- ನಂದಗುಡಿಯಲ್ಲಿ ಕಾಲೇಜು ಕೊಠಡಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊಸಕೋಟೆಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ಕಲ್ಪಿಸುವುದು ನಮ್ಮ ಉದ್ದೇಶ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ನಂದಗುಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯುನೈಟೆಡ್ ವೇ ಕಂಪನಿ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಲಾದ ಕಾಲೇಜು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸಿಎಸ್‌ಆರ್ ಅನುದಾನದಲ್ಲಿ ತಾಲೂಕಿನ ಸಾಕಷ್ಟು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಮುಖವಾಗಿ ತಾಲೂಕಿನಲ್ಲಿ ಪ್ರಥಮವಾಗಿ ನಂದಗುಡಿಗೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿಸಿದ್ದು, ಕಾಲೇಜಿನವರೆಗೆ ಶಿಕ್ಷಣ ದೊರೆಯಲಿದೆ. ಆದ್ದರಿಂದಲೇ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಿ ಉದ್ಘಾಟಿಸಲಾಗಿದೆ. ಉತ್ತಮ ಫಲಿತಾಂಶ ದೊರಕಿಸಿಕೊಡುವ ಮೂಲಕ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಯುನೈಟೆಡ್ ವೇ ಕಂಪನಿ ವ್ಯವಸ್ಥಾಪಕ ಭಾಗ್ಯ ಕುಮಾರ್ ಮಾತನಾಡಿ, ರಾಜ್ಯದಲ್ಲಿ 200 ಶಾಲೆಗಳನ್ನು ಸಿಎಸ್‌ಆರ್ ಅನುದಾನದಡಿ ಅಭಿವೃದ್ಧಿ ಪಡಿಸಲಾಗಿದೆ. ಪ್ರಮುಖವಾಗಿ ನಂದಗುಡಿಯ ಕೆಪಿಎಸ್ ಪದವಿ ಪೂರ್ವ ಕಾಲೇಜು ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳು ಹಾಗೂ ಕಲಿಕಾ ಸಾಮಾಗ್ರಿಗಳನ್ನು ಒದಗಿಸಿಕೊಂಡಿರುವ ಏಕೈಕ ಕಾಲೇಜಾಗಿದೆ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್ ಗೌಡ, ಮಾಜಿ ತಾಪಂ ಸದಸ್ಯರಾದ ಕೆಂಚೇಗೌಡ, ಬೀರಪ್ಪ, ಯುನೈಟೆಡ್ ವೇ ಕಂಪನಿ ಉಪಾಧ್ಯಕ್ಷ ವೆಂಕಟ ಸುಧಾಕರ್, ವ್ಯವಸ್ಥಾಪಕ ಭಾಗ್ಯ ಕುಮಾರ್, ದಾನಿಗಳಾದ ಮಲಿಯಪ್ಪನಹಳ್ಳಿ ಮಹದೇವಪ್ಪ, ಎಸ್‌ಎಫ್‌ಸಿಎಸ್ ನಿರ್ದೇಶಕ ರವೀಂದ್ರ, ಎಪಿಎಂಎಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ಮುಖಂಡ ಮಂದೀಪ್ ಗೌಡ, ರಮೇಶ್ ಸೇರಿ ಹಲವಾರು ಗಣ್ಯರು ಹಾಜರಿದ್ದರು.