ಕನ್ನಡಪ್ರಭ ವಾರ್ತೆ ಪುತ್ತೂರು
ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವ ಜಾಗರಣೆ, ಜಾತ್ರೆ ಸಹಿತವಾಗಿ ಪೂರ್ವಶಿಷ್ಟ ಪದ್ಧತಿಯಂತೆ ಮಹಾರುದ್ರಯಾಗ, ಶತರುದ್ರಭಿಷೇಕ, ಬಿಲ್ವಾರ್ಚನೆ ಸೇವೆ ನಡೆಯಿತು.ದೇವಳದ ತುಳಸಿ ಕಟ್ಟೆ ಬಳಿ ಭಕ್ತರಿಂದ ದೇವರಿಗೆ ಬಿಲ್ವಾರ್ಚಣೆ ಸಂಕಲ್ಪ ಕೈಗೊಳ್ಳಲಾಗಿತ್ತು. ಬಳಿಕ ಹವನ ಅಭಿಷೇಕ, ಪೂಜಾದಿಗಳು ಜರುಗಿ ರಾತ್ರಿ ವೇಳೆಗೆ ದೇವರ ಉತ್ಸವದ ಬಲಿ ಹೊರಟು, ತಂತ್ರ ಸುತ್ತು ಜರುಗಿ ಹೊರಾಂಗಣದಲ್ಲಿ ಉಡಕೆ, ಚಂಡೆ, ವಾದ್ಯ, ಸರ್ವವಾದ್ಯ ಸುತ್ತುಗಳ ನಂತರ ಕಟ್ಟೆಪೂಜೆ, ಪಲ್ಲಕಿ ಉತ್ಸವ, ಅಷ್ಟಾವಧಾನ ಸೇವೆ, ಚಂದ್ರಮಂಡಲ ರಥೋತ್ಸವ, ತೆಪ್ಪೋತ್ಸವದೊಂದಿಗೆ ಉತ್ಸವ ನಡೆಯಿತು. ತಡರಾತ್ರಿಯಲ್ಲಿ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಉತ್ಸವ ಬಲಿ ನಡೆಯಿತು.ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನೇತೃತ್ವದಲ್ಲಿ ದೇವಳದ ಸಹಯೋಗದೊಂದಿಗೆ ಬೆಳಗ್ಗೆ ದೇವಳ ಗದ್ದೆಯಲ್ಲಿರುವ ಶಿವನ ವಿಗ್ರಹದ ಬಳಿ ಒಂದು ಸುತ್ತು ಬಂದು ಬಳಿಕ ದೇವಳದ ಎದುರಿನ ಅಂಗಣದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ದೇವರ ಉತ್ಸವ ಹೊರಾಂಗಣಕ್ಕೆ ಬಂದಾಗ ಭಜನಾ ಕಾರ್ಯಕ್ರಮವನ್ನು ದೇವಳದ ಒಳಾಂಗಣಕ್ಕೆ ಸ್ಥಳಾಂತರಿಸಲಾಯಿತು. ಬೆಳಗ್ಗಿನ ತನಕ ಜಾಗರಣೆ, ಭಜನಾ ಕಾರ್ಯಕ್ರಮ ನಡೆಯಿತು.ಲೋಕಕಲ್ಯಾಣಾರ್ಥವಾಗಿ ಫೆ.೨೬ರಿಂದ ಆರಂಭಗೊಂಡ ಮಹಾರುದ್ರ ಯಾಗ, ಶತರುದ್ರವು ಪ್ರತಿ ದಿನ ಬೆಳಗ್ಗೆ ನಡೆಯುತ್ತಿದ್ದು, ಸಂಜೆ ಅಷ್ಟಾವಧಾನ ಸೇವೆ ನಡೆಯುತ್ತಿತ್ತು. ಶುಕ್ರವಾರ ಶಿವರಾತ್ರಿಯ ಉತ್ಸವದಲ್ಲಿ ಮಹಾರುದ್ರಯಾಗದೊಂದಿಗೆ ಸಂಪನ್ನಗೊಂಡಿತು.----
ಪುನರೂರು ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮೂಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ಆಯೋಜಿಸಲಾದ ಅಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ಕ್ಷೇತ್ರದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್ ಚಾಲನೆ ನೀಡಿದರು.ದೇವಸ್ಥಾನದ ಅರ್ಚಕ ಶಶಾಂಕ್ ಮುಚ್ಚಿಂತ್ತಾಯ, ಶತ ರುದ್ರಾಭಿಷೇಕ, ರುದ್ರ ಪಾರಾಯಣ ನಡೆಸಿಕೊಟ್ಟರು.ಈ ಸಂದರ್ಭ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ರಾಮಮೂರ್ತಿ ರಾವ್, ಪಟೇಲ್ ವಿಶ್ವನಾಥ್ ರಾವ್, ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುಧಾಕರ್ ರಾವ್, ರಾಮ ಭಟ್, ದೇವಪ್ರಸಾದ್ ಪುನರೂರು, ಕೃಷ್ಣ ಮೂರ್ತಿ ರಾವ್, ಗೋಪಿನಾಥ್ ರಾವ್, ರಾಘವೇಂದ್ರ ರಾವ್ ಕೆರೆಕಾಡು, ರಮೇಶ್ ರಾವ್, ರವಿ ಶೆಟ್ಟಿ ಪುನರೂರು ಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.