ಪುತ್ತೂರು ಶ್ರೀ ಮಹಾಲೀಗೇಶ್ವರ ದೇವರ ವಾರ್ಷಿಕ ಜಾತ್ರೆ ಧ್ವಜಾರೋಹಣ

KannadaprabhaNewsNetwork | Updated : Apr 11 2024, 12:54 AM IST

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿವಾರ್ಷಿಕ ಜಾತ್ರೋತ್ಸವ ಪ್ರಯಕ್ತ ಬುಧವಾರ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬೆಳಗ್ಗೆ ಶ್ರೀ ದೇವಾಲಯದಲ್ಲಿ ಪ್ರಾರ್ಥನೆ ನಡೆದು ಅನಂತರ ದೇವರ ಬಲಿ ಉತ್ಸವದ ಬಳಿಕ ಧ್ವಜಸ್ತಂಭ ಪೂಜೆ ನಡೆದು ಧ್ವಜಾರೋಹಣ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬುಧವಾರ ಬೆಳಗ್ಗೆ ೯.೨೫ರ ಅನಂತರದ ವೃಷಭ ಲಗ್ನ ಸುಮುಹೂರ್ತದಲ್ಲಿ ಸಾವಿರಾರು ಮಂದಿ ಭಕ್ತರ ಘೋಷದೊಂದಿಗೆ ದೇವಳದ ವಠಾರದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬೆಳಗ್ಗೆ ಶ್ರೀ ದೇವಾಲಯದಲ್ಲಿ ಪ್ರಾರ್ಥನೆ ನಡೆದು ಅನಂತರ ದೇವರ ಬಲಿ ಉತ್ಸವದ ಬಳಿಕ ಧ್ವಜಸ್ತಂಭ ಪೂಜೆ ನಡೆದು ಧ್ವಜಾರೋಹಣ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ. ಎಸ್. ಭಟ್ ಮತ್ತು ವಸಂತ ಕೆದಿಲಾಯ ಮೊದಲಾದವರು ವೈದಿಕ ಕಾರ್ಯಕ್ರಮ ನೆರವೇರಿಸಿದರು.

ದೇವಾಲಯದ ಎದುರು ಭಾಗದ ಕಟ್ಟೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಭಗವಧ್ವಜಾರೋಹಣ ನೆರವೇರಿಸಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಹಾಗೂ ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಮಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್. ಕೆ. ಜಗನ್ನಿವಾಸ ರಾವ್, ವಾಸ್ತು ಎಂಜಿನಿಯರ್ ಪಿ. ಜಿ. ಜಗನ್ನಿವಾಸ್ ರಾವ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.

ಜಾತ್ರೆಯ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಅಡಕೆ, ಸೀಯಾಳ, ಬಾಳೆಗೊನೆ, ಕಬ್ಬಿನ ಜಲ್ಲೆ, ಮಾವಿನ ಕಾಯಿಯ ಗೊಂಚಲು, ಹಲಸಿನ ಕಾಯಿ, ಹಿಂಗಾರ ಮೊದಲಾದ ಸುವಸ್ತುಗಳನ್ನು ಬುಧವಾರ ಬೆಳಗ್ಗಿನಿಂದಲೇ ದೇವಾಲಯಕ್ಕೆ ತಂದೊಪ್ಪಿಸಿದ್ದಾರೆ. ಧ್ವಜಾರೋಹಣದ ಬಳಿಕ ಸುವಸ್ತುಗಳನ್ನು ಧ್ವಜಸ್ಥಂಭದ ಕಟ್ಟೆಗೆ ಸುತ್ತಲೂ ಆಕರ್ಷಕವಾಗಿ ಕಟ್ಟಲಾಯಿತು.

ರಾತ್ರಿ ಅಂಕುರಾರ್ಪಣೆಯ ಬಳಿಕ ಶ್ರೀ ದೇವರ ಬಲಿ ಉತ್ಸವ, ಬಳಿಕ ಪೇಟೆ ಸವಾರಿಯು ನಗರದ ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ತನಕ ತೆರಳಿ ತಡರಾತ್ರಿ ದೇವಾಲಯಕ್ಕೆ ತಲುಪಿತು.

Share this article