮಾಡುವ ಸೇವೆ ಪರಿಪೂರ್ಣವಾಗಿ ದೊರಕುವುದು ಭಗದ್ಗೀತೆಯ ಮೂಲಕ ಎಂದು ಅರ್ಥೈಸಬೇಕು ಎಂದು ಹೇಳಿದರು.ಈ ನಿಟ್ಟಿನಲ್ಲಿ ನಾವು ನಮ್ಮ ೪ನೇ ಪರ್ಯಾಯವನ್ನು ಭಗದ್ಗೀತಾ ಪರ್ಯಾಯ ಎಂದು ನಾಮಕರಣ ಮಾಡಿದ್ದೇವೆ. ಯಾರು ಗೀತೆಯನ್ನು ಪಠಿಸುತ್ತಾರೋ ಅವರೆಲ್ಲರು ಶ್ರೀ ಕೃಷ್ಣನ ವಿಶೇಷ ಅನುಗ್ರಹ ಪಡೆಯುವಲ್ಲಿ ಸಂಶಯವಿಲ್ಲ. ಅದಕ್ಕಾಗಿ ನಮ್ಮ ಪರ್ಯಾಯ ಇಡಿ ಜಗತ್ತಿಗೆ ಕೃಷ್ಣನ ಅನುಗ್ರಹ ದೊರಕುವಂತೆ ಮಾಡಬೇಕೆಂಬ ಉದ್ದೇಶದಿಂದ ಇಡಿ ಜಗತ್ತಿಗೆ ಗೀತೆಯ ಮೂಲಕ ಅನುಗ್ರಹವಾಗಲಿ ಎಂದು ಹೇಳಿದರು.
ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಶಾಸಕ ಸಂಜೀವ ಮಠಂದೂರು, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಚ್. ಮಾಧವ ಭಟ್ ಅಭಿವಂದನಾ ಭಾಷಣ ಮಾಡಿದರು.
ಪರ್ಯಾಯ ಪೀಠ ಏರಲಿರುವ ಶ್ರೀ ಡಾ.ಸುಗುಣೇಂದ್ರ ತೀರ್ಥರನ್ನು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಪೌರ ಸನ್ಮಾನ ಸಮಿತಿಯಿಂದ ಪೇಟ, ಮಾಲೆ ಮತ್ತು ಸನ್ಮಾನ ಪತ್ರ ಫಲವಸ್ತು ನೀಡಿ ಗೌರವಿಸಲಾಯಿತು. ಎ.ಅವಿನಾಶ್ ಕೊಡೆಂಕಿರಿ ಅವರು ಸನ್ಮಾನ ಪತ್ರ ವಾಚಿಸಿದರು. ಸನ್ಮಾನದಲ್ಲಿ ಸುಮಾರು ೧.೭೫ ಲಕ್ಷ ರು. ನಿಧಿ ಸಮರ್ಪಣೆ ಮಾಡಲಾಯಿತು.
ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ವಂದಿಸಿದರು. ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.