ಪುತ್ತೂರು ದೇವಳ ಅಭಿವೃದ್ಧಿ ಸಮಾಲೋಚನೆ: ಭಕ್ತರ ಸಭೆ

KannadaprabhaNewsNetwork |  
Published : Nov 04, 2025, 04:00 AM IST
ಫೋಟೋ: ೨ಪಿಟಿಆರ್-ಟೆಂಪಲ್ಶ್ರೀ ಮಹಾಲಿಂಗೇಶ್ವರ ದೇವಳದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಲು ಭಕ್ತಾಧಿಗಳ ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಬಗ್ಗೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಕೆಲವೊಂದು ಮಾರ್ಪಾಡುಗಳನ್ನು ಮಾಡುವ ಬಗ್ಗೆ ಹಾಗೂ ದೇವಳದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಭಕ್ತರ ಸಭೆಯು ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಬಗ್ಗೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಕೆಲವೊಂದು ಮಾರ್ಪಾಡುಗಳನ್ನು ಮಾಡುವ ಬಗ್ಗೆ ಹಾಗೂ ದೇವಳದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಭಕ್ತರ ಸಭೆಯು ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಂಜಿಗುಡ್ಡೆ ಈಶ್ವರ ಭಟ್, ನಮ್ಮ ಸಮಿತಿ ಬಂದ ಬಳಿಕ ಆರಂಭದಲ್ಲಿ ಎಲ್‌ಇಡಿ ವ್ಯವಸ್ಥೆ, ಪರಮಾನ್ನ ಪ್ರಸಾದ ವಿತರಣೆ, ೬೦ ಕೋಟಿ ರು. ಮೌಲ್ಯದ ದೇವಾಲಯದ ಜಾಗ ಮರು ಸ್ವಾಧೀನ ಮಾಡಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ೨ ಲಕ್ಷ ಮಂದಿಗೆ ಅನ್ನದಾನ, ರಕ್ತೇಶ್ವರಿಯನ್ನು ದೇವಾಲಯದ ಒಳಗೆ ದೀಪವಿರಿಸಿ ಸೇರಿಸಲಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಭಕ್ತರ ಮೂಲಕ ಅನ್ನದಾನಕ್ಕೆ ಸುಮಾರು ೫೦೦ ಕ್ವಿಂಟಾಲ್ ಅಕ್ಕಿ ಸಂಗ್ರಹ ವ್ಯವಸ್ಥೆಯಾಗಿದೆ. ೧೨ ವರ್ಷಗಳ ಬಳಿಕ ಇದೀಗ ಭಕ್ತರ ಸಹಕಾರದೊಂದಿಗೆ ಬ್ರಹ್ಮಕಲಶೋತ್ಸವದ ಉದ್ದೇಶ ಹೊಂದಲಾಗಿದೆ. ಈಗಾಗಲೇ ಸಮಿತಿಗೆ ೩೫೦೦ ಸಾವಿರ ಸದಸ್ಯರನ್ನು ಮಾಡಲಾಗಿದ್ದು, ೧೫ ಸಾವಿರ ಸದಸ್ಯರ ಸಮಿತಿಯ ನಿರೀಕ್ಷೆಯಿದೆ ಎಂದರು.

ವೆಂಕಟ್ರಾಜ್ ಅವರು ದೇವಾಲಯ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಬಗ್ಗೆ ಎಲ್‌ಇಡಿ ಪರದೆಯಲ್ಲಿ ಪ್ರಸ್ತುತಪಡಿಸಿದರು.ಸಭೆಯಲ್ಲಿ ದೇವಾಲಯದ ಎದುರಿನ ಕಲ್ಯಾಣ ಮಂಟಪವನ್ನು ಉಳಿಸುವ, ತೆಗೆಸುವ ವಿಚಾರದಲ್ಲಿ ವ್ಯಾಪಕ ಚರ್ಚೆ ನಡೆಯಿತು.

ಮಾಜಿ ಮೊಕ್ತೇಸರರಾದ ನ್ಯಾಯವಾದಿ ಎನ್.ಕೆ. ಜಗನ್ನಿವಾಸ್ ರಾವ್ ಮಾತನಾಡಿ, ಅಭಿವೃದ್ಧಿ ಹೇಗೆ ಮಾಡಬೇಕು ಎನ್ನುವುದು ಮುಖ್ಯವಾಗುತ್ತದೆ. ಪುತ್ತೂರಿನ ಜಾತ್ರೋತ್ಸವದಲ್ಲಿ ೧ ಲಕ್ಷಕ್ಕೂ ಮಿಕ್ಕಿ ಮಂದಿ ಸೇರುತ್ತಾರೆ. ಹಿಂದೆ ಕಂಬಳ ನಡೆಯುವ ಜಾಗ ಮಾತ್ರ ದೇವಾಲಯದ ಹೆಸರಿಗೆ ಇತ್ತು. ಅನಂತರ ಖಾಸಗಿಯವರಲ್ಲಿದ್ದ ದೇವಾಲಯದ ಎದುರಿನ ಗದ್ದೆ ಜಾಗವನ್ನು ಸ್ವಾಧೀನ ಮಾಡಲಾಗಿದೆ. ರಥಬೀದಿ, ಕಾಂಪ್ಲೆಕ್ಸ್ ಉದ್ದೇಶದಿಂದ ಖರೀದಿ ಮಾಡಲಾಗಿದೆ. ಎದುರು ಭಾಗದಲ್ಲಿ ಹೆಚ್ಚಿನ ಕಟ್ಟಡಗಳನ್ನು ಕಟ್ಟದೆ ಭಕ್ತರಿಗೆ ನಿಂತು ಜಾತ್ರೆ ನೋಡಲು ಪೂರಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಅಶೋಕ್ ರೈ ಮಾತನಾಡಿ, ದೇವಾಲಯದ ಎದುರು ಗದ್ದೆ ಭಾಗದಲ್ಲಿ ಯಾವುದೇ ಬಿಲ್ಡಿಂಗ್ ನಿರ್ಮಾಣದ ಯೋಜನೆ ಇಲ್ಲ. ಅಯ್ಯಪ್ಪ ಮತ್ತು ನಾಗನ ಗುಡಿ ಹಾಗೂ ಸಭಾಂಗಣವನ್ನು ತೆಗೆಯುವಂತೆ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ಹಿಂದಿನವರು ಮಾಡಿದ್ದರಲ್ಲಿ ತಪ್ಪು ಹುಡುಕುವ ಕೆಲಸವನ್ನು ನಾವು ಮಾಡುವುದಿಲ್ಲ. ನಮಗೆ ಕಲ್ಯಾಣ ಮಂಟಪವನ್ನು ತೆಗೆಯುವ ಹಠವೂ ಇಲ್ಲ. ಇನ್ನೊಮ್ಮೆ ಅಷ್ಟಮಂಗಲ ಪ್ರಶ್ನೆ ಇಟ್ಟು ಈ ಕುರಿತು ವಿಚಾರ ಮಾಡುವುದಾಗಿ ಹೇಳಿದರು.ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಹಿಂದೆ ದೇವರು ನೆಲಸ್ಪರ್ಶ ಆಗಿ ದೇವರ ಸೂಚನೆಯೆಂತೆ ಅಷ್ಟಮಂಗಳ ಪ್ರಶ್ನೆ ಇರಿಸಲಾಗಿತ್ತು. ಯಾರಾದರೂ ಓರ್ವ ಜ್ಯೋತಿಷ್ಯರನ್ನು ಪರ್ಮನೆಂಟ್ ಆಗಿ ನೇಮಿಸಬೇಕು. ಆಗ ಪ್ರತ್ಯೇಕ ಅಭಿಪ್ರಾಯಗಳು ಬರುವುದು ತಪ್ಪುತ್ತದೆ. ಜನರ ಭಾವನೆಗಳನ್ನು ಗೌರವಿಸಬೇಕು. ಕಲ್ಯಾಣ ಮಂಟಪ ಕಟ್ಟಡದ ಮೇಲಿನ ಗೋಡೆಯನ್ನು ತೆಗೆದು ಗ್ಯಾಲರಿ ರೂಪದಲ್ಲಿ ಉಳಿಸಿಕೊಳ್ಳುವ ಬಗ್ಗೆಯೂ ಯೋಚಿಸಬಹುದು ಎಂದರು.ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಬಾಲಚಂದ್ರ ಸೊರಕೆ ಮಾತನಾಡಿ, ದೇವಾಲಯದ ಜಾಗಕ್ಕೆ ಸುತ್ತು ತಡೆಬೇಲಿ ಆಗಬೇಕು. ದೇವಾಲಯದ ಹೆಸರಿಗೆ ಜಾಗ ಆಗಲು ಶ್ರಮ ವಹಿಸಿದ ದಿ. ಕೋಚಣ್ಣ ರೈ ಹೆಸರನ್ನು ಉಲ್ಲೇಖಿಸುವ ಕೆಲಸ ಆಗಬೇಕು. ಅಯ್ಯಪ್ಪ ಮಾಲಾಧಾರಿಗಳು ಉಳಿಯಲು, ಸ್ನಾನ ಮಾಡಲು, ಸ್ವಾಮೀಜಿಗಳು ಆಗಮಿಸಿದ ಸಂದರ್ಭದಲ್ಲಿ ಉಳಿಯಲು ವ್ಯವಸ್ಥೆ ಆಗಬೇಕು ಎಂದರು.

ಕೃಷ್ಣಪ್ರಸಾದ್ ಆಳ್ವ, ಪ್ರೊ. ಎ.ವಿ. ನಾರಾಯಣ ಸೇರಿದಂತೆ ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು.ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ್ ಬೆಡೇಕರ್, ವಸಂತ ಕದಿಲಾಯ, ದಿನೇಶ್ ಪಿ.ವಿ., ನಳಿನಿ ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಜೀರ್ಣೋದ್ಧಾರ ಸಮಿತಿಯ ಕೇಶವ ಪ್ರಸಾದ್ ಮುಳಿಯ, ಪ್ರಸಾದ್ ಕೌಶಲ್ ಶೆಟ್ಟಿ, ಶಿವಪ್ರಸಾದ್, ರಾಜರಾಮ ಶೆಟ್ಟಿ ಕೋಲ್ಪೆ, ಅಮರನಾಥ ಗೌಡ, ರಾಮದಾಸ ಗೌಡ, ಶಿವರಾಮ ಆಳ್ವ ವೇದಿಕೆಯಲ್ಲಿದ್ದರು.

ವೈಷ್ಣವಿ ಎಂ.ಆರ್. ಪ್ರಾರ್ಥಿಸಿದರು. ವರುಣ್ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ